ಯಲ್ಲಾಪುರ: ತಾಲೂಕಿನ ಸೋಮಾಪುರ ಗ್ರಾಮದ ದ್ಯಾಮವ್ವಾ ದೇವಸ್ಥಾನದಲ್ಲಿ ಇರಿಸಲಾಗಿದ್ದ ಕಾಣಿಕೆ ಡಬ್ಬಿಯನ್ನು ಕಳ್ಳರು ಕದ್ದೊಯ್ದು, ಅದರಲ್ಲಿದ್ದ ಅಂದಾಜು ₹50 ಸಾವಿರ ನಗದು ಹಣವನ್ನು ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸೋಮಾಪುರ ಗ್ರಾಮದ ದ್ಯಾಮವ್ವಾ ದೇವಸ್ಥಾನದ ಪೂಜಾರಿ ಶ್ರೀಕಾಂತ ಅಪ್ಪಾರಾವ ಮಿರಾಶಿ ಅವರು ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಮೇ 29ರಂದು ಸಂಜೆ 6.30 ಗಂಟೆಯಿಂದ ಜೂನ್ 2ರಂದು ಬೆಳಿಗ್ಗೆ 9 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿ, ಅದರಲ್ಲಿದ್ದ ಅಂದಾಜು ₹50 ಸಾವಿರ ನಗದು ಹಣವನ್ನು ಕೊಂಡೊಯ್ದಿದ್ದಾರೆ.
ಘಟನೆ ಕುರಿತು ದೇವಸ್ಥಾನ ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿದ ಬಳಿಕ ದೂರು ನೀಡಲು ವಿಳಂಬವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 331(3), 331(4) ಹಾಗೂ 305ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಉಪನಿರೀಕ್ಷಕ ಮಹಾವೀರ ಕಾಂಬಳೆ ತನಿಖೆ ಕೈಗೊಂಡಿದ್ದಾರೆ.
ಕಳ್ಳರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.