ಯೆಲ್ಲೋ, ಆರೆಂಜ್, ರೆಡ್ ಅಲರ್ಟ್ ನಡುವಿನ ವ್ಯತ್ಯಾಸ ಏನು?
ಮಳೆ ಬರುತ್ತಿದೆ ಎಂಬ ಸುದ್ದಿ ಕೇಳಿದಾಗ ಹಲವರು ಛತ್ರಿ ಹುಡುಕುತ್ತಾರೆ. ಆದರೆ “ಆರೆಂಜ್ ಅಲರ್ಟ್” ಘೋಷಣೆಯಾಗಿದೆ ಎಂದರೆ ಅದರ ಅರ್ಥ ಎಷ್ಟು ಜನರಿಗೆ ಗೊತ್ತು? ಕೆಲವರು ಅದನ್ನು ಸಾಮಾನ್ಯ ಎಚ್ಚರಿಕೆ ಎಂದುಕೊಳ್ಳುತ್ತಾರೆ. ಇನ್ನೂ ಕೆಲವರು “ರೆಡ್ ಅಲರ್ಟ್ ಇಲ್ಲ ಅಲ್ವಾ, ಏನೂ ಆಗಲ್ಲ” ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಹವಾಮಾನ ಇಲಾಖೆ ನೀಡುವ ಈ ಬಣ್ಣಗಳ ಹಿಂದಿರುವ ಸಂದೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ಅನೇಕ ಅಪಾಯಗಳನ್ನು ಮುಂಚಿತವಾಗಿಯೇ ತಪ್ಪಿಸಿಕೊಳ್ಳಬಹುದು.
ಭಾರತೀಯ ಹವಾಮಾನ ಇಲಾಖೆ (IMD) ಹವಾಮಾನದ ತೀವ್ರತೆಯನ್ನು ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಯೆಲ್ಲೋ (ಹಳದಿ), ಆರೆಂಜ್ (ಕಿತ್ತಳೆ) ಮತ್ತು ರೆಡ್ (ಕೆಂಪು) ಎಂಬ ಮೂರು ಪ್ರಮುಖ ಎಚ್ಚರಿಕೆಗಳನ್ನು ನೀಡುತ್ತದೆ. ಪ್ರತಿಯೊಂದು ಬಣ್ಣವೂ ಬೇರೆಬೇರೆ ಮಟ್ಟದ ಅಪಾಯವನ್ನು ಸೂಚಿಸುತ್ತದೆ.
ಯೆಲ್ಲೋ ಅಲರ್ಟ್ ಎಂದರೆ “ಎಚ್ಚರವಾಗಿರಿ“ ಎಂಬ ಸಂದೇಶ. ಸಾಮಾನ್ಯಕ್ಕಿಂತ ಹೆಚ್ಚು ಮಳೆ, ಬಲವಾದ ಗಾಳಿ ಅಥವಾ ಗುಡುಗು-ಮಿಂಚು ಸಂಭವಿಸುವ ಸಾಧ್ಯತೆ ಇರುತ್ತದೆ. ದೈನಂದಿನ ಕೆಲಸಗಳನ್ನು ಮಾಡಬಹುದು. ಆದರೆ ಆಡಳಿತ ನೀಡುವ ಹವಾಮಾನ ಮಾಹಿತಿಯ ಮೇಲೆ ಕಣ್ಣಿಟ್ಟಿರಬೇಕು.
ಆರೆಂಜ್ ಅಲರ್ಟ್ ಎಂದರೆ “ಸಿದ್ಧರಾಗಿರಿ“ ಎಂಬ ಸಂದೇಶ. ಇದು ಯೆಲ್ಲೋಗಿಂತ ಒಂದು ಹಂತ ಹೆಚ್ಚು ಗಂಭೀರ. ಭಾರಿ ಮಳೆ, 30ರಿಂದ 50 ಕಿ.ಮೀ. ಅಥವಾ ಅದಕ್ಕಿಂತ ಹೆಚ್ಚು ವೇಗದ ಗಾಳಿ, ಮರಗಳು ಉರುಳುವ ಸಾಧ್ಯತೆ, ರಸ್ತೆಗಳಲ್ಲಿ ನೀರು ನಿಲ್ಲುವುದು, ಸಣ್ಣ ಪ್ರಮಾಣದ ಭೂಕುಸಿತ, ವಿದ್ಯುತ್ ವ್ಯತ್ಯಯ ಮುಂತಾದ ಪರಿಸ್ಥಿತಿಗಳು ಎದುರಾಗಬಹುದು. ಅನಗತ್ಯ ಪ್ರಯಾಣವನ್ನು ತಪ್ಪಿಸುವುದು, ತಗ್ಗು ಪ್ರದೇಶಗಳಿಂದ ದೂರವಿರುವುದು, ನದಿ, ಹೊಳೆ, ಸಮುದ್ರ ತೀರಗಳಿಗೆ ಹೋಗದಿರುವುದು ಉತ್ತಮ.
ರೆಡ್ ಅಲರ್ಟ್ ಎಂದರೆ “ಅತ್ಯಂತ ಅಪಾಯಕಾರಿ ಪರಿಸ್ಥಿತಿ“ ಎಂಬ ಅರ್ಥ. ಭಾರೀ ಮಳೆ, ಪ್ರವಾಹ, ದೊಡ್ಡ ಪ್ರಮಾಣದ ಭೂಕುಸಿತ, ರಸ್ತೆ ಸಂಪರ್ಕ ಕಡಿತ, ಜನರ ಸ್ಥಳಾಂತರದಂತಹ ತುರ್ತು ಪರಿಸ್ಥಿತಿ ಎದುರಾಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಹಾಗಾದರೆ ಆರೆಂಜ್ ಅಲರ್ಟ್ ಬಂದರೆ ಏನು ಮಾಡಬೇಕು?
ಮೊದಲನೆಯದಾಗಿ, ಜಿಲ್ಲಾಡಳಿತದ ಸೂಚನೆಗಳನ್ನು ಗಮನಿಸಿ. ಮೊಬೈಲ್‌ನಲ್ಲಿ ಬರುವ ಹವಾಮಾನ ಎಚ್ಚರಿಕೆಗಳನ್ನು ನಿರ್ಲಕ್ಷಿಸಬೇಡಿ. ಅಗತ್ಯವಿಲ್ಲದಿದ್ದರೆ ದೂರದ ಪ್ರಯಾಣ ಮುಂದೂಡಿ. ಮಕ್ಕಳನ್ನು ನದಿ, ಕೆರೆ, ಹಳ್ಳ, ಸಮುದ್ರ ತೀರಗಳಿಗೆ ಕಳುಹಿಸಬೇಡಿ. ಮಳೆ-ಗುಡುಗಿನ ವೇಳೆ ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲಬೇಡಿ. ಮನೆಯಲ್ಲಿ ಟಾರ್ಚ್, ಪವರ್ ಬ್ಯಾಂಕ್, ಅಗತ್ಯ ಔಷಧಿ ಸಿದ್ಧವಾಗಿಟ್ಟುಕೊಳ್ಳುವುದು ಒಳ್ಳೆಯದು.
ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ವಾಸಿಸುವವರು ಭೂಕುಸಿತದ ಲಕ್ಷಣಗಳಾದ ನೆಲ ಬಿರುಕು ಬಿಡುವುದು, ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳುವುದು, ಗುಡ್ಡ ಜಾರುವುದು ಮುಂತಾದ ಸೂಚನೆಗಳು ಕಂಡರೆ ಕೂಡಲೇ ಸುರಕ್ಷಿತ ಸ್ಥಳಕ್ಕೆ ತೆರಳಬೇಕು.
ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ, ಆರೆಂಜ್ ಅಲರ್ಟ್ ಎಂದರೆ ಅಪಾಯ ಖಚಿತ ಎಂದಲ್ಲ. ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂಬ ಎಚ್ಚರಿಕೆ. ಅದೇ ರೀತಿ, ರೆಡ್ ಅಲರ್ಟ್ ಇಲ್ಲ ಎಂದು ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ. ಬಹುತೇಕ ದೊಡ್ಡ ಅನಾಹುತಗಳು ಜನರ ನಿರ್ಲಕ್ಷ್ಯದಿಂದಲೇ ಸಂಭವಿಸುತ್ತವೆ.
ಮಳೆ, ಗಾಳಿ, ಗುಡುಗು-ಮಿಂಚು ಇವೆಲ್ಲವೂ ಪ್ರಕೃತಿಯ ಭಾಗ. ಆದರೆ ಅವುಗಳ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡುವ ವ್ಯವಸ್ಥೆ ಇಂದು ನಮ್ಮ ಕೈಯಲ್ಲಿದೆ. ಹೀಗಾಗಿ ಹವಾಮಾನ ಇಲಾಖೆಯ ಬಣ್ಣದ ಎಚ್ಚರಿಕೆಗಳನ್ನು ಕೇವಲ ಸುದ್ದಿಯಾಗಿ ನೋಡದೆ, ಜೀವ ಉಳಿಸುವ ಮುನ್ನೆಚ್ಚರಿಕೆ ಎಂದು ಪರಿಗಣಿಸಿದರೆ ಸಾಕು. ಒಂದು ಕ್ಷಣದ ಜಾಗರೂಕತೆ, ದೊಡ್ಡ ಅನಾಹುತವನ್ನೇ ತಪ್ಪಿಸಬಹುದು.