ಸಿದ್ದಾಪುರ: ಮನೆಗೆ ನುಗ್ಗಿ ಮಹಿಳೆಗೆ ಕತ್ತಿ ತೋರಿಸಿ ಸುಮಾರು ₹3 ಲಕ್ಷ ಮೌಲ್ಯದ ಚಿನ್ನದ ಸರ ದರೋಡೆ ಮಾಡಿದ್ದ ಆರೋಪಿಯನ್ನು ಸಿದ್ದಾಪುರ ಹಾಗೂ ಶಿರಸಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಿದ್ದಾಪುರ ತಾಲೂಕಿನ ಹಾಳದಕಟ್ಟಾ ನಿವಾಸಿ ಪೂನಂ ಗಣಪತಿ ಶೇಟ್ ಅವರ ಮನೆಗೆ ಜೂನ್ 22ರಂದು ಸಂಜೆ ನುಗ್ಗಿದ್ದ ಕೊಂಡ್ಲಿ ಗ್ರಾಮದ ಮಹೇಶ ಹನುಮಂತ ಮಡಿವಾಳ, ಕತ್ತಿ ತೋರಿಸಿ ಬೆದರಿಕೆ ಹಾಕಿದ್ದಾನೆ. “ಕುತ್ತಿಗೆಯಲ್ಲಿರುವ ಸರ ಕೊಡು” ಎಂದು ಬೆದರಿಸಿದಾಗ ಪೂನಂ ಶೇಟ್ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಆರೋಪಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.
ಘಟನೆಯ ಬಳಿಕ ಪೂನಂ ಶೇಟ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಅಪರಿಚಿತ ವ್ಯಕ್ತಿಯಿಂದ ನಡೆದ ದರೋಡೆ ಆಗಿದ್ದರೂ, ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರು ವಿಶೇಷ ತಂಡ ರಚಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿಸಲಾಯಿತು.
ಸಿದ್ದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜೆ.ಬಿ. ಸೀತಾರಾಮ, ಪಿಎಸ್‌ಐ ನಾಗಪ್ಪ ಹಾಗೂ ಶಾಂತಿನಾಥ ಪಾಸಾನೆ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ತಂಡದಲ್ಲಿ ಎಎಸ್‌ಐ ಸಂಗೀತಾ ಕಾನಡೆ, ರಮೇಶ ಗೌಡ, ಸಿಬ್ಬಂದಿಗಳಾದ ಪ್ರಕಾಶ ಪಟಗಾರ, ರಮೇಶಪ್ಪಾ ಕೂಡಲ್, ಮಣಿಕಂಠ ಎಂ.ಆರ್., ಗಿರೀಶಯ್ಯ ಎಂ.ಎಸ್., ಪ್ರಕಾಶ ಮಲ್ಲಾಡದ, ನಾಗರಾಜ ತಿಮ್ಮಾಪುರ, ರವಿ ಕ್ಯಾಲಕೋಡ್, ಧನಂಜಯ ಮಡಿವಾಳ ಹಾಗೂ ಶಿರಸಿ ನಗರ ಪೊಲೀಸ್ ಠಾಣೆಯ ರಾಮಯ್ಯ ಪೂಜಾರಿ ಮತ್ತು ಹನುಮಂತ ಮಂಕಾಪುರ ಪಾಲ್ಗೊಂಡಿದ್ದರು.
ತಾಂತ್ರಿಕ ಮಾಹಿತಿ ಮತ್ತು ವಿವಿಧ ಸುಳಿವುಗಳ ಆಧಾರದ ಮೇಲೆ ತನಿಖೆ ನಡೆಸಿದ ವೇಳೆ ಕೊಂಡ್ಲಿ ಗ್ರಾಮದ ಮಹೇಶ ಹನುಮಂತ ಮಡಿವಾಳನ ಮೇಲೆ ಅನುಮಾನ ಮೂಡಿದ್ದು, ವಿಚಾರಣೆ ವೇಳೆ ಆತನೇ ದರೋಡೆ ಕೃತ್ಯ ಎಸಗಿರುವುದು ದೃಢಪಟ್ಟಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿ, ದರೋಡೆ ಮಾಡಿದ್ದ ಚಿನ್ನದ ತಾಳಿ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.