Saturday, May 30, 2026
HomeUncategorizedನದಿ ಜೋಡಣೆ ವಿರೋಧಿ ಹೋರಾಟ ನಿರಂತರ

ನದಿ ಜೋಡಣೆ ವಿರೋಧಿ ಹೋರಾಟ ನಿರಂತರ

ಸಿದ್ದಾಪುರ: ಜನ ಮತ್ತು ಪರಿಸರ ವಿರೋಧಿ ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆ ವಿರುದ್ಧ ಸಾಮಾಜಿಕ ಹಾಗೂ ಕಾನೂನು ಹೋರಾಟವನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ತಾಲೂಕಿನ ಕ್ಯಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ನಡೆದ ಅಘನಾಶಿನಿ ನದಿ ಜೋಡಣೆ ವಿರೋಧ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲ್ಲಿಸಲಾದ ಆಕ್ಷೇಪಣಾ ಪತ್ರಗಳ ಸ್ವೀಕೃತಿ ಪ್ರತಿಗಳನ್ನು ಹಾಗೂ ಯುನಿಸ್ಕೋ ಸಂಸ್ಥೆಯಿಂದ ಹೋರಾಟಗಾರರ ವೇದಿಕೆಗೆ ಬಂದಿರುವ ಉತ್ತರದ ಪ್ರತಿಯನ್ನು ಸಾರ್ವಜನಿಕರಿಗೆ ವಿತರಿಸಿದರು.

ಅಘನಾಶಿನಿ ನದಿಯ ಪರಿಸರ ವ್ಯವಸ್ಥೆ, ಜೀವ ವೈವಿಧ್ಯತೆ ಹಾಗೂ ಸ್ಥಳೀಯ ಜನಜೀವನದ ಮೇಲೆ ಯೋಜನೆಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಯೋಜನೆ ವಿರೋಧಿಸಿ ಸಂಘಟಿತ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

ದಿವಾಕರ್ ನಾಯ್ಕ ಸ್ವಾಗತಿಸಿದರು. ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಪ್ರಸ್ತಾವನೆ ಸಲ್ಲಿಸಿದರು. ಹೋರಾಟಗಾರ ಪ್ರಮುಖ ಕೆ.ಟಿ. ನಾಯ್ಕ ಹೆಗ್ಗೇರಿ, ರಾಜು ನಾಯ್ಕ ಕಿರೇಕೊಡ, ಶ್ರೀಧರ ಹೆಗಡೆ ಕೆರೆಮನೆ, ಆರ್.ಆರ್. ಹೆಗಡೆ ಐನಕೈ, ರಾಮಕೃಷ್ಣ ನಾಯ್ಕ ಶಿರೂರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಚಂದ್ರಕಾಂತ ಆರ್. ನಾಯ್ಕ ಹೆಗ್ಗೇರಿ, ಆರ್.ಟಿ. ನಾಯ್ಕ ಅರಳಿಮಕ್ಕಿ, ಕೆ.ಡಿ. ರಾಮಪ್ಪ ಕೊಂಡ್ಲಿ, ಮಾರುತಿ ಬಿಳ್ಳುಮನೆ, ಶ್ರೀನಿವಾಸ ಕಲ್ಲಾಳ, ಪ್ರಕಾಶ್ ಜಿ. ನಾಯ್ಕ ಕ್ಯಾದಗಿ, ಶ್ರೀಪಾದ ನಾಯ್ಕ ಶಿರೂರು, ಸಂತೋಷ್ ವಿ. ನಾಯ್ಕ ಕ್ಯಾದಗಿ, ರವೀಂದ್ರ ಭಟ್ಟ ಕಲ್ಲಾಳ, ರಾಘವೇಂದ್ರ ಬಿಳ್ಳುಮನೆ ಸೇರಿದಂತೆ ಹಲವರು ಚರ್ಚೆಯಲ್ಲಿ ಭಾಗವಹಿಸಿದ್ದರು.

20 ಸಾವಿರಕ್ಕೂ ಅಧಿಕ ಆಕ್ಷೇಪಣಾ ಪತ್ರ ಸಲ್ಲಿಕೆ

ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಗೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ದಾಖಲೆಯ 20 ಸಾವಿರಕ್ಕೂ ಅಧಿಕ ಆಕ್ಷೇಪಣಾ ಪತ್ರಗಳು ಸಲ್ಲಿಕೆಯಾಗಿವೆ ಎಂದು ರವೀಂದ್ರ ನಾಯ್ಕ ತಿಳಿಸಿದರು.

ಹೋರಾಟಗಾರರ ವೇದಿಕೆ ಉಚಿತವಾಗಿ ಆಕ್ಷೇಪಣಾ ಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಿದ್ದು, ಅವುಗಳನ್ನು ಸರ್ಕಾರಕ್ಕೆ ಸಲ್ಲಿಸುವ ಮೂಲಕ ಯೋಜನೆ ವಿರುದ್ಧ ಜನಾಭಿಪ್ರಾಯವನ್ನು ದಾಖಲಿಸಲಾಗಿದೆ. ಈ ಅಭಿಯಾನವು ಹೋರಾಟದ ಮಹತ್ವದ ಹೆಜ್ಜೆಯಾಗಿದ್ದು, ಮುಂದೆಯೂ ಪರಿಸರ ಸಂರಕ್ಷಣೆಗಾಗಿ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share