Saturday, June 13, 2026
HomeInformationSpecialಹೀಗೊಂದು ಸ್ಥಳವಿದೆ, `ಪ್ರೇತ ಪಟ್ಟಣ!'

ಹೀಗೊಂದು ಸ್ಥಳವಿದೆ, `ಪ್ರೇತ ಪಟ್ಟಣ!’

ತಲೆಬರಹ ಓದುತ್ತಿದ್ದಂತೆ ಅಚ್ಚರಿಯಾಗಿರಬಹುದಲ್ಲ? ಈ ಜಗತ್ತು ಎಂದಿಗೂ ಸೋಜಿಗದ ಸಂತೆ. ಇಲ್ಲಿಯ ಅಚ್ಚರಿಗಳಿಗೆ ಎಣೆಯಿಲ್ಲ. ಒಂದೊಂದು ಸ್ಥಳವೂ ಒಂದೊಂದು ವಿಶೇಷತೆಗಳಿಂದ ಹೆಸರಾಗಿಬಿಡುತ್ತದೆ ಮತ್ತು ಅಷ್ಟೇ ಬೇಗ ಹಳೆಯದಾಗಿಬಿಡುತ್ತದೆ ಕೂಡ.

ಯಾಕೆಂದರೆ, ಅದಕ್ಕಿಂತಲೂ ಹೆಚ್ಚು ಅಚ್ಚರಿ ಮೂಡಿಸುವ ಇನ್ಯಾವುದೋ ಒಂದು ಸ್ಥಳದ ಉದಯ, ಅನ್ವೇಷಣೆಯಾಗಿರುತ್ತದೆ. ಆದರೆ, ಈಗ ಹೇಳ ಹೊರಟಿರುವ ಸ್ಥಳ ಮಾತ್ರ ಎಂದೆಂದಿಗೂ ಪ್ರೇತ ಪಟ್ಟಣವೇ! ಯಾಕೆಂದರೆ, ಅದೊಂದು ಸಂದರ್ಭದಲ್ಲಿ ಸಂಭವಿಸಿದ ಅವಘಡ ಇಡಿಯ ಪಟ್ಟಣವನ್ನೇ ನೆಲಸಮ ಮಾಡಿಬಿಟ್ಟಿತ್ತು. ಹಿಂದಿನಿಂದಲೂ ಅದೊಂದು ಜಾಗವನ್ನು ನೋಡಿ, ಮೆಚ್ಚಿ, ಆನಂದಿಸುತ್ತಿದ್ದವರೆಲ್ಲ ನಂತರದ ದಿನಗಳಲ್ಲಿ ಆ ಜಾಗವನ್ನು ನೋಡಿ ಅಕ್ಷರಶಃ ಆಘಾತಕ್ಕೊಳಗಾಗಿಬಿಟ್ಟಿದ್ದರು.

`ಧನುಷ್ಕೋಡಿ’. ಒಂದು ಕಡೆ ಹಿಂದೂ ಮಹಾಸಾಗರ ಮತ್ತು ಮತ್ತೊಂದೆಡೆ ಬಂಗಾಳಕೊಲ್ಲಿಯಿಂದ ಸುತ್ತುವರೆದಿರುವ ಧನುಷ್ಕೋಡಿ ಒಂದು ಕಾಲದಲ್ಲಿ ಸದಾ ಜನಜಂಗುಳಿಯಿಂದ ಗಿಜಿಗುಡುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ಪಟ್ಟಣ. ದೇಶದ ಶ್ರೀಮಂತ ಮೀನುಗಾರಿಕಾ ವಲಯಗಳಲ್ಲಿ ಒಂದೆಂದು ಕರೆಯಲ್ಪಡುವ ಈ ಸಣ್ಣ ಪಟ್ಟಣದಲ್ಲಿ ಸಾವಿರಾರು ಜನರ ವಾಸವೂ ಇತ್ತು.

ಇದಕ್ಕೂ ಮಿಗಿಲಾಗಿ, ಇದು ಶ್ರೀಲಂಕಾ ಮತ್ತು ಭಾರತದ ನಡುವಿನ ಏಕೈಕ ಭೂ ಗಡಿಯಾಗಿತ್ತು. ಹಲವಾರು ಯಾತ್ರಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ಪ್ರಮುಖ ಬಂದರಾಗಿ ಕಾರ್ಯನಿರ್ವಹಿಸಿತ್ತು.

ತಮಿಳುನಾಡಿನ ಪಂಬನ್ ದ್ವೀಪದ (ರಾಮೇಶ್ವರಂ ದ್ವೀಪ) ಆಗ್ನೇಯ ತುದಿಯಲ್ಲಿರುವ ಧನುಷ್ಕೋಡಿ 1946ರಲ್ಲಿ ಚಂಡಮಾರುತದ ನಂತರ ಸಂಪೂರ್ಣ ನಾಶವಾಗಿಬಿಟ್ಟಿತು. ಡಿಸೆಂಬರ್ 22, 1946ರಂದು 170 ಮೈಲಿ ವೇಗದಲ್ಲಿ ಬೀಸಿದ ಚಂಡಮಾರುತ ಧನುಷ್ಕೋಡಿ ಪಟ್ಟಣವನ್ನು ಸಂಪೂರ್ಣವಾಗಿ ಆಹುತಿ ಪಡೆದುಬಿಟ್ಟಿತ್ತು.

ನೋಡನೋಡುತ್ತಿದ್ದಂತೆ ಎಲ್ಲವೂ ಸ್ಮಶಾನ. ಸುಮಾರು 1800 ಜನರು ಪ್ರಾಣ ಕಳೆದುಕೊಂಡರು. ಪಟ್ಟಣದ ಎಲ್ಲಾ ಮನೆಗಳು ನೆಲಸಮವಾದವು.

ನಂತರದ ಕೆಲವೇ ದಿನಗಳಲ್ಲಿ ಇಡೀ ಪಟ್ಟಣ ಕೇವಲ ಅವಶೇಷಗಳಿಂದ ತುಂಬಿಹೋಯಿತು. ಎಲ್ಲಿಯೂ ಮನುಷ್ಯರ ಓಡಾಟವಿಲ್ಲ. ಬಂದರಿನಲ್ಲಿ ಹಡಗುಗಳ ಸದ್ದಿಲ್ಲ. ಮದ್ರಾಸ್ ಸರ್ಕಾರ ಕೆಲವೇ ದಿನಗಳಲ್ಲಿ ಈ ಪಟ್ಟಣವನ್ನು `ಮಾನವ ವಾಸಕ್ಕೆ ಯೋಗ್ಯವಲ್ಲ’ ಎಂದು ಘೋಷಿಸಿಬಿಟ್ಟಿತು.

ಆದರೂ, ಆ ಚಂಡಮಾರುತದ ಹೊಡೆತದಿಂದ ಬದುಕುಳಿದ ಬೆರಳೆಣಿಕೆಯ ಸ್ಥಳೀಯ ಮೀನುಗಾರರು ಅಳಿದುಳಿದ ಅವಶೇಷಗಳಡಿ ಒಂದಿಷ್ಟು ಅಗತ್ಯ ಸಾಮಗ್ರಿಗಳೊಂದಿಗೆ ಮತ್ತೆ ಅದೇ ಜಾಗದಲ್ಲಿ ಗುಡಿಸಲು ಕಟ್ಟಿ ವಾಸಿಸತೊಡಗಿದ್ದರು.

ಪಟ್ಟಣದ ದೂರದ ಸ್ಥಳ ಮತ್ತು ದುರಂತ ಭೂತಕಾಲ ಈ ಸ್ಥಳಕ್ಕೆ ಒಂದು ವಿಲಕ್ಷಣ ಕಂಪನವನ್ನು ನೀಡುತ್ತಿದೆ. ಆದ್ದರಿಂದ ಇದನ್ನು ಹೆಚ್ಚಾಗಿ `ಪ್ರೇತ ಪಟ್ಟಣ’ ಎಂದೇ ಕರೆಯಲಾಗುತ್ತದೆ. ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಪಟ್ಟಣವನ್ನು ನೆನಪಿಸುವ ಅವಶೇಷಗಳು ಮಾತ್ರ ಉಳಿದಿವೆ.

ದಶಕಗಳು ಉರುಳಿದ ನಂತರ, ಧೈರ್ಯವಂತ ಪ್ರವಾಸಿಗರು ನಿಧಾನವಾಗಿ ಪ್ರೇತ ಪಟ್ಟಣಕ್ಕೆ ಭೇಟಿ ನೀಡತೊಡಗಿದರು. ಇಲ್ಲಿನ ಪ್ರಶಾಂತ ವಾತಾವರಣ, ಸಮುದ್ರದ ಅಲೆಗಳ ಸದ್ದು, ಮೃದುವಾದ ಬಿಳಿ ಮರಳು ಮತ್ತು ಸಮುದ್ರ ತೀರದ ಹಳೆಯ ನೆನಪಿನ ಅವಶೇಷಗಳು ಪ್ರವಾಸಿಗರನ್ನು ಈಗಲೂ ಆಕರ್ಷಿಸುತ್ತವೆ.

ಪ್ರಸ್ತುತ, ದೇವಾಲಯ, ರೈಲ್ವೆ ನಿಲ್ದಾಣ, ಚರ್ಚ್ ಮತ್ತು ಅಂದಿನ ಮನೆಗಳ ಅವಶೇಷಗಳನ್ನು ಈಗಲೂ ನೋಡಬಹುದು. ಇದಲ್ಲದೆ, ಪ್ರವಾಸಿಗರು ಕಡಲತೀರದಲ್ಲಿ ವಿಶ್ರಾಂತಿ ಪಡೆಯಬಹುದು ಮತ್ತು ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿಯ ಪ್ರಬಲ ನೀರಿನ ಶಬ್ದಗಳನ್ನು ಕೇಳಬಹುದು. ಕಡಲತೀರದಲ್ಲಿ ಒಂದೆರಡು ಸಣ್ಣ ಗುಡಿಸಲುಗಳು ಮತ್ತು ಸಣ್ಣ ಚಹಾ ಅಂಗಡಿಗಳಿವೆ.

ಧನುಷ್ಕೋಡಿಗೆ ನೇರ ಸಂಪರ್ಕವಿಲ್ಲ. ಮೊದಲು ರಾಮೇಶ್ವರಂ ತಲುಪಬೇಕು. ಇದು ಧನುಷ್ಕೋಡಿಯಿಂದ ಸುಮಾರು 12 ಮೈಲಿ ದೂರದಲ್ಲಿದೆ. ರಾಮೇಶ್ವರಂ ದಕ್ಷಿಣ ಭಾರತದ ಪ್ರಮುಖ ನಗರಗಳಾದ ತಿರುಚ್ಚಿ, ಚೆನ್ನೈ, ತಂಜಾವೂರು ಮತ್ತು ಕೊಯಮತ್ತೂರಿನಿಂದ ರೈಲು ಮೂಲಕ ಉತ್ತಮ ಸಂಪರ್ಕ ಹೊಂದಿದೆ.

ರಾಮೇಶ್ವರಂನಿಂದ ಸುಮಾರು 3.5 ಗಂಟೆಗಳ ಪ್ರಯಾಣದ ಅಂತರದಲ್ಲಿರುವ ಮಧುರೈಗೆ ವಿಮಾನದಲ್ಲಿ  ತೆರಳಬೇಕು. ಅಲ್ಲಿಂದ, ಧನುಷ್ಕೋಡಿಗೆ ಕರೆದೊಯ್ಯುವ ಟೆಂಪೊ-ಸಣ್ಣ ಟ್ರಕ್‌ಗಳನ್ನು ಏರಬೇಕು. ಎರಡೂ ಬದಿಗಳಲ್ಲಿ ಸಮುದ್ರವನ್ನು ಹೊಂದಿರುವ ತೆಳುವಾದ ಭೂಮಿಯ ಮೂಲಕ ಪ್ರಯಾಣಿಸುವ ಅನುಭವ ಎಂದೆಂದಿಗೂ ಆಕರ್ಷಕವಾಗಿರುತ್ತದೆ. ಇಂಥವೆಲ್ಲ ಅನುಭವಗಳಿಗೆ ತೆರೆದುಕೊಳ್ಳಲು ಇಷ್ಟಪಡುವ ಪ್ರವಾಸಿಗರಿಗಂತೂ ಧನುಷ್ಕೋಡಿ ಸ್ವರ್ಗವೆನಿಸಿಬಿಡುತ್ತದೆ.

ಅಲೆಮಾರಿ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share