Monday, September 7, 2026
Join WhatsApp Group
HomeAgricultureಬದುಕಿಗೆ ಸಿಹಿಯುಣಿಸಿದ ಜೇನು ಕೃಷಿ

ಬದುಕಿಗೆ ಸಿಹಿಯುಣಿಸಿದ ಜೇನು ಕೃಷಿ

ಶಿರಸಿ: ಇಂದಿನ ದಿನಗಳಲ್ಲಿ ಕೃಷಿಯ ಜೊತೆಗೆ ಪೂರಕ ಉದ್ಯೋಗದತ್ತ ಯುವಕರು ಆಸಕ್ತಿ ತೋರುತ್ತಿರುವುದು ಹೆಚ್ಚುತ್ತಿದೆ. ಕಡಿಮೆ ಬಂಡವಾಳದಲ್ಲಿ ಆರಂಭಿಸಿ ಉತ್ತಮ ಆದಾಯ ಗಳಿಸಬಹುದಾದ ಕ್ಷೇತ್ರಗಳಲ್ಲಿ ಜೇನು ಕೃಷಿಯೂ ಒಂದು. ಶಿರಸಿ ತಾಲೂಕಿನ ಬಕ್ಕಳ-ಯಂಕನಜಡ್ಡಿಯ ಯುವ ಕೃಷಿಕ ಗಣೇಶ ಹೆಗಡೆ ಈ ಮಾತಿಗೆ ಉತ್ತಮ ಉದಾಹರಣೆ.

ಮನೆಯ ಬಳಕೆಗೆಂದು ಕೇವಲ ಒಂದು ಜೇನು ಪೆಟ್ಟಿಗೆಯಿಂದ ಆರಂಭಿಸಿದ ಅವರ ಪ್ರಯಾಣ ಇಂದು ಯಶಸ್ವಿ ಉದ್ಯಮವಾಗಿ ಬೆಳೆದಿದೆ. ಆರಂಭದಲ್ಲಿ ಹವ್ಯಾಸವಾಗಿ ಶುರುವಾದ ಜೇನು ಸಾಕಾಣಿಕೆ, ಕ್ರಮೇಣ ಆದಾಯದ ಮೂಲವಾಗಿ ರೂಪುಗೊಂಡಿದೆ. ಇಂದು ಅವರು ಸುಮಾರು 40 ಜೇನು ಪೆಟ್ಟಿಗೆಗಳನ್ನು ನಿರ್ವಹಿಸುತ್ತಿದ್ದು, ಜೇನು ಕೃಷಿಯ ಮೂಲಕ ಗಮನಾರ್ಹ ಆದಾಯ ಗಳಿಸುತ್ತಿದ್ದಾರೆ.

ಜೇನು ಕೃಷಿಗೆ ದೊಡ್ಡ ಬಂಡವಾಳಕ್ಕಿಂತ ತಾಳ್ಮೆ ಮತ್ತು ಆಸಕ್ತಿಯೇ ಮುಖ್ಯ ಎಂಬುದನ್ನು ಗಣೇಶ ಹೆಗಡೆ ತಮ್ಮ ಅನುಭವದ ಮೂಲಕ ಕಂಡುಕೊಂಡಿದ್ದಾರೆ. ಜೇನು ಸಾಕಾಣಿಕೆಯಲ್ಲಿ ಪರಿಣತಿ ಗಳಿಸಿದ ಅವರು ಪ್ರತಿವರ್ಷ 20ಕ್ಕೂ ಹೆಚ್ಚು ಜೇನು ಸಂಸಾರ ಸಮೇತ ಪೆಟ್ಟಿಗೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಜೇನುತುಪ್ಪದ ಮಾರಾಟದಿಂದಲೂ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಕೇವಲ ಉದ್ಯಮಿಯಾಗಿ ಮಾತ್ರವಲ್ಲದೆ ತರಬೇತುದಾರರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಶಿರಸಿಯ ಕೃಷಿ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಜೇನು ಕೃಷಿಯ ಪ್ರಾಯೋಗಿಕ ಜ್ಞಾನ ಪಡೆಯಲು ಅವರ ತೋಟಕ್ಕೆ ಭೇಟಿ ನೀಡುತ್ತಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಜೇನು ಕೃಷಿಯ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಹೊಸಬರನ್ನು ಈ ಕ್ಷೇತ್ರದತ್ತ ಆಕರ್ಷಿಸುತ್ತಿದ್ದಾರೆ.

ಜೇನು ಸಂಸಾರಗಳ ಮಾರಾಟದ ಜೊತೆಗೆ ಜೇನು ಪೆಟ್ಟಿಗೆಗಳು ಹಾಗೂ ಅಗತ್ಯ ಸಲಕರಣೆಗಳನ್ನೂ ಪೂರೈಸುತ್ತಿರುವ ಅವರು, ಗ್ರಾಮೀಣ ಭಾಗದಲ್ಲಿಯೂ ಕೃಷಿ ಆಧಾರಿತ ಉದ್ಯಮಗಳಿಂದ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರೊಂದಿಗೆ ಪತ್ನಿ ಹಾಕೂ ಮಕ್ಕಳೂ ಕೂಡ ಜೇನು ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡು ಸಾಥ್‌ ನೀಡುತ್ತಿರುವುದೂ ವಿಶೇಷ.

ಕಠಿಣ ಪರಿಶ್ರಮ, ಆಸಕ್ತಿ ಮತ್ತು ನಿರಂತರ ಕಲಿಕೆಯ ಮನೋಭಾವ ಇದ್ದರೆ ಸಣ್ಣ ಪ್ರಯತ್ನವೂ ದೊಡ್ಡ ಯಶಸ್ಸಿಗೆ ಕಾರಣವಾಗಬಹುದು ಎಂಬುದನ್ನು ಗಣೇಶ ಹೆಗಡೆ ಅವರ ಜೇನು ಕೃಷಿಯ ಪಯಣ ತೋರಿಸಿಕೊಡುತ್ತದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share