ಜಪಾನ್ ಸರ್ಕಾರದಿಂದ ಆಹ್ವಾನಿತನಾದ ಕನ್ನಡ ಮಾಧ್ಯಮದ ಪ್ರತಿಭಾವಂತ ವಿದ್ಯಾರ್ಥಿ ಆಕಾಶ್ ಹರಿಕಂತ್ರ
ಕಾರವಾರ: ಪ್ರತಿಭೆಗೆ ಭಾಷೆಯೂ ಅಡ್ಡಿಯಲ್ಲ, ಗ್ರಾಮೀಣ ಹಿನ್ನೆಲೆಯೂ ಮಿತಿಯಲ್ಲ ಎಂಬುದನ್ನು ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದ ಆಕಾಶ್ ಹರಿಕಂತ್ರ, ತನ್ನ ಶೈಕ್ಷಣಿಕ ಸಾಧನೆಯ ಬಲದಿಂದ ಜಪಾನ್ ಸರ್ಕಾರದ ಪ್ರತಿಷ್ಠಿತ ಸಾಕುರಾ ಸೈನ್ಸ್ ಸ್ಟೂಡೆಂಟ್ ಎಕ್ಸ್‌ಚೇಂಜ್ ಪ್ರೋಗ್ರಾಂಗೆ ಆಯ್ಕೆಯಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಜಾಗತಿಕ ಅನುಭವ ಪಡೆದು ಬಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ನೆಲ್ಲಿಕೇರಿಯ ಸರ್ಕಾರಿ ಹನುಮಂತ ಬೆಣ್ಣೆ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುವ ಆಕಾಶ್ ಹರಿಕಂತ್ರ, ಒಂದರಿಂದ ಏಳನೇ ತರಗತಿವರೆಗೆ ಕೊಡ್ಕಣಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಎಂಟರಿಂದ ಹತ್ತನೇ ತರಗತಿವರೆಗೆ ಬರ್ಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದಾರೆ.
ಎಂಟನೇ ತರಗತಿಯಲ್ಲಿ ರಾಷ್ಟ್ರೀಯ ಆದಾಯ ಮತ್ತು ಅರ್ಹತಾ ವಿದ್ಯಾರ್ಥಿವೇತನ (NMMS) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಆಕಾಶ್, ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 621 ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದರು. ಅವರ ಈ ಸಾಧನೆಯೇ ಜಪಾನ್ ಸರ್ಕಾರದ ಆಹ್ವಾನದ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನದ ವಿಶ್ವಕ್ಕೆ ಕಾಲಿಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಮೇ 23ರಿಂದ 30ರವರೆಗೆ ನಡೆದ ಶೈಕ್ಷಣಿಕ ಪ್ರವಾಸದಲ್ಲಿ ಕರ್ನಾಟಕದಿಂದ ಕೇವಲ ನಾಲ್ವರು ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗಿದ್ದು, ಅವರಲ್ಲಿ ಆಕಾಶ್ ಕೂಡ ಒಬ್ಬರು. ವಿಶೇಷ ವೀಸಾ ವ್ಯವಸ್ಥೆಯಿಂದ ಹಿಡಿದು ಪ್ರಯಾಣ, ವಸತಿ ಹಾಗೂ ಇತರ ಎಲ್ಲ ವೆಚ್ಚಗಳನ್ನು ಜಪಾನ್ ಸರ್ಕಾರವೇ ಭರಿಸಿತ್ತು. ವಿದ್ಯಾರ್ಥಿಗಳ ಮಾರ್ಗದರ್ಶನಕ್ಕಾಗಿ ಪ್ರತ್ಯೇಕ ಸಂಯೋಜಕರನ್ನೂ ನೇಮಿಸಲಾಗಿತ್ತು.
ಪ್ರವಾಸದ ವೇಳೆ ಜಪಾನ್‌ನ ಶೈಕ್ಷಣಿಕ ವಾತಾವರಣ, ಅತ್ಯಾಧುನಿಕ ಸಂಶೋಧನಾ ಕೇಂದ್ರಗಳು ಹಾಗೂ ಖ್ಯಾತ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡುವ ಅವಕಾಶ ಆಕಾಶ್ ಅವರಿಗೆ ದೊರಕಿತು. ಕೃತಕ ಬುದ್ಧಿಮತ್ತೆ (Artificial Intelligence), ಕ್ವಾಂಟಮ್ ಕಂಪ್ಯೂಟಿಂಗ್ ಸೇರಿದಂತೆ ಭವಿಷ್ಯದ ತಂತ್ರಜ್ಞಾನಗಳ ಕುರಿತು ನಡೆಯುತ್ತಿರುವ ಸಂಶೋಧನೆಗಳನ್ನು ಅವರು ನೇರವಾಗಿ ವೀಕ್ಷಿಸಿದರು.
ಇದರ ಜೊತೆಗೆ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು, ಜಪಾನ್‌ನ ವಿಶ್ವವಿಖ್ಯಾತ ಸಂಶೋಧನಾ ಸಂಸ್ಥೆಗಳಾದ ರಿಕೆನ್ ಮತ್ತು ಮಿರೈಕನ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳಿಗೆ ಭೇಟಿ ನೀಡಿ ವೈಜ್ಞಾನಿಕ ಚಟುವಟಿಕೆಗಳ ಬಗ್ಗೆ ಅರಿವು ಪಡೆದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಸಾಕುರಾ ಸೈನ್ಸ್ ಎಕ್ಸ್ಚೇಂಜ್ ಪ್ರೋಗ್ರಾಂ ಅಂತರರಾಷ್ಟ್ರೀಯ ಯುವ ವಿಜ್ಞಾನ ವಿನಿಮಯ ಕಾರ್ಯಕ್ರಮವಾಗಿದ್ದು, ವಿವಿಧ ದೇಶಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಲ್ಪಾವಧಿಗೆ ಜಪಾನ್‌ಗೆ ಆಹ್ವಾನಿಸಿ ಅಲ್ಲಿನ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತದೆ. ಜೊತೆಗೆ ಜಪಾನಿನ ಯುವಕರೊಂದಿಗೆ ಸಂವಹನ ನಡೆಸುವ ಅವಕಾಶವನ್ನೂ ಕಲ್ಪಿಸುತ್ತದೆ.
ಈ ಕುರಿತು ತಮ್ಮ ಅನುಭವ ಹಂಚಿಕೊಂಡಿರುವ ಆಕಾಶ್ ಹರಿಕಂತ್ರ, “ಜಪಾನ್ ಕೇವಲ ತಂತ್ರಜ್ಞಾನದಲ್ಲಿ ಮಾತ್ರವಲ್ಲ, ತನ್ನ ಸಂಸ್ಕೃತಿ ಮತ್ತು ಪರಂಪರೆಯಲ್ಲೂ ಶ್ರೀಮಂತ ರಾಷ್ಟ್ರವಾಗಿದೆ. ಅಲ್ಲಿನ ಶಾಲೆಗಳು, ದೇವಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿದಾಗ ಶಿಸ್ತು, ಸಮಯಪ್ರಜ್ಞೆ ಹಾಗೂ ಸ್ವಚ್ಛತೆಯ ಮಹತ್ವ ಅರಿವಾಯಿತು. ಆಧುನಿಕತೆಯ ನಡುವೆಯೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡಿರುವುದು ಗಮನಾರ್ಹ.” ಎಂದು ಹೇಳಿದ್ದಾರೆ.
ಗ್ರಾಮೀಣ ಪ್ರದೇಶದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆದು ಜಾಗತಿಕ ವೇದಿಕೆಯಲ್ಲಿ ಗುರುತಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿರುವ ಆಕಾಶ್ ಅವರ ಸಾಧನೆ, ರಾಜ್ಯದ ಸಾವಿರಾರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ದಾರಿದೀಪವಾಗಿದೆ. ಅವರ ಯಶೋಗಾಥೆ ಪ್ರತಿಭೆ ಮತ್ತು ಪರಿಶ್ರಮ ಇದ್ದರೆ ಜಗತ್ತಿನ ಯಾವ ಬಾಗಿಲನ್ನಾದರೂ ತೆರೆಯಬಹುದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ.