ಸಿಇಟಿ ಪರೀಕ್ಷಾ ಕೇಂದ್ರದ ಘಟನೆ ಖಂಡಿಸಿದ ಸ್ವರ್ಣವಲ್ಲೀ ಶ್ರೀಗಳು
ಯಲ್ಲಾಪುರ: ಬ್ರಾಹ್ಮಣರು ಮಾತ್ರ ಜನಿವಾರ ಧರಿಸುವುದಿಲ್ಲ. ಕ್ಷತ್ರಿಯ, ವೈಶ್ಯ ಸೇರಿದಂತೆ ಹಲವು ಸಮುದಾಯದವರು ಜನಿವಾರ ಧರಿಸುತ್ತಾರೆ. ಬ್ರಾಹ್ಮಣರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಇತರ ಸಮುದಾಯದವರೇ ಧರಿಸುತ್ತಿದ್ದು, ಜನಿವಾರ ಕತ್ತರಿಸುವ ಕ್ರಮ ಸರಿಯಲ್ಲ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಖಿಲ ಹವ್ಯಕ ಮಹಾಸಭಾ ಆಶ್ರಯದಲ್ಲಿ ಯಲ್ಲಾಪುರದ ಕಾರ್ಮಿಕ ಭವನದಲ್ಲಿ ನಡೆದ ‘ಸಂಸ್ಕಾರೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜನಿವಾರ ತುಂಡರಿಸಬಹುದು. ಆದರೆ ಸಂಸ್ಕಾರವನ್ನು ತುಂಡರಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.
ಸಂಸ್ಕಾರದಲ್ಲಿಯೇ ಬ್ರಾಹ್ಮಣರ ಶ್ರೇಷ್ಠತೆಯಿದೆ. ಹುಟ್ಟುವ ಮೊದಲೇ ಬೆಳೆದು ಬಂದ ಸಂಸ್ಕಾರವನ್ನು ಯಾರೂ ತುಂಡರಿಸಲು ಸಾಧ್ಯವಿಲ್ಲ. ಈಚೆಗೆ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ್ದಾರೆ. ಆದರೆ ಜನಿವಾರವನ್ನು ನಾಶಪಡಿಸಿದ ಮಾತ್ರಕ್ಕೆ ಸಂಸ್ಕಾರ ಹೋಗುವುದಿಲ್ಲ. ಅದು ಜೀವಕ್ಕೆ ಸಂಬಂಧಿಸಿದ ವಿಚಾರ. ಒಂದು ಜನಿವಾರ ಕತ್ತರಿಸಿದರೆ ಮತ್ತೊಂದು ಧರಿಸಲು ಅವಕಾಶವಿದೆ ಎಂದು ಹೇಳಿದರು.
ಜನಿವಾರ ಕತ್ತರಿಸುವ ಮೂಲಕ ಅಪಮಾನ ಮಾಡಲು ಯತ್ನಿಸಿದ್ದರೆ ಅದು ಕೇವಲ ಬ್ರಾಹ್ಮಣರಿಗೆ ಮಾತ್ರವಲ್ಲ, ಜನಿವಾರ ಧರಿಸುವ ಎಲ್ಲ ಸಮುದಾಯಗಳಿಗೂ ಮಾಡಿದ ಅಪಮಾನದಂತಾಗುತ್ತದೆ ಎಂದು ಶ್ರೀಗಳು ಹೇಳಿದರು.
ನಮ್ಮದು ಧಾರ್ಮಿಕ ಸ್ವಾತಂತ್ರ್ಯವಿರುವ ದೇಶ. ಪ್ರತಿಯೊಬ್ಬರಿಗೂ ಕಾನೂನುಬದ್ಧವಾಗಿ ತಮ್ಮ ಧರ್ಮಾಚರಣೆ ಮಾಡುವ ಹಕ್ಕಿದೆ. ವೈಯಕ್ತಿಕ ನಂಬಿಕೆ ಹಾಗೂ ಆಚರಣೆಗಳ ವಿಚಾರದಲ್ಲಿ ಸರ್ಕಾರಗಳು ಹಸ್ತಕ್ಷೇಪ ಮಾಡಬಾರದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಶ್ರೀಗಳು ಆಗ್ರಹಿಸಿದರು.