Saturday, June 13, 2026
HomeInformationಈ ಕೀಟವೀಗ ಸೂಪರ್ ಫುಡ್!

ಈ ಕೀಟವೀಗ ಸೂಪರ್ ಫುಡ್!

ಜಿಐ ಟ್ಯಾಗ್ ಪಡೆದುಕೊಂಡ ಒಡಿಶಾದ ಕೆಂಪು ಇರುವೆ ಚಟ್ನಿ

ಎರಡು ವರ್ಷದ ಹಿಂದಿನ ಬೆಳವಣಿಗೆಯಲ್ಲಿ, ಒಡಿಶಾದ ಪ್ರಸಿದ್ಧ ಕೆಂಪು ಇರುವೆ ಚಟ್ನಿ ಪ್ರತಿಷ್ಠಿತ ಜಿಐ ಲೇಬಲ್ ಗಳಿಸಿದ್ದು, ಇದು ಜಾಗತಿಕವಾಗಿ ಗುರುತಿಸಲ್ಪಟ್ಟ ಸೂಪರ್ ಫುಡ್ ಸ್ಥಾನಮಾನಕ್ಕೆ ಏರಿದೆ.

ಒಡಿಶಾದ ಪಾಕಶಾಲೆಯ ಸಂಪ್ರದಾಯಗಳಲ್ಲಿ ಬೇರೂರಿರುವ ಈ ಅಸಾಂಪ್ರದಾಯಿಕ, ಅಸಾಧಾರಣ ಪಾಕ ಪದ್ಧತಿ ಸಾಂಸ್ಕೃತಿಕ ಪರಂಪರೆಯ ಸಂಕೇತ! ಅದರ ವಿಶಿಷ್ಟ ಪರಿಮಳವನ್ನು ಮೀರಿ, ಜಿಐ ಟ್ಯಾಗ್ ಪಡೆದ ಕೆಂಪು ಇರುವೆ ಚಟ್ನಿ ಅಸಾಧಾರಣ ಪೌಷ್ಠಿಕಾಂಶದ ಗುಣಗಳನ್ನು ಹೊಂದಿರುವ ಸೂಪರ್ ಫುಡ್ ಆಗಿ ಮಾನ್ಯತೆ ಗಳಿಸಿದೆ.

ವೈಜ್ಞಾನಿಕವಾಗಿ ಒಕೊಫಿಲ್ಲಾ ಸ್ಮರಗ್ಡಿನಾ ಎಂದು ಕರೆಯಲ್ಪಡುವ ಕೆಂಪು ವೀವರ್ ಇರುವೆ, ಚಿಗಳಿ ಇರುವೆ, ಕೆಂಪಿರುವೆ ಎಂದೆಲ್ಲಾ ಕರೆಯಿಸಿಕೊಳ್ಳುವ ಇರುವೆ ಪ್ರಬೇಧ ತಮ್ಮ ನೋವಿನ ಕುಟುಕುವಿಕೆಗೆ ಹೆಸರುವಾಸಿಯಾಗಿದ್ದು, ಚರ್ಮದ ಮೇಲೆ ಗುಳ್ಳೆಗಳನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ.

ಈ ಇರುವೆಗಳು ಮಯೂರಭಂಜ್ ಕಾಡುಗಳಲ್ಲಿ, ವಿಶೇಷವಾಗಿ ಸಿಮಿಲಿಪಾಲ್ ಕಾಡುಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ಏಷ್ಯಾದ 2ನೇ ಅತಿದೊಡ್ಡ ಜೀವಗೋಳವೂ ಆಗಿರುವುದು ಇನ್ನೊಂದು ವಿಶೇಷ. ಈ ಅಸಾಧಾರಣ (ಕು)ಖ್ಯಾತಿಯ ಹೊರತಾಗಿಯೂ, ಕೆಂಪು ಇರುವೆ ಚಟ್ನಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಅನೇಕ ಭಾರತೀಯ ರೆಸ್ಟೋರೆಂಟ್‌ಗಳು ಈ ಬುಡಕಟ್ಟು ಮೂಲದ ಖಾದ್ಯವನ್ನು ತಮ್ಮ ಮೆನುಗಳಲ್ಲಿ ಸೇರಿಸಿವೆಯೆಂದರೆ ನಂಬಲೇಬೇಕು!

ಬ್ರಿಟಿಷ್ ಬಾಣಸಿಗ ಗಾರ್ಡನ್ ರಾಮ್ಸೆ 2018ರಲ್ಲಿ ಕೆಂಪಿರುವೆಯ ಚಟ್ನಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಭಾವಿಸಿ, ಅದನ್ನು ತಮ್ಮ ಊಟದ ಮೆನುವಿನಲ್ಲಿ ಸೇರಿಸಿದ್ದರು. ಶತಮಾನಗಳಿಂದ, ಜಾಗತಿಕವಾಗಿ ಹಲವು ಬುಡಕಟ್ಟು ಜನಾಂಗದವರು ಈ ಕೀಟಗಳನ್ನು ತಮ್ಮ ಆಹಾರದಲ್ಲಿ ಅಳವಡಿಸಿಕೊಂಡಿದ್ದಾರೆ. ಒಡಿಶಾದ ಮಯೂರಭಂಜ್ ಜಿಲ್ಲೆಯಲ್ಲಿ, ಈ ಕೆಂಪು ನೇಕಾರ ಇರುವೆಗಳನ್ನು `ಕೈ ಚಟ್ನಿ’ ತಯಾರಿಸಲು ಬಳಸಲಾಗುತ್ತದೆ.

ಈ ಪ್ರದೇಶದಲ್ಲಿ ಪೌಷ್ಠಿಕಾಂಶ ಮತ್ತು ಚಿಕಿತ್ಸಕ ಪ್ರಯೋಜನಗಳಿಗಾಗಿ ಗುರುತಿಸಲ್ಪಟ್ಟ ಈ ವಿಶಿಷ್ಟ ಖಾರದ ಚಟ್ನಿಗೆ ಜನವರಿ 2024ರಲ್ಲಿ ಭೌಗೋಳಿಕ ಸೂಚಕ (ಜಿಐ) ಸ್ಥಾನಮಾನವನ್ನು ನೀಡಲಾಯಿತು. ಜಿಲ್ಲೆಯ ನೂರಾರು ಸ್ಥಳೀಯ ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಈ ಕೀಟಗಳು ಮತ್ತು ಚಟ್ನಿಗಳ ಸಂಗ್ರಹ ಮತ್ತು ಮಾರಾಟವನ್ನು ಅವಲಂಬಿಸಿವೆ. ಕೆಂಪು ಇರುವೆಗಳನ್ನು ಅಡುಗೆಗಾಗಿ ಸಂಗ್ರಹಿಸುವ ಮೊದಲು, ಇರುವೆಗಳು ಮತ್ತು ಅವುಗಳ ಮೊಟ್ಟೆಗಳನ್ನು ಅವುಗಳ ಗೂಡುಗಳಿಂದ ತೆಗೆದು ಸ್ವಚ್ಛಗೊಳಿಸಲಾಗುತ್ತದೆ.

ಚಟ್ನಿ ತಯಾರಿಸಲು ಉಪ್ಪು, ಶುಂಠಿ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿಗಳ ಮಿಶ್ರಣವನ್ನು ರುಬ್ಬಿದ ಮಸಾಲೆ ಬಳಸುತ್ತಾರೆ. ಇದಲ್ಲದೆ, ಜಾರ್ಖಂಡ್ ಮತ್ತು ಛತ್ತೀಸಗಢದಂತಹ ಇತರ ಪೂರ್ವ ರಾಜ್ಯಗಳು ಇದೇ ರೀತಿಯ ಕೆಂಪು ಇರುವೆ ಚಟ್ನಿಗಳನ್ನು ಮಾರಾಟ ಮಾಡುತ್ತವೆ.

ಅದರ ರುಚಿಯ ಹೊರತಾಗಿ, ಕೆಂಪು ಇರುವೆ ಚಟ್ನಿ ಸಂಭಾವ್ಯ ಆರೋಗ್ಯ ಪ್ರಯೋಜನಗಳಿಗೂ ಹೆಸರುವಾಸಿಯಾಗಿದೆ.  ಚಟ್ನಿ ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸತು, ಪ್ರೋಟೀನ್ ಮತ್ತು ವಿಟಮಿನ್ ಬಿ-12ನ ಉತ್ತಮ ಮೂಲವನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.

ಈ ವಿಶೇಷ ಚಟ್ನಿಯನ್ನು ದೃಢವಾದ ನರವೈಜ್ಞಾನಿಕ ವ್ಯವಸ್ಥೆ ಮತ್ತು ಮೆದುಳಿನ ಬೆಳವಣಿಗೆಗೆ ಅದರ ಕೊಡುಗೆಗಾಗಿ ಗುರುತಿಸಲಾಗಿದೆ. ಇದು ಖಿನ್ನತೆ, ಬಳಲಿಕೆ ಮತ್ತು ಸ್ಮರಣೆ ನಷ್ಟದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ನಮ್ಮ ಊಟದಲ್ಲಿ ಪ್ರೋಟೀನ್ ಮೂಲವಾಗಿ ಕೀಟಗಳನ್ನು ಸೇರಿಸುವುದು ಹಲವಾರು ಅಧ್ಯಯನಗಳು ಮತ್ತು ಸಂಶೋಧನಾ ಯೋಜನೆಗಳ ಆಧಾರದ ಮೇಲೆ ಪರಿಸರ ಸಮಸ್ಯೆಗಳಿಗೆ ಸಂಭಾವ್ಯ ಪರಿಹಾರವಾಗಿ ಸೂಚಿಸಲಾಗಿದೆ.

ಇಷ್ಟೆಲ್ಲಾ ಇರುವಾಗ, ನಮ್ಮ ಕರ್ನಾಟಕದ ಬುಡಕಟ್ಟು ಜನಾಂಗದವರೂ ಕೂಡ ತಲೆಮಾರುಗಳಿಂದ ಇದೇ ವಿಧದ ಕೆಂಪು ಇರುವ ಚಟ್ನಿಯನ್ನು ಬಳಸುತ್ತಿದ್ದಾರೆ! ಉತ್ತರ ಕನ್ನಡ ಜಿಲ್ಲೆಯ ಕಾಡಂಚುಗಳಲ್ಲಿ ವಾಸಿಸುವ ಸಿದ್ದಿ ಜನಾಂಗದವರು ಅನಾದಿ ಕಾಲದಿಂದಲೂ ಈ ಕೆಂಜಿರುವೆಯ ಚಟ್ನಿಯನ್ನು ಉತ್ತಮ ನೋವು ನಿವಾರಕವಾಗಿ ಬಳಸುತ್ತಾರೆ.

– ಸತೀಶ್ ಭಟ್, ಮಾಗೋಡ್.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share