ತಿಂಗಳಿಗೊಮ್ಮೆ ಕ್ಷೌರಿಕನಿಗೆ ನಮ್ಮ ತಲೆಗೂದಲನ್ನು ನೀಡಿ, ಹಾಗೆಯೇ ಬೆನ್ನು ತಿರುಗಿಸಿ ಬಂದುಬಿಡುತ್ತೇವೆ. ಆದರೆ, ಹಾಗೆ ದಾನ ಮಾಡಿ ಬಂದ ನಮ್ಮ ತಲೆಗೂದಲು ಏನಾಗುತ್ತದೆ? ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಗೊತ್ತಿದ್ದವರಿಗೂ ` ಭಾರೀ ರೇಟ್ ಇದೆಯಂತೆ ಕಣ್ರೀ. ಫಾರಿನ್ ಕಂಟ್ರಿಗಳಿಗೆ ಕಳಿಸ್ತಾರಂತೆ. ವಿಗ್ ಮಾಡ್ತಾರೆ’ ಅಂತಷ್ಟೇ ಗೊತ್ತಿರಬಹುದು. ಆದರೆ, ಈ ಉದ್ಯಮದ ಆಳ-ಅಗಲ ಅಚ್ಚರಿ ಮೂಡಿಸುವಂತಿದೆ.
ಇಂತಹ ಕೂದಲಿನಿಂದ ತಯಾರಿಸಿದ ವಿಗ್ ತಲೆಗೂದಲನ್ನು ಕಳೆದುಕೊಂಡ ವ್ಯಕ್ತಿಯೊಬ್ಬನ ಮೊಗದಲ್ಲಿ ಮಂದಹಾಸ ಮೂಡಿಸಬಹುದು. ಸಿನಿಮಾ ತಾರೆಯರ ಟ್ರೆಂಡ್ ಸೆಟ್ಟಿಂಗ್‌ಗೆ ಹೊಸ ನೋಟವನ್ನೂ ನೀಡಬಹುದು! ಅಂದಹಾಗೆ, ಕೂದಲು ಸಂಸ್ಕರಣೆ ಉದ್ಯಮ ಭಾರತದಲ್ಲಿ ವಾರ್ಷಿಕ 3 ಸಾವಿರ ಕೋಟಿ ರೂ.ಗಳ ವ್ಯವಹಾರ ಹೊಂದಿದೆ!
ನವದೆಹಲಿ, ಚೆನ್ನೈ, ಆಂಧ್ರಪ್ರದೇಶದ ಎಲೂರು, ಪಶ್ಚಿಮ ಬಂಗಾಳದ ಭಾಗಬನ್‌ಪುರ್, ಮುರ್ಷಿದಾಬಾದ್ ಮತ್ತು ರಾಜಸ್ಥಾನದ ಡಿಗ್ ಪ್ರದೇಶಗಳು ಈ ಉದ್ದಿಮೆಯ ಪ್ರಮುಖ ಕೇಂದ್ರಗಳಾಗಿವೆ. ಕೂದಲು ಸಂಸ್ಕರಣೆಯಲ್ಲಿ 70 ವರ್ಷಗಳ ಇತಿಹಾಸವನ್ನು ಹೊಂದಿರುವ ಮತ್ತೊಂದು ಸ್ಥಳವೂ ನಮ್ಮ ರಾಜ್ಯದಲ್ಲಿದೆ. ಅದು, ಕೊಪ್ಪಳ ಜಿಲ್ಲೆಯ ಭಾಗ್ಯನಗರ.
ಈ ಸಣ್ಣ ಪಟ್ಟಣ ಹುಬ್ಬಳ್ಳಿಯಿಂದ 123 ಕಿ.ಮೀ ದೂರದಲ್ಲಿದೆ. ಇದು ಕರ್ನಾಟಕದಲ್ಲಿರುವ ಏಕೈಕ ಕೂದಲು ಸಂಸ್ಕರಣಾ ಕೇಂದ್ರವಾಗಿದ್ದು, ದೇಶದ ಶೇ. 40ರಷ್ಟು ತಲೆಗೂದಲು ಇಲ್ಲಿಯೇ ಸಂಸ್ಕರಣೆಯಾಗುತ್ತದೆ. 1950ರ ಸುಮಾರಿಗೆ ತುಂಗಭದ್ರಾ ಅಣೆಕಟ್ಟಿಗಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ, ಅವರಿಗೆ ಕೊಪ್ಪಳದ ಹೊರವಲಯದ ಭಾಗ್ಯನಗರದಲ್ಲಿ ಪುನರ್ವಸತಿ ರೂಪಿಸಲಾಯಿತು.
ಕೃಷಿ ಭೂಮಿಯೇ ಇಲ್ಲದೆ, ಜೀವನೋಪಾಯಕ್ಕಾಗಿ ಪರಿತಪಿಸುತ್ತಿದ್ದಾಗ, ಅವರಿಗೆ ಕೂದಲು ಸಂಸ್ಕರಣಾ ಕೌಶಲ್ಯಗಳನ್ನು ಕಲಿಸಲಾಯಿತು. 1960ರಲ್ಲಿ, ಕೇವಲ ನಾಲ್ಕಾರು ಕೂದಲು ಸಂಸ್ಕರಣಾ ಘಟಕಗಳು ಇಲ್ಲಿದ್ದವು.
ಪ್ರಸ್ತುತ, 200ಕ್ಕೂ ಹೆಚ್ಚು ಕೂದಲು ಸಂಸ್ಕರಣಾ ಘಟಕಗಳು ಮುನ್ನಡೆಯುತ್ತಿವೆ. 6ರಿಂದ 8 ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ. ಭಾಗ್ಯನಗರದಲ್ಲಿ ಸಂಸ್ಕರಿಸಿದ ಕೂದಲು ಚೀನಾ, ಆಫ್ರಿಕಾ ಮತ್ತು ಮ್ಯಾನ್ಮಾರ್ ತಲುಪುತ್ತದೆ. ಅಲ್ಲಿ ಅದನ್ನು ವಿವಿಧ ರೀತಿಯ ವಿಗ್‌ಗಳು ಮತ್ತು ಇತರ ರೂಪಗಳಿಗೆ ಪರಿವರ್ತಿಸಿ, ಯುರೋಪ್ ಮತ್ತು ಅಮೆರಿಕಕ್ಕೆ ರಫ್ತು ಮಾಡಲಾಗುತ್ತದೆ.
ಭಾರತೀಯ ಕೂದಲಿನ ಗುಣಮಟ್ಟವು ತುಂಬಾ ಉತ್ತಮವಾಗಿದೆ. ಇದಕ್ಕೆ ಚೀನಾ, ಆಫ್ರಿಕಾ ಮತ್ತಿತರ ಸ್ಥಳಗಳಲ್ಲಿ ಭಾರೀ ಬೇಡಿಕೆಯಿದೆ. ಪ್ರಾಚೀನ ರೋಮ್‌ನಲ್ಲಿ ಭಾರತೀಯರ ಕೂದಲಿನಿಂದ ತಯಾರಿಸಿದ ವಿಗ್‌ಗಳಿಗೆ ಒಳ್ಳೆಯ ಬೇಡಿಕೆಯೂ ಇತ್ತು. ಇಂಥದೊಂದು ದೀರ್ಘ ಪ್ರಯಾಣವು ಹೇರ್ ಸಲೂನ್ ಅಥವಾ ದೇವಾಲಯದಿಂದ ಪ್ರಾರಂಭವಾಗುತ್ತದೆ. ದೇವರಿಗೆ ಹರಕೆ ಕಟ್ಟಿಕೊಂಡ ಭಕ್ತರು ಕೂದಲನ್ನು ಕತ್ತರಿಸದೇ, ಪೂರ್ತಿಯಾಗಿ ಬೋಳಿಸಿಕೊಳ್ಳುವದಿಂದ ಉದ್ದ ಅಳತೆಯ ಕೂದಲು ಲಭ್ಯವಾಗುತ್ತದೆ ಎನ್ನುತ್ತಾರೆ ಭಾಗ್ಯನಗರದ ಕೂದಲು ಸಂಸ್ಕರಣಾ ಘಟಕದ ಮಾಲೀಕ ಮುತ್ತಣ್ಣ ವಡ್ಡರ್.
ಅವರು ತಿಂಗಳಿಗೆ 50-60 ಕೆಜಿ ಹಸಿ ಕೂದಲನ್ನು ಸಂಗ್ರಹಿಸುತ್ತಾರೆ. ಇಲ್ಲಿನ ಘಟಕಗಳು ಬಿಳಿ ಕೂದಲಿಗೆ ಪ್ರತಿ ಕೆಜಿ.ಗೆ 2ರಿಂದ 2,500 ರೂ.ಗಳನ್ನು ಪಾವತಿಸಿದರೆ, ಕಪ್ಪು ಕೂದಲಿಗೆ ಇದರ 2 ಪಟ್ಟು ಹೆಚ್ಚು ದರವಿದೆ.
ಹಸಿ ಕೂದಲನ್ನು ಸ್ವಚ್ಛಗೊಳಿಸುವುದರಿಂದ ಪ್ರಾರಂಭಿಸಿ ಹಲವಾರು ಹಂತಗಳಲ್ಲಿ ಸಂಸ್ಕರಿಸಲಾಗುತ್ತದೆ. ಇದನ್ನು ತೊಳೆದು, ಒಣಗಿಸಿ ಉದ್ದ ಮತ್ತು ದಪ್ಪದಿಂದ ವಿಂಗಡಿಸಲಾಗುತ್ತದೆ. ಸೆಟ್‌ಗಳನ್ನು 300 ಗ್ರಾಂನಿಂದ 1 ಕೆಜಿವರೆಗಿನ ವಿವಿಧ ತೂಕದ ಪ್ಯಾಕೇಜ್‌ಗಳಲ್ಲಿ ಕಳುಹಿಸಲಾಗುತ್ತದೆ.
ಭಾರತದಲ್ಲಿ ಸಂಗ್ರಹಿಸಿದ ಕಚ್ಚಾ ಕೂದಲನ್ನು ಮ್ಯಾನ್ಮಾರ್ ಮತ್ತು ಚೀನಾಕ್ಕೆ ಕಳ್ಳಸಾಗಣೆ ಮೂಲಕವೂ ಸಾಗಿಸಲಾಗುತ್ತದೆಯೆಂದರೆ ನಂಬಲೇಬೇಕು. ಈ ವಾಮಮಾರ್ಗದ ದೆಸೆಯಿಂದ, ಸ್ಥಳೀಯವಾಗಿ ಕಚ್ಚಾ ವಸ್ತುಗಳ ಕೊರತೆಯೂ ಎದುರಾಗುತ್ತದೆ. ಇಷ್ಟೆಲ್ಲಾ ಇರುವಾಗ, ಮುಂದಿನ ಬಾರಿ ಸಲೂನ್‌ಗೆ ಹೋದಾಗ, ನಾಪಿತನ ಬಳಿ `ಕತ್ತರಿಸಿದ ಕೂದಲಿನ ಬೆಲೆಯನ್ನೂ ಲೆಸ್ ಮಾಡಿ ಚಾರ್ಜ್ ತಗೊಳ್ರೀ’ ಅಂತ ಕೇಳೋಕೆ ಹೋಗ್ಬೇಡಿ!