Wednesday, June 17, 2026
HomeLocal Newsಬಲಿಗಾಗಿ ಕಾದು ಕುಳಿತಿದೆ ಅಪಾಯಕಾರಿ ಹೊಂಡ

ಬಲಿಗಾಗಿ ಕಾದು ಕುಳಿತಿದೆ ಅಪಾಯಕಾರಿ ಹೊಂಡ

ಯಲ್ಲಾಪುರ: ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿರುವ ಹೊಂಡವೊಂದು ಜಂಬೆಸಾಲ ಬಸ್ ನಿಲ್ದಾಣದ ಸಮೀಪದ ಕಂಚನಳ್ಳಿ ಕ್ರಾಸ್ ಬಳಿ ಗಮನ ಸೆಳೆಯುತ್ತಿದೆ.

ರಸ್ತೆ ಬದಿಯಲ್ಲೇ ನಿರ್ಮಾಣವಾಗಿರುವ ಈ ಆಳವಾದ ಹೊಂಡದಿಂದ ವಾಹನ ಸವಾರರು, ವಿಶೇಷವಾಗಿ ದ್ವಿಚಕ್ರ ವಾಹನ ಚಾಲಕರು ಆತಂಕದಲ್ಲಿದ್ದಾರೆ. ಈ ಹೊಂಡ ಇತ್ತೀಚೆಗೆ ಉಂಟಾದದ್ದಲ್ಲ. ರಸ್ತೆ ಮರುಡಾಂಬರೀಕರಣ ಕಾಮಗಾರಿ ನಡೆದ ಸಂದರ್ಭದಿಂದಲೇ ಈ ಹೊಂಡ ನಿರ್ಮಾಣವಾಗಿದ್ದರೂ, ಲೋಕೋಪಯೋಗಿ ಇಲಾಖೆ ಇದುವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಹೊಂಡವು ರಸ್ತೆಗೆ ಹೊಂದಿಕೊಂಡೇ ಇರುವುದರಿಂದ ರಾತ್ರಿ ವೇಳೆ ಎದುರುಗಡೆಯಿಂದ ಬರುವ ವಾಹನಗಳಿಗೆ ದಾರಿ ಬಿಡುವ ಸಂದರ್ಭಗಳಲ್ಲಿ ದ್ವಿಚಕ್ರ ವಾಹನ ಸವಾರರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ.

ವಾಹನದ ಚಕ್ರ ಸ್ವಲ್ಪ ತಪ್ಪಿದರೂ ನೇರವಾಗಿ ಹೊಂಡಕ್ಕೆ ಬೀಳುವ ಭೀತಿ ಎದುರಾಗುತ್ತಿದೆ. ಈಗಾಗಲೇ ಹಲವರು ಇಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ದೊಡ್ಡ ವಾಹನಗಳ ಚಕ್ರಗಳು ಹೊಂಡಕ್ಕೆ ಇಳಿದರೂ ಜೀವಾಪಾಯದ ಸಾಧ್ಯತೆ ಕಡಿಮೆ ಇದ್ದರೂ, ಬೈಕ್ ಸವಾರರಿಗೆ ಇದು ಗಂಭೀರ ಅಪಾಯವನ್ನುಂಟು ಮಾಡಬಹುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ಇದು ಸಾಮಾನ್ಯ ಗುಂಡಿಯಲ್ಲದೆ, ರಸ್ತೆ ಪಕ್ಕದ ಮೋರಿ ಭಾಗ ಕುಸಿದು ಉಂಟಾಗಿರುವ ಹೊಂಡವಾಗಿರುವುದರಿಂದ ಸ್ಥಳೀಯರು ಸ್ವತಃ ಮಣ್ಣು ತುಂಬಿ ಮುಚ್ಚುವಂತಿಲ್ಲ. ಇದರ ದುರಸ್ತಿಗೆ ಅಗತ್ಯ ತಾಂತ್ರಿಕ ಕ್ರಮ ಮತ್ತು ಪೈಪ್ ಅಳವಡಿಕೆ ಅಗತ್ಯವಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಭವನೀಯ ಅಪಘಾತಗಳನ್ನು ತಡೆಯಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ರಸ್ತೆ ಸುರಕ್ಷತೆ ವಿಚಾರದಲ್ಲಿ ನಿರ್ಲಕ್ಷ್ಯ ತೋರದೇ ಲೋಕೋಪಯೋಗಿ ಇಲಾಖೆ ಶೀಘ್ರ ಸ್ಪಂದಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share