ಮುಂಡಗೋಡ: ಅರಣ್ಯ ಇಲಾಖೆಯ ನೆಡುತೋಪು ಕಾಮಗಾರಿಗಳ ಕುರಿತು ಕಳೆದ ಮೂರು ವರ್ಷಗಳಲ್ಲಿ ಎಷ್ಟು ಗಿಡಗಳನ್ನು ನೆಡಲಾಗಿದೆ ಹಾಗೂ ಅವುಗಳಲ್ಲಿ ಎಷ್ಟು ಗಿಡಗಳು ಬದುಕುಳಿದಿವೆ ಎಂಬ ಮಾಹಿತಿಯನ್ನು ಈ ತಿಂಗಳ ಅಂತ್ಯದೊಳಗೆ ನೀಡದಿದ್ದರೆ, ಮುಂದಿನ ತಿಂಗಳು ಅರಣ್ಯವಾಸಿಗಳೊಂದಿಗೆ ಸಿಸಿಎಫ್ ಕಚೇರಿಗೆ ತೆರಳಿ ಮಾಹಿತಿ ಪಡೆಯುವ ಹೋರಾಟ ನಡೆಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಎಚ್ಚರಿಕೆ ನೀಡಿದ್ದಾರೆ.
ದಶ ಲಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ ಸೋಮವಾರ ಮುಂಡಗೋಡ ತಾಲೂಕಿನ ನಂದಿಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೆಡುತೋಪು ಕಾಮಗಾರಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಶ್ನೆಗಳು ಮತ್ತು ಟೀಕೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಮಾಹಿತಿ ಹಕ್ಕು ಅಧಿನಿಯಮ ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಯಡಿ ಅಗತ್ಯ ಮಾಹಿತಿಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.
ತಾಲೂಕಿನಾದ್ಯಂತ ಜುಲೈ 11ರವರೆಗೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರಣ್ಯವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಅಭಿಯಾನಕ್ಕೆ ತಾಲೂಕು ಅಧ್ಯಕ್ಷ ಶಿವಾನಂದ ಜೋಗಿ ನೇತೃತ್ವ ವಹಿಸಿದ್ದು, ಗ್ರೀನ್ ಕಾರ್ಡ್ ಪ್ರಮುಖರಾದ ಮಂಜುನಾಥ ನಾಯ್ಕ ಕಂಚಿಕೊಪ್ಪ, ಮಹೇಶ ಹುಲಿವರ, ದುರ್ಗವ್ವ ಭಜಂತ್ರಿ, ಸುರೇಶ ಜಾಧವ್, ರಾಮಣ್ಣ ಉಪ್ಪಾರ, ಶಂಭೂ ಸಾಲಿವರ್, ಶೇಖಯ್ಯ ಹಿರೇಮಠ, ಗಣಪತಿ ಟಿ. ನಾಯ್ಕ, ಪ್ರಶಾಂತ್ ಜೈನ್, ಬಸವರಾಜ ಹುಲಿಯ, ಹಸಾಬ ದುಂಡಶಿ, ಸೋಮಸಿಂಗ್ ಶಿಗ್ಗಟ್ಟಿ, ವೀರಭದ್ರ ಗಳಗಿ, ರಾಮಸಿಂಗ್ ದೊಡವಾರ, ರಹಮಾನ್ ಸಾಬ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಯಲುಸೀಮೆಯಲ್ಲಿ ಹಸಿರು ಅಭಿಯಾನ
ಮುಂಡಗೋಡದಂತಹ ಬಯಲುಸೀಮೆ ಪ್ರದೇಶದಲ್ಲಿ ದಶ ಲಕ್ಷ ಗಿಡ ನೆಡುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಅರಣ್ಯ ಸಂರಕ್ಷಣೆ ಅರಣ್ಯವಾಸಿಗಳ ಜವಾಬ್ದಾರಿ ಎಂಬ ಸಂದೇಶವನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ಅರಣ್ಯ ಸಾಂದ್ರತೆ ಹೆಚ್ಚಿಸುವ ಉದ್ದೇಶದಿಂದ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದರು.