ಜೊಯಿಡಾ: ಕಾಡುಪ್ರಾಣಿಗಳ ಚಿತ್ರಗಳು ತನ್ನನ್ನು ಬೆನ್ನಟ್ಟುತ್ತಿವೆ ಎಂಬ ಭ್ರಮೆಯಿಂದ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ಜೊಯಿಡಾ ತಾಲೂಕಿನ ಕಸಂಬಾ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕಸಂಬಾ ಗ್ರಾಮದ ಸಂತೋಷ ಶಾಂತಾರಾಮ ದೇವಳಿ (37) ಎಂದು ಗುರುತಿಸಲಾಗಿದೆ. ಅವರು ಗಾರೆ ಕೆಲಸ ಮಾಡುತ್ತಿದ್ದರು.
ಕುಟುಂಬದವರ ಮಾಹಿತಿ ಪ್ರಕಾರ, ಸಂತೋಷ ಅವರು ಕಳೆದ ಕೆಲವು ದಿನಗಳಿಂದ ರಾತ್ರಿ ನಿದ್ರೆ ಮಾಡದೆ, “ಮನೆಯ ಗೋಡೆಯ ಮೇಲೆ ಕಾಡುಪ್ರಾಣಿಗಳ ಚಿತ್ರಗಳು ಕಾಣಿಸುತ್ತಿವೆ. ಅವು ನನ್ನನ್ನು ಬೆನ್ನಟ್ಟುತ್ತಿವೆ” ಎಂದು ಹೇಳುತ್ತಾ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರು.
ಜೂನ್ 24ರಂದು ಬೆಳಿಗ್ಗೆ 8.30ರಿಂದ 9 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಗದ್ದೆಗೆ ಸಿಂಪಡಿಸಲು ತಂದಿಟ್ಟಿದ್ದ ಕ್ರಿಮಿನಾಶಕವನ್ನು ಸೇವಿಸಿ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 28ರಂದು ರಾತ್ರಿ 8.55ಕ್ಕೆ ಅವರು ಮೃತಪಟ್ಟಿದ್ದಾರೆ.
ಮೃತರ ಪತ್ನಿ ಶಿಲ್ಪಾ ಸಂತೋಷ ದೇವಳಿ ನೀಡಿದ ದೂರಿನ ಆಧಾರದ ಮೇಲೆ ಜೊಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.