ಸಿದ್ದಾಪುರ: ಅರಣ್ಯ ಸಂರಕ್ಷಣಾ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವುದೇ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣ ಸಮಸ್ಯೆ ಉಲ್ಬಣಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ಗ್ರೀನ್ಕಾರ್ಡ್ ಅಧ್ಯಕ್ಷ ರವೀಂದ್ರ ನಾಯ್ಕ್ ಆರೋಪಿಸಿದರು.
ತಾಲೂಕಿನ ಹಾರ್ಸಿಕಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ‘ದಶಲಕ್ಷ ಗಿಡ ನೆಡುವ ಅಭಿಯಾನ’ಹಾಗೂ ಅರಣ್ಯವಾಸಿಗಳಿಗೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1998ರಲ್ಲಿ ಜಿಲ್ಲೆಯಲ್ಲಿ ಸುಮಾರು 35 ಸಾವಿರ ಅರಣ್ಯ ಅತಿಕ್ರಮಣ ಕುಟುಂಬಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅದರ ಮಾಹಿತಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗಿತ್ತು. ಬಳಿಕ ಅರಣ್ಯ ಸಂರಕ್ಷಣಾ ಕಾಯಿದೆಯ ಸಮರ್ಪಕ ಅನುಷ್ಠಾನದಲ್ಲಿ ವೈಫಲ್ಯ ಕಂಡ ಹಿನ್ನೆಲೆಯಲ್ಲಿ, ಅರಣ್ಯ ಹಕ್ಕು ಕಾಯ್ದೆಯಡಿ ಸುಮಾರು 84 ಸಾವಿರ ಕುಟುಂಬಗಳು ಸಾಗುವಳಿ ಹಕ್ಕಿಗಾಗಿ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗೆ ಅರಣ್ಯ ಇಲಾಖೆಯೇ ನೇರ ಹೊಣೆ ಎಂದು ಅವರು ಟೀಕಿಸಿದರು.
ಪರಿಸರ ಸಮತೋಲನ ಕಾಪಾಡುವ ಜೊತೆಗೆ ಅರಣ್ಯವಾಸಿಗಳ ಜೀವನೋಪಾಯಕ್ಕೂ ಪೂರಕವಾಗುವ ರೀತಿಯಲ್ಲಿ ಜಿಲ್ಲಾದ್ಯಂತ ದಶಲಕ್ಷ ಗಿಡ ನೆಡುವ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ, ಕಾನೂನಿನ ಮೂಲಕ ಅರಣ್ಯ ರಕ್ಷಣೆಯನ್ನು ಸಮರ್ಪಕವಾಗಿ ನಿರ್ವಹಿಸದಿರುವುದರಿಂದಲೇ ಇಂದು ಅರಣ್ಯವಾಸಿಗಳ ಒಕ್ಕಲೆಬ್ಬಿಸುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಸುಮಾರು 12 ವರ್ಷಗಳ ಹಿಂದೆಯೇ ಅರಣ್ಯ ಪ್ರದೇಶದಲ್ಲಿನ ಅಕೇಶಿಯಾ ಹಾಗೂ ನೀಲಗಿರಿ ಮರಗಳನ್ನು ತೆರವುಗೊಳಿಸಿ ಹಣ್ಣಿನ ಗಿಡಗಳನ್ನು ನೆಡಲು ರಾಜ್ಯ ಸರ್ಕಾರ ಆದೇಶ ನೀಡಿದ್ದರೂ ಅದನ್ನು ಜಾರಿಗೆ ತರಲಾಗಿಲ್ಲ. ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿಯೂ ಇಲಾಖೆ ಸಮರ್ಪಕವಾಗಿ ಸ್ಪಂದಿಸಿಲ್ಲ. ಗಿಡ ನೆಡುವುದರ ಬಗ್ಗೆ ಇಲಾಖೆ ಆಸಕ್ತಿ ತೋರಿಸುತ್ತಿದ್ದರೂ, ಪರಿಸರ ಸಂರಕ್ಷಣೆ ಮತ್ತು ಜನಸ್ಪಂದನೆಯ ವಿಷಯದಲ್ಲಿ ಅದೇ ಬದ್ಧತೆ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ರಮೇಶ್ ಹೆಗಡೆ ಹಾರ್ಸಿಮನೆ ಮಾತನಾಡಿ, ಭೂಮಿ ಹಕ್ಕಿನ ಹೋರಾಟಕ್ಕೆ ಕಾನೂನಿನ ಅರಿವು ಮತ್ತು ಸಂಘಟಿತ ಹೋರಾಟ ಅತ್ಯಗತ್ಯವಾಗಿದೆ. ಅಘನಾಶಿನಿ ನದಿ ಜೋಡಣೆ ಹೋರಾಟ ಹಾಗೂ ಯುನೆಸ್ಕೋ ಮಾನ್ಯತೆಗೆ ಸಂಬಂಧಿಸಿದ ಹೋರಾಟಗಳು ಇದಕ್ಕೆ ಉತ್ತಮ ಉದಾಹರಣೆಯಾಗಿವೆ ಎಂದು ಹೇಳಿದರು.
ಮಂಜುನಾಥ ಮಡಿವಾಳ ಕಿಲಾರ ಸ್ವಾಗತಿಸಿದರು. ಸಂಚಾಲಕ ಮಹಾಬಲೇಶ್ವರ ನಾಯ್ಕ ಬೇಡ್ಕಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಮುಖಂಡ ಸುರೇಶ್ ತೆಂಗಿನಮನೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವಿದ್ಯಾ ಪ್ರಕಾಶ ನಾಯ್ಕ ಸೇರಿದಂತೆ ಗ್ರೀನ್ಕಾರ್ಡ್ನ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.