Friday, July 24, 2026
Join WhatsApp Group
HomeInformationಹಾವು ಕಚ್ಚಿತಾ? ಈ ತಪ್ಪುಗಳು ಜೀವಕ್ಕೆ ಅಪಾಯ!

ಹಾವು ಕಚ್ಚಿತಾ? ಈ ತಪ್ಪುಗಳು ಜೀವಕ್ಕೆ ಅಪಾಯ!

ಮಳೆಗಾಲ ಬಂತೆಂದರೆ ನೆನಪಾಗುವುದು ಮಳೆ, ಹಸಿರು ಮತ್ತು ತಂಪು. ಆದರೆ ಇದೇ ಸಮಯದಲ್ಲಿ ಮತ್ತೊಂದು ಅಪಾಯವೂ ನಮ್ಮ ಮನೆ ಬಾಗಿಲಿಗೆ ಬಂದು ನಿಲ್ಲುತ್ತದೆ. ಅದು ಹಾವುಗಳ ಓಡಾಟ.

ನಿರಂತರ ಮಳೆಯಿಂದ ಬಿಲಗಳಲ್ಲಿ ನೀರು ತುಂಬಿದಾಗ ಹಾವುಗಳು ಸುರಕ್ಷಿತ ಹಾಗೂ ಬೆಚ್ಚನೆಯ ಜಾಗವನ್ನು ಹುಡುಕಿಕೊಂಡು ಹೊರಬರುತ್ತವೆ. ಹಿಂದೆ ಹಾವುಗಳು ಹೊಲ, ತೋಟ, ಕಾಡು ಅಥವಾ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚಾಗಿ ಕಾಣಿಸುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಗರ, ಪಟ್ಟಣ, ಅಪಾರ್ಟ್‌ಮೆಂಟ್‌, ಮನೆಗಳ ಕಾಂಪೌಂಡ್‌, ಕಾರು ನಿಲುಗಡೆ ಸ್ಥಳ, ಅಂಗಡಿಗಳ ಗೋದಾಮು, ಚಪ್ಪಲಿ ಸ್ಟ್ಯಾಂಡ್‌, ನೀರಿನ ಪೈಪ್‌ಗಳ ಸುತ್ತಮುತ್ತ, ಮನೆಯ ಅಡುಗೆ ಕೋಣೆ, ಶೌಚಾಲಯ, ಮಲಗುವ ಕೋಣೆಗಳವರೆಗೂ ಹಾವುಗಳು ನುಗ್ಗುವ ಘಟನೆಗಳು ಆಗಾಗ ವರದಿಯಾಗುತ್ತಿವೆ. ಹೀಗಾಗಿ ಹಾವು ಕಚ್ಚುವುದು ಗ್ರಾಮೀಣ ಜನರ ಸಮಸ್ಯೆ ಮಾತ್ರವಲ್ಲ, ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕಾದ ವಿಷಯ.

ದುರದೃಷ್ಟವಶಾತ್, ಹಾವು ಕಚ್ಚಿದರೆ ಜನರಲ್ಲಿ ಮೊದಲು ಕಾಣಿಸಿಕೊಳ್ಳುವುದು ಭಯ. ಆ ಭಯದಲ್ಲೇ ಹಲವರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಗಾಯವನ್ನು ಹಿಗ್ಗಿಸುವುದು, ವಿಷ ಹೀರುವ ಪ್ರಯತ್ನ ಮಾಡುವುದು, ಬಿಗಿಯಾಗಿ ಬಟ್ಟೆ ಕಟ್ಟುವುದು, ಮಂತ್ರ-ತಂತ್ರದ ಮೊರೆ ಹೋಗುವುದು, ಆಸ್ಪತ್ರೆಗೆ ಹೋಗುವುದನ್ನು ವಿಳಂಬ ಮಾಡುವುದು ಇಂತಹ ತಪ್ಪುಗಳೇ ಅನೇಕ ಬಾರಿ ಜೀವಕ್ಕೆ ಕುತ್ತು ತರುತ್ತವೆ.

ವೈದ್ಯರ ಪ್ರಕಾರ, ಹಾವು ಕಚ್ಚಿದ ನಂತರ ಮೊದಲ ಒಂದು ಗಂಟೆಯಲ್ಲಿ ಸರಿಯಾದ ಚಿಕಿತ್ಸೆ ದೊರೆತರೆ ಬಹುತೇಕ ಜೀವಗಳನ್ನು ಉಳಿಸಬಹುದು. ಆದರೆ ತಪ್ಪಾದ ಪ್ರಥಮ ಚಿಕಿತ್ಸೆ ಜೀವಕ್ಕೆ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಹಾವು ಕಚ್ಚಿದ ಕೂಡಲೇ ಮೊದಲು ಮಾಡಬೇಕಾದ ಕೆಲಸ ಎಂದರೆ ಗಾಬರಿಯಾಗದಿರುವುದು. ಆತಂಕದಿಂದ ಓಡಾಡುವುದು ಅಥವಾ ಓಡುವುದು ವಿಷವು ರಕ್ತದ ಮೂಲಕ ವೇಗವಾಗಿ ಹರಡಲು ಕಾರಣವಾಗಬಹುದು. ಆದ್ದರಿಂದ ಕಚ್ಚಿಸಿಕೊಂಡ ವ್ಯಕ್ತಿಯನ್ನು ಶಾಂತವಾಗಿರಿಸಿ, ಸಾಧ್ಯವಾದರೆ ಮಲಗಿಸಿ ಅಥವಾ ಕುಳ್ಳಿರಿಸಿ, ಕಚ್ಚಿದ ಕೈ ಅಥವಾ ಕಾಲನ್ನು ಹೆಚ್ಚು ಅಲುಗಾಡದಂತೆ ಸ್ಥಿರವಾಗಿಡಬೇಕು.

ಕೈಯಲ್ಲಿ ಉಂಗುರ, ಬಳೆ, ಗಡಿಯಾರ ಅಥವಾ ಕಾಲಿನಲ್ಲಿ ಬಿಗಿಯಾದ ವಸ್ತುಗಳಿದ್ದರೆ ಅವುಗಳನ್ನು ತೆಗೆದುಹಾಕಬೇಕು. ಏಕೆಂದರೆ ಕೆಲವೇ ನಿಮಿಷಗಳಲ್ಲಿ ಊತ ಕಾಣಿಸಿಕೊಳ್ಳಬಹುದು. ಗಾಯವನ್ನು ತೊಳೆಯುವ ಅಥವಾ ಕೆದಕುವ ಅಗತ್ಯವಿಲ್ಲ. ಸ್ವಚ್ಛವಾದ ಬಟ್ಟೆಯಿಂದ ಸಡಿಲವಾಗಿ ಮುಚ್ಚಿದರೆ ಸಾಕು. ನಂತರ ಸಮಯ ವ್ಯರ್ಥ ಮಾಡದೆ ಹತ್ತಿರದ ಆಸ್ಪತ್ರೆಗೆ ತಕ್ಷಣ ತೆರಳಬೇಕು.

ಕಚ್ಚಿದ ಸಮಯ ನೆನಪಿಟ್ಟುಕೊಂಡು ವೈದ್ಯರಿಗೆ ತಿಳಿಸಿದರೆ ಚಿಕಿತ್ಸೆಗೆ ಅನುಕೂಲವಾಗುತ್ತದೆ. ಹಾವು ಯಾವ ಜಾತಿಯದು ಎಂದು ತಿಳಿಯಲು ಅದನ್ನು ಹಿಡಿಯಲು ಅಥವಾ ಕೊಲ್ಲಲು ಹೋಗುವುದು ಅಪಾಯಕಾರಿ. ಅದರ ಬಣ್ಣ,ಚಹರೆ  ಅಥವಾ ಗಾತ್ರ ನೆನಪಿದ್ದರೆ ಸಾಕು.

ಹಾವು ಕಚ್ಚಿದ ಜಾಗಕ್ಕೆ ಬಿಗಿಯಾಗಿ ಹಗ್ಗ ಅಥವಾ ಬಟ್ಟೆ ಕಟ್ಟಬಾರದು. ಇದರಿಂದ ರಕ್ತಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ ಅಂಗಕ್ಕೆ ಶಾಶ್ವತ ಹಾನಿಯಾಗಬಹುದು. ಸಿನಿಮಾಗಳಲ್ಲಿ ತೋರಿಸುವಂತೆ ಗಾಯವನ್ನು ಬ್ಲೇಡ್‌ನಿಂದ ಕತ್ತರಿಸುವುದು ಅಥವಾ ಬಾಯಿಯಿಂದ ವಿಷ ಹೀರುವ ಪ್ರಯತ್ನ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಸೋಂಕಿನ ಅಪಾಯ ಹೆಚ್ಚುತ್ತದೆ.

ಗಾಯದ ಮೇಲೆ ಐಸ್‌ ಇಡುವುದು, ರಾಸಾಯನಿಕ ಅಥವಾ ಎಣ್ಣೆ ಸುರಿಯುವುದು, ಮದ್ಯ ಅಥವಾ ಕಾಫಿ ಕುಡಿಸುವುದು, ಮನೆಮದ್ದು ಅಥವಾ ಮಂತ್ರ-ತಂತ್ರದ ಮೊರೆ ಹೋಗುವುದು ಇವೆಲ್ಲವೂ ಅಪಾಯಕಾರಿ. ಕೆಲವೊಮ್ಮೆ ಹಾವು ಕಚ್ಚಿದ ತಕ್ಷಣ ಯಾವುದೇ ಲಕ್ಷಣಗಳು ಕಾಣಿಸದೇ ಇರಬಹುದು. ಅದನ್ನು ವಿಷಕಾರಿಯಲ್ಲ ಎಂದು ನಿರ್ಲಕ್ಷ್ಯ ಮಾಡುವುದು ದೊಡ್ಡ ತಪ್ಪು. ಕೆಲವು ವಿಷಗಳ ಪರಿಣಾಮ ಗಂಟೆಗಳ ನಂತರ ಕಾಣಿಸಿಕೊಳ್ಳಬಹುದು. ಆದ್ದರಿಂದ ಯಾವುದೇ ಅನುಮಾನವಿದ್ದರೂ ವೈದ್ಯರನ್ನು ಭೇಟಿ ಮಾಡುವುದು ಅನಿವಾರ್ಯ.

ಮಳೆಗಾಲದಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಹಾವು ಕಚ್ಚುವ ಅಪಾಯವನ್ನು ಬಹಳಷ್ಟು ಕಡಿಮೆ ಮಾಡಬಹುದು. ರಾತ್ರಿ ಹೊರಗೆ ಹೋಗುವಾಗ ಟಾರ್ಚ್ ಬಳಸುವುದು, ಚಪ್ಪಲಿ ಧರಿಸುವ ಮೊದಲು ಅದರೊಳಗೆ ನೋಡುವುದು, ಮನೆಯ ಸುತ್ತಮುತ್ತ ಪೊದೆ, ಕಸ ಹಾಗೂ ಕಟ್ಟಿಗೆ ರಾಶಿ ಸೇರದಂತೆ ನೋಡಿಕೊಳ್ಳುವುದು, ಇಲಿಗಳ ಓಡಾಟವನ್ನು ನಿಯಂತ್ರಿಸುವುದು, ಗೋಡೆ ಮತ್ತು ಬಾಗಿಲಿನ ಬಿರುಕುಗಳನ್ನು ಮುಚ್ಚುವುದು, ಬಹಳ ದಿನಗಳಿಂದ ಬಳಸದ ವಸ್ತುಗಳನ್ನು ಕೈ ಹಾಕುವ ಮೊದಲು ಪರಿಶೀಲಿಸುವುದು ಅತ್ಯಗತ್ಯ.

ಮನೆಯಲ್ಲಿ ಅಥವಾ ಸುತ್ತಮುತ್ತ ಹಾವು ಕಂಡರೆ ಅದನ್ನು ಹೊಡೆಯುವ ಅಥವಾ ಹಿಡಿಯುವ ಸಾಹಸ ಮಾಡಬಾರದು. ಸುರಕ್ಷಿತ ಅಂತರ ಕಾಯ್ದುಕೊಂಡು ಅರಣ್ಯ ಇಲಾಖೆ ಅಥವಾ ತರಬೇತಿ ಪಡೆದ ಉರಗ ರಕ್ಷಕರಿಗೆ ಮಾಹಿತಿ ನೀಡುವುದು ಸೂಕ್ತ.

ಹಾವು ಕಚ್ಚಿದರೆ ಜೀವ ಉಳಿಸುವ ದೊಡ್ಡ ಆಯುಧ ಔಷಧಿಯಷ್ಟೇ ಅಲ್ಲ, ಸರಿಯಾದ ಮಾಹಿತಿ ಮತ್ತು ಸಮಯೋಚಿತ ಚಿಕಿತ್ಸೆ ಜೀವ ಉಳಿಸುತ್ತದೆ. ಮಳೆಗಾಲದಲ್ಲಿ ಈ ಸರಳ ಮಾಹಿತಿಯನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಕುಟುಂಬದವರಿಗೂ ಹಂಚಿಕೊಂಡರೆ, ಒಂದು ದಿನ ಅದು ಯಾರದೋ ಅಮೂಲ್ಯ ಜೀವವನ್ನು ಉಳಿಸುವ ಕಾರಣವಾಗಬಹುದು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share