Friday, July 24, 2026
Join WhatsApp Group
HomeInformationಈ ಕುಕ್ಕರ್‌ ಸ್ಫೋಟವಾಗುವುದಿಲ್ಲ!

ಈ ಕುಕ್ಕರ್‌ ಸ್ಫೋಟವಾಗುವುದಿಲ್ಲ!

ನಿಮ್ಮ ಮನೆಯ ಪ್ರೆಶರ್ ಕುಕ್ಕರ್ ಯಾವಾಗಲಾದರೂ ಸ್ಫೋಟಿಸಬಹುದು ಎಂಬ ಭಯ ಇತ್ತೇ? ಒಂದು ಕಾಲದಲ್ಲಿ ಆ ಭಯ ನಿಜವಾಗಿಯೂ ಇತ್ತು. ಆದರೆ ಇಂದು ಲಕ್ಷಾಂತರ ಭಾರತೀಯ ಕುಟುಂಬಗಳು ಹೆಚ್ಚು ಸುರಕ್ಷಿತವಾಗಿ ಕುಕ್ಕರ್ ಬಳಸುತ್ತಿರುವುದಕ್ಕೆ ಕಾರಣ ಒಬ್ಬ ಭಾರತೀಯ ಉದ್ಯಮಿ. ಅವರು ಪ್ರೆಸ್ಟೀಜ್ ಕಂಪನಿಯ ರೂವಾರಿಯಾಗಿದ್ದ ದಿವಂಗತ ಉದ್ಯಮಿ ಟಿ.ಟಿ. ಜಗನ್ನಾಥನ್.

ಭಾರತದ ಅಡುಗೆ ಮನೆಗಳ ಚಿತ್ರಣವನ್ನೇ ಬದಲಿಸಿದ ಈ ಉದ್ಯಮಿ, ಪ್ರೆಶರ್ ಕುಕ್ಕರ್ ಸುರಕ್ಷತೆಗೆ ಕ್ರಾಂತಿಕಾರಿ ತಿರುವು ನೀಡಿದ ‘ಗ್ಯಾಸ್ಕೆಟ್ ರಿಲೀಸ್ ಸಿಸ್ಟಮ್ʼ (GRS) ಎಂಬ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದರು. ಕುಕ್ಕರ್‌ನಲ್ಲಿ ಒತ್ತಡ ಅತಿಯಾಗಿ ಹೆಚ್ಚಾದಾಗ ಸ್ಫೋಟ ಸಂಭವಿಸದಂತೆ, ಹೆಚ್ಚುವರಿ ಒತ್ತಡವನ್ನು ಸುರಕ್ಷಿತವಾಗಿ ಹೊರಹಾಕುವ ವ್ಯವಸ್ಥೆಯಿದು.

ಆದರೆ ಅವರ ಮಹತ್ವ ಕೇವಲ ಆವಿಷ್ಕಾರದಲ್ಲಿರಲಿಲ್ಲ. ಸಾಮಾನ್ಯವಾಗಿ ಇಂತಹ ತಂತ್ರಜ್ಞಾನಗಳಿಗೆ ಪೇಟೆಂಟ್ ಪಡೆದು ಕೋಟ್ಯಂತರ ರೂಪಾಯಿ ಗಳಿಸಬಹುದು. ಆದರೆ ಜಗನ್ನಾಥನ್ ಅದನ್ನು ಮಾಡಲಿಲ್ಲ. ಬದಲಾಗಿ, ತಮ್ಮ ಆವಿಷ್ಕಾರವನ್ನು ಇಡೀ ಉದ್ಯಮಕ್ಕೆ ಉಚಿತವಾಗಿ ಬಳಸಲು ಅವಕಾಶ ನೀಡಿದರು. ಪರಿಣಾಮವಾಗಿ ಹಲವು ಕಂಪನಿಗಳು ಈ ತಂತ್ರಜ್ಞಾನ ಅಳವಡಿಸಿಕೊಂಡು ಲಕ್ಷಾಂತರ ಮನೆಗಳಲ್ಲಿ ಸುರಕ್ಷಿತ ಕುಕ್ಕರ್ ಬಳಕೆಗೆ ದಾರಿ ಮಾಡಿಕೊಟ್ಟವು.

ಐಐಟಿ ಮದ್ರಾಸ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಹಾಗೂ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಜಗನ್ನಾಥನ್, 1975ರಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಟಿಟಿಕೆ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡರು. ಆಗ ಬಹುತೇಕ ಮುಚ್ಚುವ ಹಂತದಲ್ಲಿದ್ದ ಕಂಪನಿಯನ್ನು ಅವರು ಹಂತ ಹಂತವಾಗಿ ಬೆಳೆಸಿ, ವಿಶ್ವದ ಗಮನ ಸೆಳೆಯುವ ಬಹುಕೋಟಿ ಮೌಲ್ಯದ ಸಂಸ್ಥೆಯನ್ನಾಗಿ ರೂಪಿಸಿದರು.

ಅವರ ನಾಯಕತ್ವದಲ್ಲಿ ‘ಪ್ರೆಸ್ಟೀಜ್’ಬ್ರ್ಯಾಂಡ್ ಭಾರತೀಯ ಅಡುಗೆ ಮನೆಗಳ ಅವಿಭಾಜ್ಯ ಭಾಗವಾಯಿತು. ಕುಕ್ಕರ್, ಗ್ಯಾಸ್ ಸ್ಟೌವ್, ಮಿಕ್ಸರ್, ಕುಕ್‌ವೇರ್ ಸೇರಿದಂತೆ ಅನೇಕ ಉತ್ಪನ್ನಗಳ ಮೂಲಕ ಪ್ರೆಸ್ಟೀಜ್ ದೇಶದ ಮನೆಮಾತಾಗಿದ್ದು, ಬ್ರಿಟನ್ ಹಾಗೂ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಿಗೂ ವಿಸ್ತರಿಸಿತು.

ಅವರ ಸಾಧನೆ ವ್ಯಾಪಾರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲೂ ಟಿಟಿಕೆ ಸಮೂಹದ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದರು. ಉದ್ಯಮ ಮತ್ತು ಸಮಾಜಸೇವೆಯನ್ನು ಸಮಾನವಾಗಿ ಮುನ್ನಡೆಸಿದ ಕಾರಣ ಅವರಿಗೆ “ಭಾರತದ ಕಿಚನ್ ಮೊಗಲ್” ಎಂಬ ಬಿರುದೂ ದೊರಕಿತ್ತು.

2025ರ ಅಕ್ಟೋಬರ್ 9ರಂದು ಅವರು ನಿಧನರಾದರೂ, ಭಾರತೀಯ ಉದ್ಯಮ, ಸಾರ್ವಜನಿಕ ಸುರಕ್ಷತೆ ಮತ್ತು ನಾವೀನ್ಯತೆಗೆ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರ ಅವರಿಗೆ ಮರಣೋತ್ತರವಾಗಿ ಪದ್ಮ ಪ್ರಶಸ್ತಿ ಘೋಷಿಸಿದೆ.

ಒಬ್ಬ ಉದ್ಯಮಿ ತನ್ನ ಆವಿಷ್ಕಾರದಿಂದ ಹಣ ಸಂಪಾದಿಸುವುದಕ್ಕಿಂತ ಜನರ ಜೀವ ರಕ್ಷಿಸುವುದನ್ನೇ ದೊಡ್ಡ ಸಾಧನೆ ಎಂದು ನಂಬಿದಾಗ ಏನಾಗುತ್ತದೆ ಎಂಬುದಕ್ಕೆ ಟಿ.ಟಿ. ಜಗನ್ನಾಥನ್ ಅವರ ಬದುಕೇ ಅತ್ಯುತ್ತಮ ಉದಾಹರಣೆ. ಭಾರತದ ಕೋಟ್ಯಂತರ ಕುಟುಂಬಗಳು ಪ್ರತಿದಿನ ಸುರಕ್ಷಿತವಾಗಿ ಅಡುಗೆ ಮಾಡುವುದರ ಹಿಂದೆ ಈ ಮಹಾನ್ ವ್ಯಕ್ತಿಯ ದೂರದೃಷ್ಟಿ ಅಡಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share