Monday, September 7, 2026
Join WhatsApp Group
HomeLocal Story17 ಕೋಟಿ ವೆಚ್ಚದ ಫುಟ್‌ಪಾತ್ ಜನರ ಬಳಕೆಗೆ ಅಲ್ಲವೇ?

17 ಕೋಟಿ ವೆಚ್ಚದ ಫುಟ್‌ಪಾತ್ ಜನರ ಬಳಕೆಗೆ ಅಲ್ಲವೇ?

ಅತಿಕ್ರಮಣ, ಕಳ್ಳತನ, ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ

ಯಲ್ಲಾಪುರ: ಪಟ್ಟಣದಲ್ಲಿ ಸುಮಾರು 17 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಫುಟ್‌ಪಾತ್‌ಗಳು ಸಾರ್ವಜನಿಕರ ಬಳಕೆಗೆ ಲಭ್ಯವಾಗದ ಸ್ಥಿತಿಗೆ ತಲುಪಿದ್ದು, ಅವುಗಳ ಮೇಲೆ ಅಂಗಡಿಗಳು, ತಾತ್ಕಾಲಿಕ ಶೆಡ್‌ಗಳು ಹಾಗೂ ವಿವಿಧ ರೀತಿಯ ಅತಿಕ್ರಮಣಗಳು ತಲೆ ಎತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಫುಟ್‌ಪಾತ್‌ಗಳಿಗೆ ಅಳವಡಿಸಲಾಗಿದ್ದ ಕಬ್ಬಿಣದ ಕಂಬಗಳು ಹಾಗೂ ರೇಲಿಂಗ್‌ಗಳನ್ನು ಕೆಲವೆಡೆ ಕಿತ್ತು ಮಾರಾಟ ಮಾಡಲಾಗಿದ್ದು, ಇನ್ನೂ ಕೆಲವರು ಅವುಗಳನ್ನು ತೆರವುಗೊಳಿಸಿ ವ್ಯಾಪಾರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಕಣ್ಣೆದುರೇ ಈ ಬೆಳವಣಿಗೆಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯಕರವಾಗಿದೆ.

ವಿಶ್ವದರ್ಶನ ಸಂಸ್ಥೆಯಿಂದ ಬಸ್ ನಿಲ್ದಾಣದವರೆಗೆ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಅದರಲ್ಲೂ ಚಿಕ್ಕ ಮಕ್ಕಳು ಸಂಚರಿಸುತ್ತಾರೆ. ಆದರೆ ಫುಟ್‌ಪಾತ್‌ಗಳು ಅತಿಕ್ರಮಣಗೊಂಡಿರುವುದರಿಂದ ಮಕ್ಕಳು ಹೆದ್ದಾರಿಯ ಅಂಚಿನಲ್ಲಿ ನಡೆಯುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇದರಿಂದ ಅಪಘಾತದ ಭೀತಿ ಹೆಚ್ಚಾಗಿದೆ.

ವಿಶೇಷವಾಗಿ ಕೋರ್ಟ್ ರಸ್ತೆ ಎದುರಿನ ಫುಟ್‌ಪಾತ್‌ನಲ್ಲಿ ಕಂಬಗಳನ್ನು ತೆರವುಗೊಳಿಸಿ ಸಂಚಾರಿ ಅಂಗಡಿ ಸ್ಥಾಪಿಸಿರುವುದು ಹಲವು ತಿಂಗಳುಗಳಿಂದ ಮುಂದುವರಿದಿದೆ. ಸಂಜೆ ವೇಳೆಗೆ ಅಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ಪಕ್ಕದಲ್ಲೇ ಭಾರೀ ವಾಹನಗಳ ಸಂಚಾರ ಇರುವುದರಿಂದ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾಹುತ ಸಂಭವಿಸುವವರೆಗೆ ಕ್ರಮ ಕೈಗೊಳ್ಳಬಾರದೆಂದು ಅಧಿಕಾರಿಗಳು ಶಪಥ ಮಾಡಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಸಂಘದ ಉತ್ತರ ಕನ್ನಡ ಜಿಲ್ಲಾ ಮುಖಂಡ ನರಸಿಂಹ ಸಾತೊಡ್ಡಿ, ಪಾದಚಾರಿಗಳ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕ ನಿರ್ಮಿಸಲಾದ ಫುಟ್‌ಪಾತ್‌ಗಳು ಇಂದು ಸಾರ್ವಜನಿಕರ ಬದಲು ಕೆಲ ಖಾಸಗಿ ವ್ಯಕ್ತಿಗಳ ಬಳಕೆಗೆ ಸೀಮಿತವಾಗಿವೆ ಎಂದು ಆರೋಪಿಸಿದ್ದಾರೆ.

17 ಕೋಟಿ ರೂ. ವೆಚ್ಚದ ಈ ಫುಟ್‌ಪಾತ್ ಕಾಮಗಾರಿಯ ಕುರಿತು ಸಮಗ್ರ ತನಿಖೆ ನಡೆಸಿ, ಅಗತ್ಯವಿದ್ದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ. ಸಾರ್ವಜನಿಕರ ಹಣದಿಂದ ನಿರ್ಮಿಸಲಾದ ಸೌಲಭ್ಯಗಳು ಜನರಿಗೆ ಉಪಯೋಗವಾಗದಿದ್ದರೆ ಇಂತಹ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶವೇನು ಎಂಬ ಪ್ರಶ್ನೆಗೆ ಸಂಬಂಧಪಟ್ಟವರು ಉತ್ತರಿಸಬೇಕು ಎಂದಿದ್ದಾರೆ.

ಕಾನೂನು ಉಲ್ಲಂಘನೆಗೆ ದಂಡ ವಿಧಿಸುವ ಅಧಿಕಾರಿಗಳು, ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯಾಗುವ ಇಂತಹ ಸ್ಪಷ್ಟ ಅತಿಕ್ರಮಣಗಳು ಹಾಗೂ ಅಪಾಯಗಳನ್ನು ಏಕೆ ಗಮನಿಸುತ್ತಿಲ್ಲ ಎಂಬ ಪ್ರಶ್ನೆಯನ್ನೂ ನರಸಿಂಹ ಸಾತೊಡ್ಡಿ ಎತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ? ಮೂಕ ಪ್ರೇಕ್ಷಕರಂತಾದ ಸಾರ್ವಜನಿಕರು ಕಾಯುವುದೊಂದೇ ದಾರಿಯಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share