Friday, July 24, 2026
Join WhatsApp Group
HomeLocal Newsತಂತ್ರಜ್ಞಾನ ಬೆಳೆದರೂ ಹೊಟ್ಟೆ ತುಂಬಿಸುವುದು ರೈತನೇ: ಕಾಗೇರಿ

ತಂತ್ರಜ್ಞಾನ ಬೆಳೆದರೂ ಹೊಟ್ಟೆ ತುಂಬಿಸುವುದು ರೈತನೇ: ಕಾಗೇರಿ

ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ರೈತರಿಗೆ ಕರೆ; ಕೃಷಿ ಸಾಧಕರಿಗೆ ಸನ್ಮಾನ

ಕುಮಟಾ: ಕೃತಕ ಬುದ್ಧಿಮತ್ತೆ, ಐಟಿ ಮತ್ತು ಸಾಫ್ಟ್‌ವೇರ್ ಕ್ಷೇತ್ರಗಳು ಎಷ್ಟೇ ವೇಗವಾಗಿ ಬೆಳೆಯುತ್ತಿದ್ದರೂ, ಮನುಷ್ಯನ ಬದುಕಿಗೆ ಕೊನೆಗೆ ಬೇಕಾಗುವುದು ರೈತ ಬೆಳೆದ ಅನ್ನವೇ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಬಿಜೆಪಿ ರೈತ ಮೋರ್ಚಾ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಕುಮಟಾ ಸಮೀಪದ ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ ಅವರ ಕಡಸಾಲಗದ್ದೆ ತೋಟದಲ್ಲಿ ಆಯೋಜಿಸಿದ್ದ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಕಾಳುಮೆಣಸಿನ ಗಿಡಕ್ಕೆ ರಸಸಾರ ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಕೃಷಿ ಕ್ಷೇತ್ರವು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಯುವಕರು ಕೃಷಿಯಿಂದ ದೂರ ಸರಿಯುತ್ತಿರುವುದು ಆತಂಕಕಾರಿ ಬೆಳವಣಿಗೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಮನುಷ್ಯನ ಹೊಟ್ಟೆ ತುಂಬಿಸುವುದು ರೈತನ ಬೆವರಿನ ಫಲವೇ ಹೊರತು ಕಂಪ್ಯೂಟರ್ ಪರದೆಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತರು ನೈಸರ್ಗಿಕ ಮತ್ತು ಸಾವಯವ ಕೃಷಿಯತ್ತ ಮರಳಬೇಕು ಎಂಬ ನಿಟ್ಟಿನಲ್ಲಿ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವರ್ಷಕ್ಕೆ ₹6,000 ನೆರವು ನೀಡಲಾಗುತ್ತಿದ್ದು, ಮಣ್ಣಿನ ಆರೋಗ್ಯ ಕಾಪಾಡುವ ಉದ್ದೇಶದಿಂದ ‘ಸಾಯಿಲ್ ಹೆಲ್ತ್ ಕಾರ್ಡ್’ ಯೋಜನೆಯನ್ನೂ ಜಾರಿಗೊಳಿಸಲಾಗಿದೆ ಎಂದು ಕಾಗೇರಿ ತಿಳಿಸಿದರು.

ಕೇಂದ್ರ ಸರ್ಕಾರದ ‘ಪಿ.ಎಂ. ಪ್ರಣಾಮ್’ ಯೋಜನೆ ಹಾಗೂ ‘ಖೇತ್ ಬಚಾವೋ’ ಅಭಿಯಾನದಡಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಆರೋಗ್ಯ ಮತ್ತು ಪರಿಸರದ ಹಿತಕ್ಕಾಗಿ ಪ್ರತಿಯೊಬ್ಬರೂ ನೈಸರ್ಗಿಕ ಕೃಷಿಯನ್ನು ಬೆಂಬಲಿಸಬೇಕು ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇಂದು ಎಲ್ಲೆಡೆ ರಾಸಾಯನಿಕಗಳ ಬಳಕೆ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ಜನರ ಆರೋಗ್ಯದ ಮೇಲೆ ಬೀಳುತ್ತಿದೆ. ರಾಸಾಯನಿಕ ಮುಕ್ತ ಸಾವಯವ ಕೃಷಿಯ ಮೂಲಕ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂಬುದನ್ನು ಎನ್.ಡಿ. ಹೆಗಡೆಯವರು ತಮ್ಮ ತೋಟದ ಮೂಲಕ ಸಾಬೀತುಪಡಿಸಿದ್ದಾರೆ ಎಂದರು.

ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ ಮಾತನಾಡಿ, ಸುಮಾರು 40ರಿಂದ 50 ಎಕರೆ ಪ್ರದೇಶದಲ್ಲಿ ನೈಸರ್ಗಿಕ ವಿಧಾನದಲ್ಲಿ ಕೃಷಿ ಕೈಗೊಂಡು 500 ಕ್ವಿಂಟಾಲ್ ಕಾಳುಮೆಣಸು ಉತ್ಪಾದನೆ ಮಾಡಿರುವುದಾಗಿ ತಿಳಿಸಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಹಿಂದೆ ಕೃಷಿ ಉತ್ತಮ, ವ್ಯಾಪಾರ ಮಧ್ಯಮ, ಉದ್ಯೋಗ ಕನಿಷ್ಠ ಎಂಬ ಮನೋಭಾವವಿತ್ತು. ಆದರೆ ಈಗ ಅದರ ಸಂಪೂರ್ಣ ವಿರುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ನಾಗು ಗೌಡ ಕಡ್ನೀರು, ಜೇನು ಕೃಷಿಕ ಸಂತೋಷ ಹೆಗಡೆ, ವಿಷ್ಣು ಜಟ್ಟು ಗೌಡ, ಲಕ್ಷ್ಮೀನಾರಾಯಣ ಹೆಗಡೆ, ಮಂಜುನಾಥ ಬೀರಾ ಗೌಡ, ಎನ್.ಡಿ. ಹೆಗಡೆ ಹಾಗೂ ವೈವಿಧ್ಯಮಯ ಭತ್ತದ ತಳಿಗಳನ್ನು ಬೆಳೆಸಿದ ನಾಗರಾಜ ನಾಯ್ಕ ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಂಡಲ ಅಧ್ಯಕ್ಷ ಗಣಪತಿ ಹೆಗಡೆ, ಕುಮಾರ ಭಟ್, ಗಜಾನನ ಪೈ, ಡಾ. ಜಿ.ಜಿ. ಹೆಗಡೆ ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಗೂ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರೈತ ಮೋರ್ಚಾದ ಕಾರ್ಯ ಶ್ಲಾಘನೀಯ

ಉತ್ತರ ಕನ್ನಡ ಬಿಜೆಪಿ ರೈತ ಮೋರ್ಚಾ ಆಯೋಜಿಸಿರುವ ಇಂತಹ ಕಾರ್ಯಾಗಾರಗಳು ರೈತರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಕೃಷಿಕರನ್ನು ಗುರುತಿಸಿ ಗೌರವಿಸುವುದು ಇತರ ರೈತರಿಗೆ ಸ್ಫೂರ್ತಿಯಾಗಲಿದೆ.

– ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು.

ಊಟದಿಂದ ಬಂತು ರೋಗ

ಇಂದಿನ ಆಹಾರ ಪದ್ಧತಿಯೇ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ರಾಸಾಯನಿಕಯುಕ್ತ ಆಹಾರದಿಂದ ರೋಗನಿರೋಧಕ ಶಕ್ತಿ ಕುಗ್ಗುತ್ತಿದ್ದು, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳು ಹೆಚ್ಚಾಗುತ್ತಿವೆ. ರೈತರು ನೈಸರ್ಗಿಕ ಕೃಷಿಯತ್ತ ಮರಳಬೇಕು ಎಂಬ ಉದ್ದೇಶದಿಂದ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.

– ಅನಂತಮೂರ್ತಿ ಹೆಗಡೆ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share