ಹಳಿಯಾಳ: ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್‌ಗಳು ಸ್ಫೋಟಗೊಂಡು ಮನೆಗಳಿಗೆ ಹಾನಿಯುಂಟಾದ ಘಟನೆ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಳಗಿನಕೊಪ್ಪ ಗ್ರಾಮದ ನಿವಾಸಿ ಮಾರುತಿ ಅಪ್ಪಯ್ಯ ಬಿಡದೋಳಕರ (27) ನೀಡಿದ ದೂರಿನ ಮೇರೆಗೆ, ಗ್ರಾಮದ ವಸಂತ @ ವಾಸು (52) ಹಾಗೂ ಅವರ ಪುತ್ರ ಮುನೇಶ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಸ್ಫೋಟಕ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಪ್ರಾಣಹಾನಿ ಹಾಗೂ ಆಸ್ತಿ ಹಾನಿಯಾಗುವ ಸಾಧ್ಯತೆ ಇದೆ ಎಂಬ ಅರಿವು ಇದ್ದರೂ ಸಹ ಕಾನೂನುಬಾಹಿರವಾಗಿ ನಾಡಬಾಂಬ್‌ಗಳನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ.
ಜೂನ್ 22ರಂದು ಬೆಳಿಗ್ಗೆ ಸುಮಾರು 5.10 ಗಂಟೆಗೆ ಈ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ ಆರೋಪಿಯ ಮನೆಯ ಜೊತೆಗೆ ದೂರುದಾರರ ಮನೆಯ ಮೇಲ್ಛಾವಣಿಯ ಹಂಚುಗಳು, ಅಡುಗೆಮನೆಯ ಕಿಟಕಿಯ ಗಾಜುಗಳು ಹಾಗೂ ಸುತ್ತಮುತ್ತಲಿನ ಮನೆಗಳ ಹಂಚು, ಬಾಗಿಲುಗಳು ಹಾನಿಗೊಳಗಾಗಿವೆ.
ಘಟನೆಯಿಂದ ಒಟ್ಟು ಸುಮಾರು ₹1.15 ಲಕ್ಷ ಮೌಲ್ಯದ ಆಸ್ತಿ ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.