Saturday, June 13, 2026
HomeLocal Newsಶ್ರೀಕ್ಷೇತ್ರವನ್ನೂ ಬಿಡದ ಕುಡುಕರು!

ಶ್ರೀಕ್ಷೇತ್ರವನ್ನೂ ಬಿಡದ ಕುಡುಕರು!

ಕವಡಿಕೆರೆಯಲ್ಲಿ ಕುಡುಕರ ಹಾವಳಿ | ಪವಿತ್ರ ಕ್ಷೇತ್ರದ ಪರಿಸರಕ್ಕೆ ಕಂಟಕ

ಯಲ್ಲಾಪುರ: ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲೂ ಕುಡುಕರ ಹಾವಳಿ ಹೆಚ್ಚಾಗಿದೆ. ಆ ಊರು, ಈ ಕೇರಿ ಎನ್ನುವಂತಿಲ್ಲ. ಒಂದಿಷ್ಟು ಅವಿವೇಕಿಗಳು ಸಂಜೆಯ ಹೊತ್ತಿಗೆ ಪಟ್ಟಣದ ಕಡೆ ಹೋದರೆಂದರೆ, ವಾಪಸ್‌ ಬರುವಾಗ ಕೈಲೊಂದಿಷ್ಟು ಸಾರಾಯಿ, ಚಿಪ್ಸ್‌ ಪ್ಯಾಕೆಟ್‌ಗಳು ಇರಲೇಬೇಕು ಎಂಬಂತಾಗಿದೆ.

ಸುಮ್ಮನೇ ಮನೆಸೇರಿ ಅಮಲೇರಿಸಿಕೊಳ್ಳುವವರು ಇವರಲ್ಲ. ಮನೆಗೆ ಬರುವ ಮಾರ್ಗ ಮಧ್ಯದಲ್ಲಿ ಎಲ್ಲಾದರೂ ಚಂದಾಗಿ ಕುಳಿತು ಒಂದಿಷ್ಟು ಪಟ್ಟಾಂಗ ಹೊಡೆಯುತ್ತ ನಿಸರ್ಗವನ್ನೇ ಓಪನ್‌ ಬಾರ್‌ನಂತಾಗಿಸುವುದರಲ್ಲಿ ಇವರಿಗೆಲ್ಲಾ ಎಲ್ಲಿಲ್ಲದ ಖುಷಿ.

ದಾರಿಯಂಚಿನ ಕಾಡು, ಮೋರಿಕಟ್ಟೆಗಳೆಲ್ಲಾ ಕಳೆದು, ದೇವಸ್ಥಾನದದಂತಹ ಪವಿತ್ರ ಸ್ಥಳಗಳ ವಾತಾವರಣವೂ ಈ ಜನರಿಗೆ ಪ್ರಿಯವಾಗತೊಡಗಿದೆ. ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀಕ್ಷೇತ್ರ ಕವಡಿಕೆರೆಯೂ ಇದಕ್ಕೆ ಹೊರತಾಗಿಲ್ಲ.

ವಿಶಾಲವಾದ, ಪುರಾಣಪ್ರಸಿದ್ಧ ಕ್ಷೇತ್ರವಾದ ಕವಡಿಕೆರೆಯ ಪ್ರಕೃತಿ ಸೌಂದರ್ಯ, ದೇವಾಲಯದ ಶಾಂತ ವಾತಾವರಣ ಎಂಥವರನ್ನೂ ಸೆಳೆಯುವಂತಿದೆ. ಮಾಗೋಡು ಜಲಪಾತ, ಜೇನುಕಲ್ಲುಗುಡ್ಡ, ಚಂದಗುಳಿ ಇತ್ಯಾದಿ ಸ್ಥಳಗಳಿಗೆ ಪ್ರವಾಸಕ್ಕೆ ಬರುವವರು ಕೂಡ ಕವಡಿಕೆರೆಗೆ ಭೇಟಿ ನೀಡದೇ ಹೋಗುವುದಿಲ್ಲ.

ಆದರೆ, ಹೀಗೆ ಬರುವ ಪ್ರವಾಸಿಗರು, ಭಕ್ತಾದಿಗಳನ್ನು ಸ್ವಾಗತಿಸುವುದು ಮಾತ್ರ ಖಾಲಿ ಹೆಂಡದ ಬಾಟಲಿ, ಒಡೆದ ಬಿಯರ್‌ ಬಾಟಲಿ, ಕಂಡಕಂಡಲ್ಲಿ ಹರಡಿರುವ ಪ್ಲಾಸ್ಟಿಕ್‌ ತ್ಯಾಜ್ಯಗಳೇ. ಬೆಳಕು ಕರಗಿ ಕತ್ತಲು ಆವರಿಸುತ್ತಿದ್ದಂತೆಯೇ ಎಲ್ಲೆಲ್ಲಿಂದಲೋ ಬರುವ ಪುಂಡರು ಕೆರೆಯ ದಡದಲ್ಲಿಯೇ ಸುರಾಪಾನ ಮಾಡಿ, ಇತ್ತಲಿನ ಪರಿವೆಯೇ ಇಲ್ಲದೆ ತ್ಯಾಜ್ಯಗಳನ್ನು ಹರಡಿ ಹೋಗುತ್ತಿದ್ದು, ಆಗುತ್ತಿರುವ ಅವಾಂತರಗಳು ಒಂದೆರಡಲ್ಲ.

ಮೇಯಲೆಂದು ಕೆರೆಯಂಚಿಗೆ ಬರುವ ಜಾನುವಾರುಗಳು ಅರಿಯದೇ ಇಲ್ಲಿ ಎಸೆದ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ತಿಂದು ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುತ್ತಿವೆ. ಸ್ಥಳೀಯರಿಗಂತೂ ಇನ್ನಿಲ್ಲದ ಕಿರಿಕಿರಿ. ವಿಚಾರಿಸಲು ಹೋದರೆ ಮೈಮೇಲೆರಗಿ ಬರುವ ಈ ಪುಂಡರ ಬಗ್ಗೆ ಪಂಚಾಯಿತಿಯಾಗಲೀ, ಅರಣ್ಯ ಇಲಾಖೆಯಾಗಲೀ ತಲೆ ಕೆಡಿಸಿಕೊಳ್ಳದಿರುವುದು ಅನುಮಾನ ಮೂಡಿಸುತ್ತದೆ.

ಕೆರೆಗೆ ತಾಗಿಯೇ ಅರಣ್ಯ ಇಲಾಖೆಯ ಸಸ್ಯಪಾಲನಾ ಕ್ಷೇತ್ರವಿದೆ. ಕೆರೆ ಗ್ರಾಮ ಪಂಚಾಯಿತಿಗೆ ಸೇರಿದ್ದರೆ ಅಕ್ಕಪಕ್ಕದ ಜಾಗ ಅರಣ್ಯ ಇಲಾಖೆಗೆ ಸೇರಿದ್ದು. ಇಂತಹ ಸ್ಥಳದಲ್ಲಿ ಹಾವಳಿ ಮಾಡುವ ಪುಂಡ ಪೋಕರಿಗಳಿಗೆ ಸಂಬಂಧಿಸಿದ ಪಂಚಾಯಿತಿ, ಅರಣ್ಯ ಇಲಾಖೆ ಬಿಸಿ ಮುಟ್ಟಿಸುವ ಕೆಲಸ ಮಾಡದಿದ್ದರೆ ಕವಡಿಕೆರೆಯಂತಹ ಪುರಾಣ ಪ್ರಸಿದ್ಧ ಕ್ಷೇತ್ರದ ಹೆಸರಿಗೆ ಮಸಿ ಅಂಟುವುದಂತೂ ಸತ್ಯ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share