ಶಿರಸಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಚಾಲನೆ ದೊರೆತ ಮೊದಲ ದಿನವೇ ಶಿರಸಿ-ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಕ್ರಿಯವಾಗಿ ಭಾಗವಹಿಸಿ, ಸಾರ್ವಜನಿಕರಿಗೆ ಮಾದರಿಯಾದರು.
ತಮ್ಮ ಮತದಾರರ ವಿವರಗಳ ಪರಿಷ್ಕರಣೆಗೆ ಸಂಬಂಧಿಸಿದ ನಿಗದಿತ ನಮೂನೆಯನ್ನು ಭರ್ತಿ ಮಾಡಿದ ಅವರು, ಅದನ್ನು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ (BLO)ಗೆ ಅಧಿಕೃತವಾಗಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿರಸಿ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸಂಸದ ಕಾಗೇರಿ, ಮತದಾನ ಮಾಡುವುದು ನಮ್ಮ ಹಕ್ಕು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವೂ ಹೌದು. ಸಾರ್ವಜನಿಕರು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಬಿಎಲ್‌ಒ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಸಹಕರಿಸಬೇಕು. ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮತದಾರರ ಪಟ್ಟಿಯನ್ನು ನಿಖರ ಹಾಗೂ ದೋಷರಹಿತವಾಗಿಸುವ ಉದ್ದೇಶದಿಂದ ನಡೆಯುತ್ತಿರುವ ಈ ವಿಶೇಷ ಪರಿಷ್ಕರಣೆ ಪ್ರಕ್ರಿಯೆಗೆ ಸಾರ್ವಜನಿಕರು ಸಕ್ರಿಯ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.