ಇಂದಿನ ಕಾಲಕ್ಕೆ ಸ್ಟ್ರೀಟ್ ಫುಡ್‌ಗಳನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ?! ಹಾಗೇ ಸಂಜೆಯ ಹೊತ್ತಿಗೆ ಅಲ್ಲೆಲ್ಲಾದರೂ ಪಾರ್ಕ್ ಸುತ್ತಾಟ, ವಾಕಿಂಗ್, ಶಾಪಿಂಗ್ ಎನ್ನುತ್ತ ಒಂದಿಷ್ಟು ಅಲೆದಾಡಿ, ವಾಪಸ್ ಬರುವಾಗ ರಸ್ತೆಯಂಚಿನ ಅಂಗಡಿಗಳಲ್ಲಿ ಏನಾದರೊಂದಿಷ್ಟು ಹೊಟ್ಟೆಗೆ ಇಳಿಸಿ ಬಂದರೇನೇ ನೆಮ್ಮದಿ! ಕೆಲವರಿಗಂತೂ ಇದು ಅಭ್ಯಾಸವೇ ಆಗಿದೆಯೆನ್ನಿ. ಆದರೆ, ಅದೇ ತಿಂಡಿಯನ್ನು ನಾವು ಮನೆಯಲ್ಲಿ ಮಾಡಿದರೆ ಆ ರುಚಿ ಬರುವುದೇ ಇಲ್ಲ.
ಇದಕ್ಕೆ ಕಾರಣ, ಚೈನೀಸ್ ಮತ್ತು ಸ್ಟ್ರೀಟ್ ಫುಡ್‌ಗಳಲ್ಲಿ ಬಳಸುವ ಅಜಿನೋಮೋಟೊ. ಅಜಿನೋಮೋಟೊ ಎನ್ನುವುದು ವಾಸ್ತವವಾಗಿ MSG–ಮೊನೋಸೋಡಿಯಮ್ ಗ್ಲುಟಮೇಟ್ ಎಂಬ ಒಂದು ರಾಸಾಯನಿಕ ಲವಣ. ಜಪಾನ್ ವಿಜ್ಞಾನಿ ಡಾ. ಐಕೆಡಾ ಎಂಬವರು 1908ರಲ್ಲಿ ಸಮುದ್ರದ ಶಾಕು (ಕುಂಬು) ಸೊಪ್ಪಿನಲ್ಲಿ ಒಂದು ವಿಶೇಷ ರುಚಿಯನ್ನು ಕಂಡುಹಿಡಿದರು. ಅದು ʻಉಮಾಮಿʼ ಎಂದು ಕರೆಯಲ್ಪಟ್ಟಿತು. ಅದರ ರುಚಿ ಹೇಗಿತ್ತೆಂದರೆ, ಸಿಹಿ, ಹುಳಿ, ಉಪ್ಪು, ಕಹಿ ಇವ್ಯಾವುದಕ್ಕೂ ಸೇರದ ಸ್ವತಂತ್ರವಾದ ಐದನೇ ರುಚಿ. ಇದನ್ನೇ ಸಂಸ್ಕರಿಸಿ ತಯಾರಿಸಿದ ವಸ್ತುವೇ ಅಜಿನೋಮೋಟೊ ಅಥವಾ ವೈಜ್ಞಾನಿಕವಾಗಿ ಮೊನೋಸೋಡಿಯಂ ಗ್ಲುಟಾಮೇಟ್ (MSG).
ಆದರೆ, ದಿನಗಳೆದಂತೆ, ಎಂಎಸ್‌ಜಿ ತನ್ನ ಸ್ವರೂಪವನ್ನೇ ಬದಲಾಯಿಸಿಕೊಂಡಿದೆ. ಸಕ್ಕರೆಯನ್ನು ಕೆಲವು ಜೀವಾಣುಗಳ ಸಹಾಯದಿಂದ ಪಾಕವಾಗಿಸಲಾಗುತ್ತದೆ (ಫರ್ಮೆಂಟೇಶನ್). ಇದರಿಂದ ಗ್ಲುಟಾಮಿಕ್ ಆಮ್ಲ ಸಿದ್ಧವಾಗುತ್ತದೆ. ಅದನ್ನು ಸೋಡಿಯಂ ಜೊತೆ ಸೇರಿಸಿ ಬಿಳಿ ಪುಡಿ ರೂಪದಲ್ಲಿ ಕಟ್ಟಿ ಒಣಗಿಸುತ್ತಾರೆ. ಇದೇ ಇಂದಿನ ʻಅಜಿನೋಮೋಟೊʼ.
ಹೆಚ್ಚಾದರಷ್ಟೇ ವಿಷ: ಅಜಿನೋಮೋಟೊ ಎನ್ನುವುದು ರುಚಿ ಹೆಚ್ಚಿಸುವ ಪುಡಿಯಷ್ಟೇ. ಸ್ವಲ್ಪವೇ ಬಳಸಿದರೂ ಸಾರು, ಸೂಪ್, ಚೈನೀಸ್ ಡಿಶ್, ಸಾಸ್ ಇತ್ಯಾದಿಗಳಲ್ಲಿ ರುಚಿ ʻವಾವ್!ʼ ಎನ್ನುವಷ್ಟು ಹೆಚ್ಚಾಗುತ್ತದೆ. ಬಹಳ ವರ್ಷಗಳಿಂದಲೂ ಅಜಿನೋಮೋಟೊ ಆರೋಗ್ಯಕ್ಕೆ ಹಾಳು ಎಂಬ ವದಂತಿಯಿದೆ. ಕೆಲವರು ಚೈನೀಸ್ ರೆಸ್ಟೋರೆಂಟ್ ಸಿಂಡ್ರೋಮ್‌ನಿಂದ ಬಳಲುತ್ತಾರೆ. ಎಂಎಸ್‌ಜಿ ಬಳಸಿದ ಆಹಾರ ತಿಂದ ಬಳಿಕ ತಲೆ ನೋವು, ಹೊಟ್ಟೆಯಲ್ಲೇನೋ ಉರಿ, ಆಸಿಡಿಟಿ ಹೆಚ್ಚುತ್ತದೆ ಎನ್ನುತ್ತಾರೆ. ಆದರೆ ಅಮೆರಿಕಾ, ಯುರೋಪ್, ಭಾರತ ಸೇರಿದಂತೆ ಹಲವು ದೇಶಗಳ ಆರೋಗ್ಯ ಇಲಾಖೆಗಳು ಇದನ್ನು ಪರೀಕ್ಷಿಸಿದಾಗ, ಸಾಮಾನ್ಯ ಪ್ರಮಾಣದಲ್ಲಿ ಅಜಿನೋಮೋಟೊ ತಿನ್ನುವುದು ಸುರಕ್ಷಿತವೆಂದೇ ಹೇಳುತ್ತವೆ.
ಲಾಭವೂ ಇದೆ: ಸಾಮಾನ್ಯ ಉಪ್ಪಿಗಿಂತ ಅಜಿನೋಮೋಟೊದಲ್ಲಿ ಸೋಡಿಯಂ ಕಡಿಮೆ. ಅಂದರೆ ರಕ್ತದ ಒತ್ತಡದ ಸಮಸ್ಯೆ ಇರುವವರು, ಕಡಿಮೆ ಉಪ್ಪು ತಿನ್ನಬೇಕಾದವರು ಉಪ್ಪಿನ ಬದಲು ಸ್ವಲ್ಪ ಎಂಎಸ್‌ಜಿ ಬಳಸಿದರೆ ರುಚಿಯೂ ಉಳಿದು, ಉಪ್ಪಿನ ಬಳಕೆಯ ಪ್ರಮಾಣ ಕಡಿಮೆ ಆಗುತ್ತದೆ. ಆದರೆ, ಮಕ್ಕಳು, ಗರ್ಭಿಣಿಯರು, ವೃದ್ಧರು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು.
ಅಜಿನೊಮೊಟೊವನ್ನು ಸಂಸ್ಕರಿಸಿದ ಆಹಾರಗಳು, ರೆಸ್ಟೋರೆಂಟ್ ಪಾಕಪದ್ಧತಿ ಮತ್ತು ಫಾಸ್ಟ್-ಫುಡ್‌ಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಸುವಾಸನೆ ವರ್ಧನೆಗಾಗಿ ಹೆಚ್ಚಾಗಿ ಸೇರಿಸಲಾದ MSG ಅನ್ನು ಹೊಂದಿರುವ ಹೆಚ್ಚು ಸಂಸ್ಕರಿಸಿದ ಆಹಾರಗಳನ್ನು ಅವಲಂಬಿಸುವುದಕ್ಕಿಂತ ಸಂಪೂರ್ಣ, ಸಂಸ್ಕರಿಸದ ಆಹಾರಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದೇ ಆರೋಗ್ಯಕ್ಕೆ ಉತ್ತಮ.