Saturday, June 13, 2026
HomeHealthನಿದ್ದೆಗೊಮ್ಮೆ ಮರಣ; ನಮ್ಮ ದೇಹಕ್ಕೂ ಬೇಕು ಐಡ್ಲ್‌ ಮೋಡ್!

ನಿದ್ದೆಗೊಮ್ಮೆ ಮರಣ; ನಮ್ಮ ದೇಹಕ್ಕೂ ಬೇಕು ಐಡ್ಲ್‌ ಮೋಡ್!

“ನಿದ್ದೆಗೊಮ್ಮೆ ಮರಣ, ಎದ್ದ ಕೂಡಲೇ ಜನನ” ಎಂಬ ನುಡಿ ನಮ್ಮ ಜನಪದ ಬದುಕಿನಲ್ಲಿ ಬಹಳ ಹಿಂದಿನಿಂದಲೂ ಬಳಕೆಯಲ್ಲಿದೆ. ಮಲಗಿರುವ ವ್ಯಕ್ತಿಯನ್ನು ನೋಡಿದಾಗ ಆತ ಹೊರಜಗತ್ತಿನ ಅರಿವಿಲ್ಲದೆ, ನಿಶ್ಚಲನಾಗಿ ಕಾಣುವುದರಿಂದಲೇ ನಿದ್ರೆಯನ್ನು ಮರಣಕ್ಕೆ ಹೋಲಿಸಲಾಗಿದೆ. ಆದರೆ ವಿಜ್ಞಾನದ ದೃಷ್ಟಿಯಿಂದ ನೋಡಿದರೆ ನಿದ್ರೆ ಮರಣವಲ್ಲ. ಬದಲಾಗಿ ಅದು ದೇಹ ಮತ್ತು ಮೆದುಳಿನ ಪುನಶ್ಚೇತನದ ಅತ್ಯಂತ ಮಹತ್ವದ ಪ್ರಕ್ರಿಯೆ.

ನಾವು ರಾತ್ರಿ ಮಲಗಿದ ತಕ್ಷಣ ದೇಹದ ಎಲ್ಲಾ ಚಟುವಟಿಕೆಗಳು ನಿಲ್ಲುವುದಿಲ್ಲ. ಬದಲಾಗಿ ದೇಹ ಮತ್ತೊಂದು ಕಾರ್ಯವ್ಯವಸ್ಥೆಗೆ ಪ್ರವೇಶಿಸುತ್ತದೆ. ಹಗಲಿಡೀ ಕೆಲಸ ಮಾಡಿದ ದೇಹ ತನ್ನನ್ನು ತಾನು ಸರಿಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸುತ್ತದೆ. ಕೆಲವೇ ನಿಮಿಷಗಳಲ್ಲಿ ಹೃದಯ ಬಡಿತ ನಿಧಾನವಾಗುತ್ತದೆ, ಉಸಿರಾಟದ ವೇಗ ಕಡಿಮೆಯಾಗುತ್ತದೆ, ರಕ್ತದೊತ್ತಡ ಇಳಿಯುತ್ತದೆ ಮತ್ತು ದೇಹದ ಉಷ್ಣತೆಯೂ ಸ್ವಲ್ಪ ಕಡಿಮೆಯಾಗುತ್ತದೆ. ಇದರಿಂದ ದೇಹ ಕಡಿಮೆ ಶಕ್ತಿಯನ್ನು ಬಳಸುತ್ತಾ ವಿಶ್ರಾಂತಿಯ ಸ್ಥಿತಿಗೆ ಸಾಗುತ್ತದೆ.

ನಿದ್ರೆಯ ಸಮಯದಲ್ಲಿ ನಮ್ಮ ಮೆದುಳು ಸಹ ವಿಶ್ರಾಂತಿ ಪಡೆಯುವುದರ ಜೊತೆಗೆ ಹಲವು ಪ್ರಮುಖ ಕೆಲಸಗಳನ್ನು ನಿರ್ವಹಿಸುತ್ತದೆ. ದಿನವಿಡೀ ನಾವು ಕಂಡ, ಕೇಳಿದ ಮತ್ತು ಕಲಿತ ಮಾಹಿತಿಯನ್ನು ವಿಂಗಡಿಸಿ ನೆನಪಿನ ಕೋಶಗಳಲ್ಲಿ ಸಂಗ್ರಹಿಸುವ ಕಾರ್ಯ ನಡೆಯುವುದೂ ಈಗಲೇ.

ಇದರ ಜೊತೆಗೆ ದೇಹದ ಜೀವಕೋಶಗಳ ದುರಸ್ತಿ ಕಾರ್ಯವೂ ನಿದ್ರೆಯಲ್ಲಿಯೇ ಹೆಚ್ಚಾಗಿ ನಡೆಯುತ್ತದೆ. ದಿನವಿಡೀ ಶ್ರಮದಿಂದ ಹಾನಿಗೊಳಗಾದ ಕೋಶಗಳನ್ನು ಮರುನಿರ್ಮಿಸುವುದು, ಸ್ನಾಯುಗಳನ್ನು ಪುನರುಜ್ಜೀವನಗೊಳಿಸುವುದು ಹಾಗೂ ಹೊಸ ಕೋಶಗಳ ಬೆಳವಣಿಗೆಗೆ ನೆರವಾಗುವುದು ನಿದ್ರೆಯ ಪ್ರಮುಖ ಕೆಲಸಗಳಲ್ಲಿ ಸೇರಿವೆ. ಬೆಳವಣಿಗೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹಲವು ಹಾರ್ಮೋನುಗಳ ಉತ್ಪಾದನೆಯೂ ಇದೇ ಸಮಯದಲ್ಲಿ ಹೆಚ್ಚಾಗುತ್ತದೆ.

ಆಶ್ಚರ್ಯಕರ ಸಂಗತಿಯೆಂದರೆ, ನಾವು ಗಾಢ ನಿದ್ರೆಯಲ್ಲಿದ್ದರೂ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗುವುದಿಲ್ಲ. ತಾನಿರುವ ಪರಿಸರದ ಮೇಲೆ ಅದು ನಿರಂತರ ನಿಗಾ ಇಡುತ್ತದೆ. ಸಾಮಾನ್ಯ ಶಬ್ದಗಳಿಗೆ ಪ್ರತಿಕ್ರಿಯಿಸದ ಮೆದುಳು, ಏಕಾಏಕಿ ದೊಡ್ಡ ಸದ್ದು ಅಥವಾ ಅಪಾಯದ ಸೂಚನೆ ಕಂಡುಬಂದರೆ ತಕ್ಷಣ ನಮ್ಮನ್ನು ಎಚ್ಚರಗೊಳಿಸುತ್ತದೆ. ಅಂದರೆ ನಿದ್ರೆಯಲ್ಲಿದ್ದರೂ ದೇಹದ ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಿಸುತ್ತಲೇ ಇರುತ್ತದೆ.

ನಿದ್ರೆಯ ಒಂದು ವಿಶೇಷ ಹಂತವನ್ನು REM (Rapid Eye Movement) ನಿದ್ರೆ ಎಂದು ಕರೆಯಲಾಗುತ್ತದೆ. ಈ ಹಂತದಲ್ಲೇ ಹೆಚ್ಚಿನ ಕನಸುಗಳು ಕಾಣಿಸಿಕೊಳ್ಳುತ್ತವೆ. ಕಣ್ಣುಗಳು ಮುಚ್ಚಿದ್ದರೂ ಅವುಗಳ ಚಲನೆ ವೇಗವಾಗಿರುತ್ತದೆ. ಮೆದುಳು ಸಾಕಷ್ಟು ಸಕ್ರಿಯವಾಗಿದ್ದರೂ ದೇಹದ ಬಹುತೇಕ ಸ್ನಾಯುಗಳು ತಾತ್ಕಾಲಿಕವಾಗಿ ನಿಷ್ಕ್ರಿಯ ಸ್ಥಿತಿಯಲ್ಲಿರುತ್ತವೆ. ಆದ್ದರಿಂದ ಕನಸಿನಲ್ಲಿ ಓಡಾಡಿದರೂ ಅಥವಾ ವಿವಿಧ ಕ್ರಿಯೆಗಳಲ್ಲಿ ತೊಡಗಿದರೂ ನಾವು ಮಲಗಿದಲ್ಲಿಯೇ ಇದ್ದಿರುತ್ತೇವೆ!

ಹಾಗಾದರೆ “ನಿದ್ದೆಗೊಮ್ಮೆ ಮರಣ” ಎಂಬ ಮಾತಿನ ಅರ್ಥವೇನು? ನಿದ್ರೆಯ ಸಮಯದಲ್ಲಿ ನಮ್ಮ ಅರಿವು ತಾತ್ಕಾಲಿಕವಾಗಿ ಹೊರಜಗತ್ತಿನಿಂದ ದೂರವಾಗುತ್ತದೆ. ನಾವು ಎಲ್ಲಿದ್ದೇವೆ, ನಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಅರಿವು ಕಡಿಮೆಯಾಗುತ್ತದೆ. ಈ ಕಾರಣದಿಂದಲೇ ಹಿಂದಿನವರು ಅದನ್ನು ಮರಣಕ್ಕೆ ಹೋಲಿಸಿದ್ದಾರೆ. ಆದರೆ ಮರಣದಲ್ಲಿ ದೇಹದ ಪ್ರಮುಖ ಕ್ರಿಯೆಗಳು ಶಾಶ್ವತವಾಗಿ ನಿಲ್ಲುತ್ತವೆ. ನಿದ್ರೆಯಲ್ಲಿ ಮಾತ್ರ ಅವು ನಿಧಾನಗೊಳ್ಳುತ್ತವೆ, ಆದರೆ ನಿಲ್ಲುವುದಿಲ್ಲ.

ಹೀಗಾಗಿ ನಾವು ಮಲಗಿದಾಗ ತಾತ್ಕಾಲಿಕವಾಗಿ ಸತ್ತಿರುವುದಿಲ್ಲ. ಹಗಲಿನ ಆಯಾಸವನ್ನು ದೂರ ಮಾಡಿ, ಮೆದುಳನ್ನು ಚುರುಕುಗೊಳಿಸಿ, ದೇಹವನ್ನು ಪುನಶ್ಚೇತನಗೊಳಿಸಿ, ಮುಂದಿನ ದಿನದ ಚಟುವಟಿಕೆಗಳಿಗೆ ನಮ್ಮನ್ನು ಸಜ್ಜುಗೊಳಿಸುವ ಅದ್ಭುತ ಪ್ರಕ್ರಿಯೆಯೇ ನಿದ್ರೆ. ಆದ್ದರಿಂದ ನಿದ್ರೆ ಸಮಯದ ವ್ಯರ್ಥವಲ್ಲ. ಅದು ಆರೋಗ್ಯಕರ ಬದುಕಿನ ಮೂಲಾಧಾರ. ಅಂದಹಾಗೆ, ಹೇಗಿತ್ತು ನಿಮ್ಮ ರಾತ್ರಿಯ ನಿದ್ರೆ?!

ಕೆನರಾ ನೆಕ್ಸ್ಟ್‌ – ನಿಮ್ಮ ಸುದ್ದಿ, ಮಾಹಿತಿಗಳ ನಿತ್ಯ ಸಂಗಾತಿ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share