Thursday, July 23, 2026
Join WhatsApp Group
HomeHealthದಿನನಿತ್ಯದ ಬಳಕೆಗೆ ಈ ಅಕ್ಕಿಯೇ ಬೆಸ್ಟ್!

ದಿನನಿತ್ಯದ ಬಳಕೆಗೆ ಈ ಅಕ್ಕಿಯೇ ಬೆಸ್ಟ್!

ಹೀಗೊಂದು ಯೋಚನೆ ಈ ಮುಂಚೆ ಮಾಡಿರುತ್ತೇವೆಯಾ?  ಆದರೆ ಈಗ ಯೋಚಿಸುವಂತಹ ಕಾಲ ಈಗ ಬಂದೊದಗಿದೆ. ಯಾಕೆಂದರೆ ಈಗೊಂದು ದಶಕಗಳವರೆಗೂ ಹಳ್ಳಿಗಳಲ್ಲಿ ಸ್ವಂತಕ್ಕೆ ಸಾಕಾಗುವಷ್ಟು ಭತ್ತವನ್ನು ಆಯಾ ಪ್ರಾಂತ್ಯಗಳ ಅನುಕೂಲ-ಅನಾನುಕೂಲಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಸೂಕ್ತ ತಳಿಗಳನ್ನು ಆಯ್ಕೆ ಮಾಡಿ ಭತ್ತವನ್ನು ಬೆಳೆಯುತ್ತಿದ್ದರು. ಸುಮಾರು ಎರಡು ವರ್ಷಕ್ಕೆ ಸಾಕಾಗುವಷ್ಟು ಭತ್ತದ ದಾಸ್ತಾನು ಇದ್ದೇ ಇರುತ್ತಿತ್ತು.

ಆದರೆ ಈಗ ನಾನಾ ಕಾರಣಗಳಿಂದ ಭತ್ತದ ಗದ್ದೆಗಳೇ ಕಡಿಮೆಯಾಗಿವೆ. ಹಳ್ಳಿಗಳಲ್ಲೂ ಅಕ್ಕಿಯನ್ನು ಪೇಟೆಯಿಂದ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಊಟಕ್ಕೆ ಸರಿಯಾದ ಅಕ್ಕಿಯನ್ನು ಆಯ್ಕೆ ಮಾಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಒಳ್ಳೆಯ ನಿರ್ಧಾರ.

ಮಾರುಕಟ್ಟೆಯಲ್ಲಿ ಥರಾವರಿ ಅಕ್ಕಿಗಳು ಸಿಗುವುದರಿಂದ, ನಮ್ಮ ಕುಟುಂಬದ ಅಗತ್ಯಕ್ಕೆ ತಕ್ಕ ಸೂಕ್ತವಾದ ಅಕ್ಕಿಯನ್ನು ಆರಿಸಿಕೊಳ್ಳುವುದು ಜಾಣತನ. ಅಕ್ಕಿ ಕೊಳ್ಳುವಾಗ ನಾವು ಅದರ ಬಣ್ಣ, ಹದ ಮತ್ತು ಪೌಷ್ಟಿಕಾಂಶದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.

ದಕ್ಷಿಣ ಭಾರತದ ಮನೆಗಳಲ್ಲಿ ದಿನಬಳಕೆಗೆ ಸೋನಾ ಮಸೂರಿ ಅಕ್ಕಿ ಅತ್ಯಂತ ಜನಪ್ರಿಯವಾಗಿದೆ. ಇದು ಹಗುರವಾಗಿದ್ದು, ಸುಲಭವಾಗಿ ಜೀರ್ಣವಾಗುವುದರಿಂದ ದಿನನಿತ್ಯದ ಅನ್ನಕ್ಕೆ ಇದು ಹೇಳಿಮಾಡಿಸಿದಂತಿದೆ. ಆದರೆ ಅತಿಯಾಗಿ ಪಾಲಿಶ್ ಮಾಡಿದ ಬಿಳಿ ಅಕ್ಕಿಯಲ್ಲಿ ಪೋಷಕಾಂಶಗಳು ಕಡಿಮೆ ಇರುತ್ತವೆ. ಹಾಗಾಗಿ, ಸ್ವಲ್ಪ ಮಸುಕಾಗಿರುವ, ಸಿಂಗಲ್ ಪಾಲಿಶ್ ಮಾಡಿದ ಅಥವಾ ಕೆಂಪು ಬಣ್ಣದ, ಹಾಗೆಯೇ ಅರ್ಧ ಬೇಯಿಸಿದ (ಕುಚ್ಚಲಕ್ಕಿ)ಅಕ್ಕಿಯನ್ನು ಆರಿಸಿಕೊಳ್ಳುವುದು ಒಳ್ಳೆಯದು.

ಇದರಲ್ಲಿ ವಿಟಮಿನ್ ಮತ್ತು ಮಿನರಲ್ಸ್ ಹೆಚ್ಚಿರುತ್ತವೆ. ಅಕ್ಕಿ ಮಾಡುವ ಮುನ್ನ ಭತ್ತವನ್ನು ಮೊದಲು ನೀರಿನಲ್ಲಿ ನೆನೆಸಿ, ನಂತರ ಹಬೆಯಲ್ಲಿ ಚೆನ್ನಾಗಿ ಬೇಯಿಸಿ, ಆ ಬಳಿಕ ಒಣಗಿಸಿ ಆಮೇಲೆ ಗಿರಣಿಯಲ್ಲಿ ಅದರ ಮೇಲಿನ ಸಿಪ್ಪೆಯನ್ನು ಮಾತ್ರ ಸುಲಿಯಲಾಗುತ್ತದೆ. ಈ ರೀತಿ ತಯಾರಾಗುವ ಅಕ್ಕಿಯೇ ಕುಚ್ಚಲಕ್ಕಿ.

ಈ ಪ್ರಕ್ರಿಯೆಯಿಂದಾಗಿ ಭತ್ತದ ಮೇಲ್ಪದರದಲ್ಲಿರುವ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಪೌಷ್ಟಿಕಾಂಶಗಳು ಅಕ್ಕಿಯ ಒಳಗಿನ ಭಾಗಕ್ಕೆ ಬಿಗಿಯಾಗಿ ಸೇರಿಕೊಳ್ಳುತ್ತವೆ. ಸಾಮಾನ್ಯ ಬಿಳಿ ಅಕ್ಕಿಯನ್ನು ತಯಾರಿಸುವಾಗ ಪಾಲಿಶ್ ಮಾಡುವುದರಿಂದ ಅದರಲ್ಲಿದ್ದ ಪೋಷಕಾಂಶಗಳೆಲ್ಲವೂ ನಷ್ಟವಾಗುತ್ತವೆ.

ಆದರೆ ಅರ್ಧ ಬೇಯಿಸಿದ ಅಕ್ಕಿಯಲ್ಲಿ ಈ ಪೌಷ್ಟಿಕಾಂಶಗಳು ಹಾಗೇ ಉಳಿದುಕೊಳ್ಳುವುದರಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ನಾರಿನಂಶ ಹೆಚ್ಚಿರುತ್ತದೆ ಮತ್ತು ಪಿಷ್ಟದ ಪ್ರಮಾಣ ಕಡಿಮೆಯಿರುತ್ತದೆ. ಹಾಗಾಗಿ ಈ ಅಕ್ಕಿಯ ಅನ್ನ ಮಧುಮೇಹ ಇರುವವರಿಗೆ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅತ್ಯುತ್ತಮ ಆಹಾರವಾಗಿದೆ.

ಅರ್ಧ ಬೇಯಿಸಿದ ಅಕ್ಕಿಯಿಂದ ಮಾಡುವ ಅನ್ನವು ಬೇಗನೆ ಹಾಳಾಗುವುದಿಲ್ಲ. ನಮ್ಮ ಕರಾವಳಿ ಭಾಗದಲ್ಲಿ ದಿನನಿತ್ಯದ ಊಟಕ್ಕೆ ಬಳಸುವ ಕೆಂಪು ಕುಚ್ಚಲಕ್ಕಿ ಹಾಗೂ ಮಾರುಕಟ್ಟೆಯಲ್ಲಿ ಸಿಗುವ ಇಡ್ಲಿ ಅಕ್ಕಿಗಳು ಈ ಅರ್ಧ ಬೇಯಿಸಿದ ಅಕ್ಕಿಯ ವಿಭಾಗಕ್ಕೆ ಸೇರುತ್ತವೆ. ಇದು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು ಸಹಕರಿಸುತ್ತದೆ.

 ಮನೆಯಲ್ಲಿ ಮಧುಮೇಹ ಹೊಂದಿರುವವರು ಅಥವಾ ತೂಕ ಇಳಿಸಿಕೊಳ್ಳಲು ಬಯಸುವವರು ಕಂದು ಅಥವಾ ಕೆಂಪು ಅಕ್ಕಿಯನ್ನು ಬಳಸಬಹುದು. ಇವುಗಳಲ್ಲಿ ನಾರಿನಂಶ ಹೆಚ್ಚಿರುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ತಕ್ಷಣವೇ ಏರುವುದಿಲ್ಲ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.

ಇನ್ನು ಅಡುಗೆಯ ಹದಕ್ಕೆ ಬಂದರೆ, ಕನಿಷ್ಠ ಒಂದರಿಂದ ಎರಡು ವರ್ಷ ಹಳೆಯದಾದ ಅಕ್ಕಿಯನ್ನು ಖರೀದಿಸುವುದು ಉತ್ತಮ. ಹೊಸ ಅಕ್ಕಿಯಲ್ಲಿ ಪಿಷ್ಟ ಹೆಚ್ಚಿರುವುದರಿಂದ ಅನ್ನ ಮುದ್ದೆಯಾಗುತ್ತದೆ. ಆದರೆ ಹಳೆಯ ಅಕ್ಕಿಯ ಅನ್ನ ಚೆನ್ನಾಗಿ ಅರಳಿ ಬೇಯುತ್ತದೆ.

ದೋಸೆ, ಇಡ್ಲಿಗಳ ತಯಾರಿಕೆಗೆ ದಪ್ಪ ಅಕ್ಕಿ ಹಾಗೂ ದಿನಬಳಕೆಯ ಅನ್ನಕ್ಕೆ ಸಣ್ಣ ಅಕ್ಕಿ ಸೂಕ್ತ. ದಿನವೂ ಒಂದೇ ತರಹದ ಬಿಳಿ ಅಕ್ಕಿ ತಿನ್ನುವ ಬದಲು, ವಾರದಲ್ಲಿ ಕೆಲವು ದಿನ ಕೆಂಪು ಅಕ್ಕಿ ಅಥವಾ ಸಿರಿಧಾನ್ಯಗಳನ್ನು ಬಳಸುವ ಅಭ್ಯಾಸ ಮಾಡಿಕೊಂಡರೆ ಕುಟುಂಬದ ಆರೋಗ್ಯ ಸದಾ ಹಸನಾಗಿರುತ್ತದೆ. ಸರಳವಾದ ಈ ಬದಲಾವಣೆಗಳು ನಮ್ಮನ್ನು ದೀರ್ಘಕಾಲದವರೆಗೆ ಸದೃಢವಾಗಿಡಲು ನೆರವಾಗುತ್ತವೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share