Monday, September 7, 2026
Join WhatsApp Group
HomeStateಮೊದಲ ಮಳೆಗೆ ಕೊಚ್ಚಿ ಹೋದ ರಾಷ್ಟ್ರೀಯ ಹೆದ್ದಾರಿ

ಮೊದಲ ಮಳೆಗೆ ಕೊಚ್ಚಿ ಹೋದ ರಾಷ್ಟ್ರೀಯ ಹೆದ್ದಾರಿ

 ಮಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಳ್ಳುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಇತ್ತೀಚೆಗೆ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗವೇ ಕೊಚ್ಚಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಹೆದ್ದಾರಿ ಮೊದಲ ಮಳೆಯನ್ನೇ ತಡೆದುಕೊಳ್ಳದೆ ಕುಸಿದಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೂಡುಬಿದಿರೆ ತಾಲೂಕಿನ ತೆಂಕ ಮಿಜಾರು ಪ್ರದೇಶದಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಮಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ಸ್ಥಳೀಯರು ಹಾಗೂ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಸಾರ್ವಜನಿಕ ಬಳಕೆಗೆ ಬಂದಿದ್ದ ಈ ಹೆದ್ದಾರಿ ಒಂದು ಮುಂಗಾರು ಋತುವನ್ನೂ ಸಮರ್ಪಕವಾಗಿ ಎದುರಿಸಲು ವಿಫಲವಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಸ್ಥಳೀಯರ ಪ್ರಕಾರ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯವಾದ ವೈಜ್ಞಾನಿಕ ವ್ಯವಸ್ಥೆ ಕಲ್ಪಿಸಿಲ್ಲ. ಹೆಚ್ಚಿನ ಪ್ರಮಾಣದ ನೀರಿನ ಹರಿವನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಮೋರಿ ನಿರ್ಮಿಸಬೇಕಿದ್ದ ಸ್ಥಳದಲ್ಲಿ ಸಣ್ಣ ಗಾತ್ರದ ಮೋರಿ ನಿರ್ಮಿಸಿರುವುದರಿಂದ ನೀರು ರಸ್ತೆಯ ಮೇಲೆಯೇ ಸಂಗ್ರಹಗೊಂಡಿದೆ. ಪರಿಣಾಮವಾಗಿ ರಸ್ತೆಯ ಅಡಿಭಾಗದ ಮಣ್ಣು ಹಾಗೂ ಜಲ್ಲಿಕಲ್ಲುಗಳು ಕೊಚ್ಚಿಹೋಗಿ, ರಸ್ತೆಯ ಒಂದು ಭಾಗ ಕುಸಿದಿದೆ.

ಕಾಮಗಾರಿ ನಿರ್ವಹಿಸಿದ ಡಿಬಿಎಲ್ ಕಂಪನಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕಳಪೆ ಕಾಮಗಾರಿಯಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದ್ದಾರೆ. ಮೊದಲ ಮಳೆಯಲ್ಲೇ ಹೆದ್ದಾರಿ ಹಾನಿಗೊಳಗಾಗಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಮಳೆಯ ಸಂದರ್ಭದಲ್ಲಿ ಇನ್ನಷ್ಟು ಅಪಾಯ ಸಂಭವಿಸುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿ ನಿರ್ಮಾಣದಲ್ಲಿ ಗುಣಮಟ್ಟದ ಮಾನದಂಡಗಳನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share