Saturday, May 30, 2026
HomeCrimeಶಿರೂರು ರಕ್ಷಣಾ ಕಾರ್ಯದ ಸಾಹಸಿ ಅಧಿಕಾರಿ ದುರ್ಮರಣ

ಶಿರೂರು ರಕ್ಷಣಾ ಕಾರ್ಯದ ಸಾಹಸಿ ಅಧಿಕಾರಿ ದುರ್ಮರಣ

ಬೆಳಗಾವಿ: ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ದುರಂತದ ವೇಳೆ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿ ಗಮನ ಸೆಳೆದಿದ್ದ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಪಿಐ ಶ್ರೀಶೈಲ ಚೌಗಲೆ (37) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಚನ್ನಮ್ಮ ನಗರದ ನಿವಾಸದಲ್ಲಿದ್ದ ಅವರು ಗುರುವಾರ ಮನೆಯ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೋಣೆಯ ಬಾಗಿಲು ದೀರ್ಘ ಸಮಯ ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪತ್ನಿ ಎಸ್‌ಡಿಆರ್‌ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಸಿಬ್ಬಂದಿ ಬಾಗಿಲು ಒಡೆದು ಅವರನ್ನು ಆಸ್ಪತ್ರೆಗೆ ಸಾಗಿಸಿದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.

ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಸಂಭವಿಸಿದ್ದ ಭೀಕರ ಗುಡ್ಡ ಕುಸಿತದ ವೇಳೆ ಶ್ರೀಶೈಲ ಚೌಗಲೆ ಅವರು ರಕ್ಷಣಾ ತಂಡವನ್ನು ಮುನ್ನಡೆಸಿದ್ದರು. ಸಂಕಷ್ಟದ ಪರಿಸ್ಥಿತಿಯಲ್ಲಿ ಸಮರ್ಥ ಕಾರ್ಯನಿರ್ವಹಣೆಯಿಂದ ಅವರು ಗುರುತಿಸಿಕೊಂಡಿದ್ದು, 2025-26ನೇ ಸಾಲಿನ ಮುಖ್ಯಮಂತ್ರಿ ಬಂಗಾರದ ಪದಕಕ್ಕೂ ಭಾಜನರಾಗಿದ್ದರು.

ಆದರೆ ಇಂತಹ ಕರ್ತವ್ಯನಿಷ್ಠ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಸಹೋದ್ಯೋಗಿಗಳು ಮತ್ತು ಸಾರ್ವಜನಿಕರಲ್ಲಿ ಆಘಾತ ಮೂಡಿಸಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿಯಲ್ಲಿ ಹೆಚ್ಚುತ್ತಿರುವ ಕರ್ತವ್ಯದ ಒತ್ತಡ ಮತ್ತು ಮಾನಸಿಕ ಸಮಸ್ಯೆಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದ್ದು, ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share