Sunday, September 6, 2026
Join WhatsApp Group
HomeLocal Newsಸರ್ಕಾರಿ ಕಚೇರಿಗಳಲ್ಲಿ ಇನ್ನು ʻಸುಳ್ಳು ಹಾಜರಿʼಗೆ ಬ್ರೇಕ್!

ಸರ್ಕಾರಿ ಕಚೇರಿಗಳಲ್ಲಿ ಇನ್ನು ʻಸುಳ್ಳು ಹಾಜರಿʼಗೆ ಬ್ರೇಕ್!

ಕರ್ತವ್ಯ ಆ್ಯಪ್‌ಗೆ ಭರ್ಜರಿ ಸ್ಪಂದನೆ

ಕಾರವಾರ: ಸರ್ಕಾರಿ ಕಚೇರಿಗಳಿಗೆ ಹೋದರೆ ಅಧಿಕಾರಿಗಳು ಸಿಗುವುದಿಲ್ಲ, ಸಹಿ ಹಾಕಿ ಹೊರಗೆ ಹೋಗಿರುತ್ತಾರೆ ಎಂಬ ಸಾರ್ವಜನಿಕರ ದೂರುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ‘ಕರ್ತವ್ಯ’ (KAAMS – Karnataka Advanced Attendance Management System) ಆ್ಯಪ್‌ಗೆ ರಾಜ್ಯದಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಕೃತಕ ಬುದ್ಧಿಮತ್ತೆ (AI), ಮುಖ ಗುರುತಿಸುವಿಕೆ ಮತ್ತು ಜಿಯೋಫೆನ್ಸಿಂಗ್ ತಂತ್ರಜ್ಞಾನದ ನೆರವಿನಿಂದ ರೂಪುಗೊಂಡಿರುವ ಈ ವ್ಯವಸ್ಥೆ ಸರ್ಕಾರಿ ನೌಕರರ ಭೌತಿಕ ಹಾಜರಾತಿಯನ್ನು ಖಚಿತಪಡಿಸುತ್ತಿದ್ದು, ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಹೆಚ್ಚಿಸುವ ಗುರಿ ಹೊಂದಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿ ಕಚೇರಿ ವೇಳೆಯಲ್ಲಿ ಶೇ.100ರಷ್ಟು ಹಾಜರಿರಬೇಕು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಸೂಚನೆ ನೀಡಿದ ಬೆನ್ನಲ್ಲೇ ಈ ನೂತನ ವ್ಯವಸ್ಥೆ ಅನುಷ್ಠಾನಗೊಳ್ಳುತ್ತಿದೆ.

ಹಿಂದೆ ಜಾರಿಯಲ್ಲಿದ್ದ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಹಾಜರಾತಿ ದಾಖಲಿಸಿ ಕಚೇರಿಯಿಂದ ಹೊರ ಹೋಗುವ ಸಾಧ್ಯತೆಗಳಿದ್ದರೆ, ಈಗ ಉದ್ಯೋಗಿಗಳು ಕಚೇರಿಯ ನಿಗದಿತ ವ್ಯಾಪ್ತಿಯೊಳಗೇ ಇದ್ದಾಗ ಮಾತ್ರ ಹಾಜರಾತಿ ದಾಖಲಿಸಲು ಸಾಧ್ಯವಾಗುತ್ತಿದೆ.

ಈ ವ್ಯವಸ್ಥೆಯ ವಿಶೇಷವೆಂದರೆ, ಇದು ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ ಸ್ವಂತ ತಂತ್ರಜ್ಞಾನ ಸಾಮರ್ಥ್ಯದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಯಾವುದೇ ಖಾಸಗಿ ಸಂಸ್ಥೆಗಳ ನೆರವಿಲ್ಲದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಸೆಂಟರ್ ಫಾರ್ ಇ-ಗವರ್ನೆನ್ಸ್ (CeG) ಹಾಗೂ ಕರ್ನಾಟಕ ಎಐ ಸೆಲ್ ಜಂಟಿಯಾಗಿ ‘ಕರ್ತವ್ಯ’ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿವೆ. ಇದರಿಂದ ಸರ್ಕಾರದ ಕೋಟ್ಯಂತರ ರೂಪಾಯಿ ವೆಚ್ಚ ಉಳಿತಾಯವಾಗಿದ್ದು, ದತ್ತಾಂಶ ಸುರಕ್ಷತೆಯೂ ಹೆಚ್ಚಾಗಿದೆ.

ಆ್ಯಪ್‌ನಲ್ಲಿ ಎಐ ಆಧಾರಿತ ಮುಖ ಗುರುತಿಸುವಿಕೆ, ಲೈವ್‌ನೆಸ್ ಡಿಟೆಕ್ಷನ್, ಜಿಯೋಫೆನ್ಸಿಂಗ್, ಆಧಾರ್ ಇ-ಕೆವೈಸಿ ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯ ಸಂಯೋಜನೆ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗಿದೆ.

ಜೊತೆಗೆ ಆಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್ ಆ್ಯಪ್ ಮೂಲಕ ಹಾಜರಾತಿ, ರಜೆ ಹಾಗೂ ಅಧಿಕೃತ ಕರ್ತವ್ಯ ಸಂಬಂಧಿತ ಮಾಹಿತಿಯನ್ನು ದಾಖಲಿಸುವ ಅವಕಾಶವೂ ಕಲ್ಪಿಸಲಾಗಿದೆ.

ಈ ವ್ಯವಸ್ಥೆಗೆ ಸರ್ಕಾರಿ ನೌಕರರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಕಳೆದ ವಾರ ಸುಮಾರು 2.46 ಲಕ್ಷವಿದ್ದ ನೋಂದಾಯಿತ ಉದ್ಯೋಗಿಗಳ ಸಂಖ್ಯೆ ಇದೀಗ 3.01 ಲಕ್ಷಕ್ಕೆ ಏರಿಕೆಯಾಗಿದೆ. ಕೇವಲ ಒಂದು ವಾರದಲ್ಲೇ 55 ಸಾವಿರಕ್ಕೂ ಅಧಿಕ ಹೊಸ ನೋಂದಣಿಗಳು ನಡೆದಿದ್ದು, ಇದು ಶೇ.25ಕ್ಕಿಂತ ಹೆಚ್ಚು ಬೆಳವಣಿಗೆಯಾಗಿದೆ. ಇದೇ ಅವಧಿಯಲ್ಲಿ ದೈನಂದಿನ ಹಾಜರಾತಿ ದಾಖಲೆಗಳ ಸಂಖ್ಯೆಯೂ 1.85 ಲಕ್ಷದಿಂದ 2.32 ಲಕ್ಷಕ್ಕೆ ಏರಿಕೆಯಾಗಿದೆ.

ಪ್ರಸ್ತುತ 42 ಇಲಾಖೆಗಳ 4.78 ಲಕ್ಷಕ್ಕೂ ಅಧಿಕ ನೌಕರರನ್ನು ಈ ವ್ಯವಸ್ಥೆಯ ವ್ಯಾಪ್ತಿಗೆ ತರಲಾಗಿದ್ದು, ಶಾಲಾ ಶಿಕ್ಷಣ ಇಲಾಖೆ ಮೊದಲ ಸ್ಥಾನದಲ್ಲಿದೆ. ಒಟ್ಟು 1.76 ಲಕ್ಷ ಉದ್ಯೋಗಿಗಳ ಪೈಕಿ 1.68 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಂಡಿದ್ದು, ಎರಡನೇ ಸ್ಥಾನದಲ್ಲಿದೆ. ಪದವಿಪೂರ್ವ ಶಿಕ್ಷಣ, ಆಯುಷ್, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗಳು ಕೂಡ ಶೇ.90ಕ್ಕಿಂತ ಹೆಚ್ಚು ನೋಂದಣಿ ಸಾಧಿಸಿವೆ.

ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಪ್ರಕಾರ, ಮುಖ್ಯಮಂತ್ರಿ, ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳು ಪ್ರತಿದಿನ ಈ ವ್ಯವಸ್ಥೆಯ ಡ್ಯಾಶ್‌ಬೋರ್ಡ್ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಕಚೇರಿಯಲ್ಲಿ ಲಭ್ಯವಿಲ್ಲ ಎಂಬ ಸಾರ್ವಜನಿಕರ ದೂರುಗಳಿಗೂ ಈ ವ್ಯವಸ್ಥೆ ಪರಿಣಾಮಕಾರಿ ಪರಿಹಾರ ನೀಡುವ ನಿರೀಕ್ಷೆ ಇದೆ.

ಮೊಬೈಲ್ ಮೂಲಕವೇ ಹಾಜರಾತಿ ದಾಖಲಿಸುವ ಅವಕಾಶ ದೊರೆತಿರುವುದರಿಂದ ಬಯೋಮೆಟ್ರಿಕ್ ಯಂತ್ರಗಳ ಮುಂದೆ ಸಾಲಿನಲ್ಲಿ ನಿಲ್ಲುವ ಅಗತ್ಯ ತಪ್ಪಿದೆ ಎಂದು ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ, ‘ಕರ್ತವ್ಯ’ ಆ್ಯಪ್ ಕೇವಲ ಹಾಜರಾತಿ ವ್ಯವಸ್ಥೆಯಷ್ಟೇ ಅಲ್ಲ; ಸರ್ಕಾರಿ ಆಡಳಿತದಲ್ಲಿ ಶಿಸ್ತು, ಪಾರದರ್ಶಕತೆ ಮತ್ತು ನಾಗರಿಕ ಸ್ನೇಹಿ ಸೇವೆಗಳನ್ನು ಬಲಪಡಿಸುವ ಡಿಜಿಟಲ್ ಸುಧಾರಣೆಯ ಹೊಸ ಅಧ್ಯಾಯವಾಗಿ ಹೊರಹೊಮ್ಮಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share