Saturday, July 25, 2026
Join WhatsApp Group
HomeLocal Newsವಂದೇ ಭಾರತ್ ಕಾರವಾರಕ್ಕೆ ತರಲು ಪ್ರಯತ್ನ; ಕಾಗೇರಿ

ವಂದೇ ಭಾರತ್ ಕಾರವಾರಕ್ಕೆ ತರಲು ಪ್ರಯತ್ನ; ಕಾಗೇರಿ

ಕಾರವಾರ: ಕರಾವಳಿಯ ಜನರ ಬಹುಕಾಲದ ಬೇಡಿಕೆಯಾಗಿರುವ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲನ್ನು ಕಾರವಾರದವರೆಗೆ ವಿಸ್ತರಿಸುವ ಕುರಿತು ಕರಾವಳಿಯ ಎಲ್ಲಾ ಸಂಸದರು ಒಟ್ಟಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಶನಿವಾರ ಕುಮಟಾ ರೈಲು ನಿಲ್ದಾಣದಲ್ಲಿ ನೂತನ ಪ್ರಯಾಣಿಕರ ಸೌಲಭ್ಯಗಳ ಉದ್ಘಾಟನೆ ಹಾಗೂ ಕಾಚಿಗುಡ-ಮುರುಡೇಶ್ವರ ದ್ವಿಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ಕುಮಟಾದವರೆಗೆ ವಿಸ್ತರಿಸಿದ ಹಿನ್ನೆಲೆಯಲ್ಲಿ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

ಕುಮಟಾ ರೈಲು ನಿಲ್ದಾಣದಲ್ಲಿ ಸುಮಾರು ₹2.4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಫ್ಲಾಟ್‌ಫಾರ್ಮ್, ಗೋಕರ್ಣ ರೈಲು ನಿಲ್ದಾಣದಲ್ಲಿ ₹1.18 ಕೋಟಿ ವೆಚ್ಚದ ಮೇಲ್ದರ್ಜೆ ಕಾಮಗಾರಿ, ಭಟ್ಕಳದಲ್ಲಿ ₹53 ಲಕ್ಷ ಹಾಗೂ ಮುರುಡೇಶ್ವರದಲ್ಲಿ ₹10 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳನ್ನು ಒಳಗೊಂಡಂತೆ ಒಟ್ಟು ಸುಮಾರು ₹10 ಕೋಟಿ ವೆಚ್ಚದ ಸಾರ್ವಜನಿಕ ಉಪಯೋಗದ ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕೊಂಕಣ ರೈಲ್ವೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ ₹7,000 ಕೋಟಿ ಮೊತ್ತದ ಸಮಗ್ರ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದರು.

ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಕುಮಟಾ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚುವರಿ ಶೆಲ್ಟರ್ ನಿರ್ಮಾಣ ಹಾಗೂ ಹೆಗಡೆ ಸಮೀಪ ಮೇಲ್ಸೇತುವೆ ನಿರ್ಮಾಣಕ್ಕೆ ಅಂದಾಜು ವೆಚ್ಚ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೊಂಕಣ ರೈಲ್ವೆ ಕಾಮಗಾರಿಯಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ನಿರಂತರ ಹೋರಾಟದ ಫಲವಾಗಿ ಕುಮಟಾ ಭಾಗಕ್ಕೆ ಕೊಂಕಣ ರೈಲ್ವೆಯಲ್ಲಿ ಹೆಚ್ಚಿನ ಸೌಲಭ್ಯಗಳು ದೊರಕುತ್ತಿವೆ ಎಂದು ಹೇಳಿದರು. ರೈಲುಗಳಲ್ಲಿ ಮುಂದಿನ ನಿಲ್ದಾಣದ ದೂರದ ಮಾಹಿತಿಯನ್ನು ಸ್ಕ್ರೋಲಿಂಗ್ ವ್ಯವಸ್ಥೆಯ ಮೂಲಕ ಪ್ರಕಟಿಸಬೇಕು ಹಾಗೂ ಶೌಚಾಲಯಗಳಿಗೆ ಸ್ಲೈಡಿಂಗ್ ಬಾಗಿಲುಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಕಾರವಾರ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ, ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ಸುಧಾ ಕೃಷ್ಣಮೂರ್ತಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರೈಲು ಸಂಖ್ಯೆ 12790/12789 ಕಾಚಿಗುಡ-ಮುರುಡೇಶ್ವರ-ಕಾಚಿಗುಡ ದ್ವಿಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ಕುಮಟಾದವರೆಗೆ ವಿಸ್ತರಿಸಿರುವುದರಿಂದ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ನಡುವಿನ ಸಂಪರ್ಕ ಮತ್ತಷ್ಟು ಬಲವಾಗಲಿದೆ ಎಂದು ತಿಳಿಸಲಾಯಿತು. ಈ ಸೇವೆಯಿಂದ ವಿದ್ಯಾರ್ಥಿಗಳು, ಉದ್ಯಮಿಗಳು, ಪ್ರವಾಸಿಗರು ಹಾಗೂ ಸ್ಥಳೀಯ ನಿವಾಸಿಗಳಿಗೆ ನೇರ ಸಂಪರ್ಕ ದೊರೆಯಲಿದ್ದು, ಕರಾವಳಿ ಭಾಗದ ಆರ್ಥಿಕ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share