ಕಾರವಾರ: ನೈಸರ್ಗಿಕ ವಿಕೋಪಗಳು ಯಾವಾಗ ಮತ್ತು ಹೇಗೆ ಸಂಭವಿಸುತ್ತವೆ ಎಂದು ಊಹಿಸಲು ಸಾಧ್ಯವಿಲ್ಲ. ಪ್ರಕೃತಿ ವಿಕೋಪ ನೆಡೆದ ಸಂದರ್ಭದಲ್ಲಿ ಸಂತ್ರಸ್ತರ, ಸಾರ್ವಜನಿಕರ ನೋವಿಗೆ ತಕ್ಷಣ ಸ್ಪಂದಿಸಿ, ಅವರಿಗೆ ನೆಮ್ಮದಿಯ ಜೀವನ ಕಲ್ಪಿಸುವುದು ಸರ್ಕಾರದ ಪ್ರಥಮಾದ್ಯತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಕೃತಿ ವಿಕೋಪದ ನಿರ್ವಹಣೆ ಪೂರ್ವ ತಯಾರಿ ಮತ್ತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭ ಎದುರಾದಾಗ ಎಲ್ಲಾ ಹಂತದ ಅಧಿಕಾರಿ ಸಿಬ್ಬಂದಿಗಳು ಒಂದು ಕುಟುಂಬದಂತೆ ಒಗ್ಗೂಡಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಯಾವುದೇ ಕ್ಷಣದಲ್ಲಿ ಸಾರ್ವಜನಿಕರಿಂದ ತುರ್ತು ಕರೆಗಳು ಬರಬಹುದು. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು 24 ಗಂಟೆಯೂ ಜಾಗರೂಕರಾಗಿ ಅವರ ಸಂಕಷ್ಟಗಳಿಗೆ ಸ್ಪಂದಿಸುವಂತಾಗಬೇಕು ಎಂದರು.
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತಕ್ಷಣದ ಸ್ಪಂದನೆಗಾಗಿ ಜಿಲ್ಲಾಧಿಕಾರಿ ಪಿ.ಡಿ ಖಾತೆಯಲ್ಲಿ ರೂ.61 ಕೋಟಿ ಇದೆ. ಆಯಾ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ಪ್ರವಾಹ ಅಥವಾ ಮಳೆಯಿಂದ ಮನೆಗಳಿಗೆ ಹಾನಿಯಾದ ತಕ್ಷಣ ಸ್ಥಳದಲ್ಲೇ ಪರಿಶೀಲಿಸಿ, ತಕ್ಷಣದ ಖರ್ಚಿಗೆ ನಿಯಮಾನುಸಾರ ತಾತ್ಕಾಲಿಕ ಪರಿಹಾರವನ್ನು ಶೀಘ್ರವಾಗಿ ವಿತರಿಸಬೇಕು. ಪರಿಹಾರ ವಿತರಿಸಲು ವಿಳಂಬ ಮಾಡಿದಲ್ಲಿ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುರುತಿಸಿರುವ ಅಪಾಯಕಾರಿ ಸ್ಥಳಗಳಲ್ಲಿ ಭೂಕುಸಿತವಾಗದಂತೆ ರಕ್ಷಣಾ ತಡೆಗೊಡೆ ನಿರ್ಮಿಸಬೇಕು ಇಲ್ಲವಾದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‌ಬಿ ಕಂಪನಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಒಳಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ತೀವ್ರ ಆಕ್ಷೇಕ ವ್ಯಕ್ತಪಡಿಸಿದ ಅವರು, ದೇವಸ್ಥಾನದ ಒಳಗೆ ನೀರು ಸೇರದಂತೆ ಶಾಶ್ವತ ಪರಿಹಾರ ಒದಗಿಸಲು ಖಾಸಗಿ ತಜ್ಞರಿಂದ ಸ್ಥಳ ಪರೀಶಿಲಿಸಿ ಅವರ ಸಲಹೆ ಪಡೆದು ಶಾಶ್ವತ ಪರಿಹಾರ ಕೈಗೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಜಿಲ್ಲೆಯಲಿ ಪ್ರಕೃತಿ ವಿಕೋಪದಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿ ಕಚೇರಿ, ಎಸ್.ಪಿ ಕಚೇರಿ ಹಾಗೂ ಎಲ್ಲಾ ತಾಲೂಕುಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ.
ಅಗತ್ಯ ಮನ್ನೆಚ್ಚರಿಕೆಯ ಕ್ರಮವಾಗಿ 294 ಕಾಳಜಿ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಮನವ ಜೀವಹಾನಿಯಾಗಿಲ್ಲ. 2 ಮನೆ ಸಂಪೂರ್ಣ ಹಾನಿಗೊಳಗಾಗಿದ್ದು, 34 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಈ ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗಿದೆ ಎಂದರು.
ಸಭೆಯಲ್ಲಿ ಕೆ.ಎಸ್.ಎಂ.ಸಿ.ಎ ಅಧ್ಯಕ್ಷ ಹಾಗೂ ಶಾಸಕ ಸತೀಶ ಕೆ. ಸೈಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಶಾಸಕರಾದ ಶಿವರಾಮ ಹೆಬ್ಬಾರ್, ಕೆ. ದಿನಕರ್ ಶೆಟ್ಟಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ಪರಿಷ್ಠಾಧಿಕಾರಿ ದೀಪನ್ ಎಂ.ಎನ್. ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಉಪ ವಿಭಾಗಾಧಿಕಾರಿ ಶ್ರವಣ್ ಕುಮಾರ ಹಾಗೂ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಉಪಸ್ಥಿತರಿದ್ದರು.