Friday, July 24, 2026
Join WhatsApp Group
HomeLocal Newsಕಂಡಲ್ಲಿ ಕೆಟ್ಟು ನಿಲ್ಲುವ ಬಸ್‌ಗಳು; ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಡೆತ

ಕಂಡಲ್ಲಿ ಕೆಟ್ಟು ನಿಲ್ಲುವ ಬಸ್‌ಗಳು; ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಡೆತ

ಯಲ್ಲಾಪುರ: ಒಂದು ಕಡೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಜಾರಿಯಾಗಿದೆ. ಮತ್ತೊಂದು ಕಡೆ ಆ ವಿದ್ಯಾರ್ಥಿಗಳನ್ನು ಶಾಲೆ-ಕಾಲೇಜಿಗೆ ಕರೆದೊಯ್ಯಬೇಕಾದ ಬಸ್‌ಗಳು ಪದೇಪದೇ ರಸ್ತೆ ಮಧ್ಯೆ ಕೈಕೊಡುತ್ತಿವೆ. ಪರಿಣಾಮವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.

ಸೋಮವಾರ ಯಲ್ಲಾಪುರ-ಕಳಚೆ ಮಾರ್ಗದ ಬಸ್ ಹಾಳಾದ ಬೆನ್ನಲ್ಲೇ ಯಲ್ಲಾಪುರ-ಮಳವಳ್ಳಿ ಬಸ್ ಕೂಡ ಕೆಟ್ಟು ನಿಂತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಈ ಭಾಗದಲ್ಲಿ ಬಸ್ ಕೊರತೆ ಇರುವ ಸಂದರ್ಭದಲ್ಲಿ ಒಂದರ ಹಿಂದೆ ಮತ್ತೊಂದು ಬಸ್ ಸೇವೆ ಸ್ಥಗಿತಗೊಳ್ಳುತ್ತಿರುವುದು ಗ್ರಾಮೀಣ ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಅದರಲ್ಲೂ ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳ ಪರಿಸ್ಥಿತಿ ಹೇಳತೀರದು. ಉಚಿತ ಪ್ರಯಾಣ ಸೌಲಭ್ಯ ಇದ್ದರೂ ಸಮಯಕ್ಕೆ ಬಸ್ ಸಿಗದಿದ್ದರೆ ಆ ಸೌಲಭ್ಯಕ್ಕೆ ಅರ್ಥವೇನು ಎಂಬ ಪ್ರಶ್ನೆ ಪೋಷಕರಲ್ಲಿ ಮೂಡಿದೆ. ಹಲವಾರು ವಿದ್ಯಾರ್ಥಿಗಳು ತಡವಾಗಿ ತರಗತಿಗೆ ತಲುಪುವುದು, ಕೆಲವರು ಕಾಲೇಜು ಅಥವಾ ಶಾಲೆಯನ್ನೇ ತಪ್ಪಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗುತ್ತಿದೆ.

ಗ್ರಾಮೀಣ ಭಾಗದ ಅನೇಕ ಕುಟುಂಬಗಳು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾರ್ವಜನಿಕ ಸಾರಿಗೆಯನ್ನೇ ಸಂಪೂರ್ಣವಾಗಿ ಅವಲಂಬಿಸಿವೆ. ಖಾಸಗಿ ವಾಹನ ವ್ಯವಸ್ಥೆ ಇಲ್ಲದ ಕಾರಣ ಬಸ್ ಕೈಕೊಟ್ಟರೆ ಮಕ್ಕಳ ದಿನವೇ ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೆಲ ಸಂದರ್ಭಗಳಲ್ಲಿ ಬೆಳಿಗ್ಗೆ ಮನೆಯಿಂದ ಹೊರಟ ವಿದ್ಯಾರ್ಥಿಗಳು ಮಧ್ಯಾಹ್ನದವರೆಗೂ ಗಮ್ಯಸ್ಥಾನ ತಲುಪದ ಉದಾಹರಣೆಗಳೂ ಇವೆ ಎಂದು ಸ್ಥಳೀಯರು ಹೇಳುತ್ತಾರೆ.

ಇದರ ನಡುವೆ ತಳಕೇಬೈಲ್ ಕ್ರಾಸ್ ಪ್ರದೇಶದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಈ ಪ್ರದೇಶ ಈಗ ಪ್ರಮುಖ ಸಂಪರ್ಕ ಕೇಂದ್ರವಾಗಿ ಬೆಳೆದಿದ್ದರೂ, ಪ್ರಯಾಣಿಕರಿಗೆ ಮಳೆ-ಬಿಸಿಲಿನಿಂದ ರಕ್ಷಣೆ ನೀಡುವ ಒಂದು ಸರಿಯಾದ ಬಸ್ ಶೆಡ್ ಕೂಡ ಇಲ್ಲ. ಭೂಕುಸಿತಕ್ಕೂ ಮುನ್ನ ಇದ್ದ ವ್ಯವಸ್ಥೆ ಮಾರ್ಗ ಬದಲಾವಣೆಯ ನಂತರ ಐದು ವರ್ಷ ಕಳೆದರೂ ಹೊಸ ಬಸ್ ನಿಲ್ದಾಣ ಅಥವಾ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಿಲ್ಲ.

ಮಳೆಗಾಲದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ರಸ್ತೆಯ ಬದಿಯಲ್ಲೇ ನಿಂತು ಬಸ್‌ಗಾಗಿ ಕಾಯಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಇಲಾಖೆಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂಬ ಆಗ್ರಹ ಕೇಳಿಬರುತ್ತಿದೆ.

ಹಳೆಯ ಬಸ್‌ಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡುವುದು, ಹೆಚ್ಚುವರಿ ಬಸ್‌ಗಳನ್ನು ಒದಗಿಸುವುದು ಹಾಗೂ ತಳಕೇಬೈಲ್ ಕ್ರಾಸ್‌ನಂತಹ ಪ್ರಮುಖ ಸ್ಥಳಗಳಲ್ಲಿ ಬಸ್ ಶೆಡ್ ಮತ್ತು ನಿಲ್ದಾಣ ನಿರ್ಮಿಸುವುದು ತುರ್ತು ಅಗತ್ಯವಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share