ಹಳಿಯಾಳ: ಪಟ್ಟಣದಲ್ಲಿ ನಡೆದಿದ್ದ ಮೂರು ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಹಳಿಯಾಳ ಪೊಲೀಸರು ಭೇದಿಸಿದ್ದು, ಅಂತರ್‌ಜಿಲ್ಲಾ ಮಟ್ಟದಲ್ಲಿ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಕಳವಾಗಿದ್ದ ಮೂರು ಮೋಟಾರ್‌ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೂನ್ 25ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1.10ರ ನಡುವಿನ ಅವಧಿಯಲ್ಲಿ ಹಳಿಯಾಳ ಪಟ್ಟಣದ ಬಾಲಾಜಿ ವೈನ್ ಶಾಪ್ ಸಮೀಪ ನಿಲ್ಲಿಸಲಾಗಿದ್ದ ಹೋಂಡಾ ಆಕ್ಟಿವಾ ಸ್ಕೂಟಿಯನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ, ಸಿಸಿಟಿವಿ ದೃಶ್ಯಾವಳಿ ಹಾಗೂ ಖಚಿತ ಮಾಹಿತಿಯ ಆಧಾರದ ಮೇಲೆ ಜೂನ್ 30ರಂದು ಬೆಳಗಾವಿ ಜಿಲ್ಲೆಯ ಶಹಾಪುರದ ಸರ್ವೋದಯ ಕಾಲೋನಿಯ ನಿವಾಸಿ ಸರ್ವೇಶ್ ಶಿವಲಿಂಗಯ್ಯ ಮಠಪತಿ ಎಂಬಾತನನ್ನು ಹಳಿಯಾಳ ಪಟ್ಟಣದಲ್ಲಿ ಬಂಧಿಸಿದರು.
ವಿಚಾರಣೆ ವೇಳೆ ಆರೋಪಿ ಹಳಿಯಾಳದಲ್ಲಿ ಕಳವಾಗಿದ್ದ ಮೂರು ಬೈಕ್‌ಗಳನ್ನು ತಾನೇ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನಿಂದ ಮೂರು ಮೋಟಾರ್‌ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ದಾಂಡೇಲಿ ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಕಂಡಿ ಅವರ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಜಯಪಾಲ್ ಪಾಟೀಲ್ ನೇತೃತ್ವದಲ್ಲಿ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ಕೃಷ್ಣಗೌಡ ಅರಕೇರಿ, ಪಿಎಸ್‌ಐ ಮಹೇಶ್ ಮಾಳಿ, ಪ್ರೊಬೆಷನರಿ ಪಿಎಸ್‌ಐ ಅಂಬಿಕಾ ಗಾಣಿಗರ, ಸಿಬ್ಬಂದಿಗಳಾದ ಬಸವರಾಜ ಹಗರಿ, ಭೀಮಣ್ಣ, ಶ್ರೀಶೈಲ್ ಜಿ.ಎಂ., ವಿನೋದ್, ಲಕ್ಷ್ಮಣ ಪೂಜಾರಿ, ಬಸವರಾಜ ಚವಡಿ, ಅರವಿಂದ ಭಜಂತ್ರಿ, ಗಣೇಶ ಹಾಗೂ ಮಲ್ಲಿಕಾರ್ಜುನ ಪ್ರಮುಖ ಪಾತ್ರ ವಹಿಸಿದರು.
ಇದರ ಜೊತೆಗೆ ಬೆಳಗಾವಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಶ್ರೀಧರ ಹಾಗೂ ಅಜಿತ್, ಕಾರವಾರ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಬಬನ್ ಕದಂ ಮತ್ತು ಉದಯ ಗುನಗಾ ಸಹ ಕಾರ್ಯಾಚರಣೆಯಲ್ಲಿ ಮಹತ್ವದ ಸಹಕಾರ ನೀಡಿದರು.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಕಳುವಾದ ವಾಹನಗಳನ್ನು ವಶಪಡಿಸಿಕೊಂಡ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.