ಅಡವಿಯಲ್ಲೇ ಹುಟ್ಟುಹಬ್ಬ ಆಚರಣೆ | ಬುಡಕಟ್ಟು ಮಕ್ಕಳಿಗೆ ಶಿಕ್ಷಣದ ಬೆಳಕು ನೀಡುತ್ತಿರುವ ದಿನೇಶ್ ಹೊಳ್ಳ
ಕಾರವಾರ: ಹುಟ್ಟುಹಬ್ಬ ಎಂದರೆ ಕೇಕ್, ಬಲೂನ್, ಡಿಜೆ ಸದ್ದು, ಸಂಭ್ರಮದ ಪಾರ್ಟಿಗಳು ಎಂಬುದು ಸಾಮಾನ್ಯ ಕಲ್ಪನೆ. ಆದರೆ ಮಂಗಳೂರಿನ ದಿನೇಶ್ ಹೊಳ್ಳ ಅವರು ಕಳೆದ 18 ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಅರಣ್ಯದ ನಡುವೆ, ಬುಡಕಟ್ಟು ಸಮುದಾಯದವರೊಂದಿಗೆ ಹಾಗೂ ಶಾಲಾ ಮಕ್ಕಳ ನಡುವೆ ಅತ್ಯಂತ ಸರಳವಾಗಿ ಆಚರಿಸುತ್ತಾ ಮಾದರಿಯಾಗಿದ್ದಾರೆ.
ಕೇಕ್ ಕತ್ತರಿಸುವ ಬದಲು ಹಲಸಿನ ಹಣ್ಣು, ಕಲ್ಲಂಗಡಿ ಹಣ್ಣನ್ನು ಹಂಚಿಕೊಂಡು ಅರಣ್ಯದ ಮೌನದ ನಡುವೆ ಹುಟ್ಟುಹಬ್ಬ ಆಚರಿಸುವುದು ಇವರ ವಿಶೇಷತೆ. ಇತ್ತೀಚೆಗೆ ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಜೋಯಿಡಾದ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕಾರ್ಟುಲಿ ಶಾಲೆಯಲ್ಲಿ ಗಿಡ ನೆಡುವ ಮೂಲಕ ಆಚರಿಸಿದರು.
ಅಲ್ಲದೆ, ಯಲ್ಲಾಪುರ ತಾಲೂಕಿನ ಅಣಲೆಸರ ಅರಣ್ಯ ಪ್ರದೇಶದಲ್ಲಿರುವ ಗಿರೀಶ್ ಸಿದ್ದಿ ಅವರ ಮನೆಯಲ್ಲಿ ಪನ್ನಿಕಾ ಸಿದ್ದಿ ಹಾಗೂ ತಂಡದವರ ಸಾಂಪ್ರದಾಯಿಕ ಸಿದ್ದಿ ಹಾಡುಗಳ ನಡುವೆ ವನಚೇತನಾ ತಂಡದೊಂದಿಗೆ ಸಂಭ್ರಮಿಸಿದರು.
ದಿನೇಶ್ ಹೊಳ್ಳ ಅವರು ಕೇವಲ ಹುಟ್ಟುಹಬ್ಬ ಆಚರಿಸುವುದಷ್ಟೇ ಅಲ್ಲ, ಅದನ್ನು ಸಮಾಜಮುಖಿ ಕಾರ್ಯಕ್ರಮವನ್ನಾಗಿ ರೂಪಿಸಿದ್ದಾರೆ. ಕಳೆದ 18 ವರ್ಷಗಳಿಂದ ಜೋಯಿಡಾ, ಯಲ್ಲಾಪುರ ಹಾಗೂ ಅಂಕೋಲಾ ಭಾಗದ ಬುಡಕಟ್ಟು ಸಮುದಾಯದ 42 ಶಾಲೆಗಳ ಮಕ್ಕಳಿಗೆ ಬ್ಯಾಗ್, ಛತ್ರಿ, ರೈನ್ಕೋಟ್, ಪುಸ್ತಕಗಳು ಹಾಗೂ ವಿವಿಧ ಶಿಕ್ಷಣ ಸಾಮಗ್ರಿಗಳನ್ನು ವಿತರಿಸುವ ಮೂಲಕ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ.
ಟೀಮ್ ಮಂಗಳೂರು ಗಾಳಿಪಟ ತಂಡದ ಗಾಳಿಪಟ ವಿನ್ಯಾಸಕಾರರಾಗಿರುವ ದಿನೇಶ್ ಹೊಳ್ಳ ಅವರು ತಮ್ಮ ಕಲಾ ಪ್ರತಿಭೆಯಿಂದಲೂ ಸಮಾಜ ಸೇವೆ ಮಾಡುತ್ತಿದ್ದಾರೆ. ಫ್ರಾನ್ಸ್ನಲ್ಲಿ ನಾಲ್ಕು ಬಾರಿ ಹಾಗೂ ಇಟಲಿಯಲ್ಲಿ ಒಮ್ಮೆ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ ತಮ್ಮ ರೇಖಾಚಿತ್ರ ಪ್ರದರ್ಶನ ನಡೆಸಿದ್ದಾರೆ. ಅಲ್ಲಿಂದ ತಮ್ಮ ಕಲಾಕೃತಿಗಳ ಮಾರಾಟದಿಂದ ಬಂದ ಹಣದ ಒಂದು ಭಾಗವನ್ನು ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ವನಚೇತನಾ ಕಾರ್ಯಕ್ರಮದ ಮೂಲಕ ವಿನಿಯೋಗಿಸುತ್ತಿದ್ದಾರೆ.
ಪರಿಸರ ಹೋರಾಟದ ಕಾರ್ಯಗಳಲ್ಲಿ ದಿನೇಶ್ ಹೊಳ್ಳ ಸದಾ ಮುಂದೆ. ಎಲ್ಲಿಯೇ ಪರಿಸರಕ್ಕೆ ವಿರುದ್ಧವಾದ ಚಟುವಟಿಕೆ ನಡೆಯುತ್ತಿದ್ದರೂ ಯಾವುದೇ ಭಯವಿಲ್ಲದೆ ವಿರೋಧಿಸುತ್ತಾರೆ. ಈ ಪ್ರಕೃತಿಯಿಲ್ಲದಿದ್ದರೆ ನಮ್ಮ ಬದುಕು ಅದೆಷ್ಟು ನರಕಸದೃಶವಾದೀತು ಎಂಬ ಬಗ್ಗೆ ಅವರು ಸದಾ ಜಾಗೃತಿ ಮೂಡಿಸುತ್ತಲೇ ಬಂದಿದ್ದಾರೆ.
ದಿನೇಶ ಹೊಳ್ಳರ ಈ ಕಾರ್ಯಕ್ಕೆ ಸಹ್ಯಾದ್ರಿ ಸಂಚಯದ ಚಾರಣ ಮಿತ್ರರು ಹಾಗೂ ವನಚೇತನಾ ಸಂಘಟನೆಯ ಸದಸ್ಯರು ಸಹ ಕೈಜೋಡಿಸಿದ್ದಾರೆ.
“ಹುಟ್ಟುಹಬ್ಬದಂದು ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಬೆಳೆಸಬೇಕು. ನಾವು ಈ ಭೂಮಿಯಲ್ಲಿ ಹುಟ್ಟಿ ಬೆಳೆದಿದ್ದಕ್ಕೆ ಪ್ರಕೃತಿಗೆ ಹಿಂದಿರುಗಿಸುವ ಅತ್ಯಮೂಲ್ಯ ಉಡುಗೊರೆ ಹಸಿರು ಹೊದಿಕೆ ನಿರ್ಮಾಣವೇ ಆಗಿದೆ” ಎಂಬ ಸಂದೇಶವನ್ನು ದಿನೇಶ್ ಹೊಳ್ಳ ನಿರಂತರವಾಗಿ ಸಾರುತ್ತಾ ಬಂದಿದ್ದಾರೆ.
ಅವರ ಈ ವಿಶಿಷ್ಟ ಆಚರಣೆ ಇಂದು ಪರಿಸರ ಪ್ರೇಮಿಗಳಿಗೆ ಹಾಗೂ ಸಮಾಜಸೇವಕರಿಗೆ ಪ್ರೇರಣೆಯ ಮಾದರಿಯಾಗಿದೆ.