Friday, July 24, 2026
Join WhatsApp Group
HomeLocal Storyಇಲ್ಲಿ ಸತ್ತರೂ ನೆಮ್ಮದಿಯಿಲ್ಲ!

ಇಲ್ಲಿ ಸತ್ತರೂ ನೆಮ್ಮದಿಯಿಲ್ಲ!

7 ದಶಕ ಕಳೆದರೂ ರಸ್ತೆ ಇಲ್ಲ; ಮಳೆ ಬಂದರೆ ಜೀವ ಕೈಯಲ್ಲಿ ಹಿಡಿದು ಸಂಚಾರ!

ಹೊನ್ನಾವರ: ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ, ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಿತ್ತಲಕೇರಿ ನಿವಾಸಿಗಳ ಬದುಕು ಇಂದಿಗೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಸಾರ್ವಜನಿಕ ರಸ್ತೆ ಮತ್ತು ಶಾಶ್ವತ ಕಾಲುಸಂಕದ ಕೊರತೆಯಿಂದ ಮಳೆಗಾಲದಲ್ಲಿ ತುಂಬಿ ನಿಂತ ನೀರಿನಲ್ಲಿಯೇ ನಡೆದು ಮನೆ ತಲುಪಬೇಕಾದ ದುಸ್ಥಿತಿ ಇಲ್ಲಿನ ಜನರದ್ದು.

ಸುಮಾರು 50ಕ್ಕೂ ಹೆಚ್ಚು ಮನೆಗಳು ಹಾಗೂ 150ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಮಜರೆಯ ನಿವಾಸಿಗಳು ತಮ್ಮ ಮನೆ ತಲುಪಲು ಇಂದಿಗೂ ಖಾಸಗಿ ಜಮೀನುಗಳ ಮೂಲಕವೇ ಸಂಚರಿಸಬೇಕಾಗಿದೆ. ಮಳೆಗಾಲದಲ್ಲಿ ಸಿದ್ದಾಪುರ ಭಾಗದಲ್ಲಿ ಮಳೆಯಾದರೆ ಭಾಸ್ಕೇರಿ ಹೊಳೆ ಉಕ್ಕಿ ಹರಿದು ತೋಟಗಳೆಲ್ಲ ಜಲಾವೃತವಾಗುತ್ತವೆ. ಆಗ ಹೊರ ಜಗತ್ತಿನ ಸಂಪರ್ಕವೇ ಸಂಪೂರ್ಣ ಕಡಿದುಹೋಗಿ, ದ್ವೀಪ ದರ್ಶನವಅಗುತ್ತದೆ.

ಮಕ್ಕಳು ಶಾಲೆಗೆ ಹೋಗಲು, ಮಹಿಳೆಯರು ಮತ್ತು ಪುರುಷರು ಉದ್ಯೋಗಕ್ಕೆ ತೆರಳಲು, ಅನಾರೋಗ್ಯದ ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗಲು ಜೀವ ಕೈಯಲ್ಲಿ ಹಿಡಿದು ನೀರು ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮನೆಗಳಿಗೆ ನೀರು ನುಗ್ಗಿದರೆ ಕಾಳಜಿ ಕೇಂದ್ರಗಳೇ ಆಶ್ರಯವಾಗುತ್ತವೆ.

ದಶಕಗಳಿಂದ ರಸ್ತೆ ಮತ್ತು ಕಾಲುಸಂಕ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದರೂ, ಭೂ ವಿವಾದದ ನೆಪವೊಡ್ಡಿ ಕಾಮಗಾರಿ ಮುಂದೂಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇತ್ತೀಚೆಗೆ ಸುರಿದ ಭಾರೀ ಮಳೆಯ ವೇಳೆ ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟಾಗ, ಕುತ್ತಿಗೆ ಮಟ್ಟದ ನೀರಿನಲ್ಲಿ ಶವಪೆಟ್ಟಿಗೆಯನ್ನು ಹೊತ್ತು ಅಂತ್ಯಕ್ರಿಯೆಗೆ ಕೊಂಡೊಯ್ಯಬೇಕಾದ ದೃಶ್ಯ ಸ್ಥಳೀಯರ ನೋವನ್ನು ಮತ್ತೊಮ್ಮೆ ಬಯಲಿಗೆಳೆದಿದೆ.

ಒಂದೇ ಮಾರ್ಗದಲ್ಲಿ ಹಲವು ವರ್ಷಗಳಿಂದ ಸಾರ್ವಜನಿಕರು ಸಂಚರಿಸುತ್ತಿದ್ದರೆ ಅದು ಸಾರ್ವಜನಿಕ ಹಕ್ಕಿನ ಮಾರ್ಗವಾಗುತ್ತದೆ ಎಂಬ ಕಾನೂನು ತತ್ವವನ್ನು ಉಲ್ಲೇಖಿಸಿರುವ ಗ್ರಾಮಸ್ಥರು, ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿ ಫುಟ್‌ಪಾತ್ ಕೂಡ ಮೂಲಭೂತ ಹಕ್ಕಿನ ಭಾಗ ಎಂದು ಹೇಳಿರುವುದನ್ನು ಗಮನಕ್ಕೆ ತಂದು, ತಮ್ಮ ಗ್ರಾಮಕ್ಕೂ ಕನಿಷ್ಠ ಕಾಲುದಾರಿ ಮತ್ತು ಶಾಶ್ವತ ಕಾಲುಸಂಕ ನಿರ್ಮಿಸಿಕೊಡುವಂತೆ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಅಂಗಲಾಚಿದ್ದಾರೆ.

ʻನಮಗೆ ಐಷಾರಾಮಿ ರಸ್ತೆ ಬೇಡ, ಜೀವ ಉಳಿಸುವ ಕಾಲುದಾರಿ ಮತ್ತು ಒಂದು ಸಂಕ ನಿರ್ಮಿಸಿಕೊಡಿ ಸಾಕುʼ ಎಂಬುದು ದೊಡ್ಡಹಿತ್ತಲಕೇರಿ ನಿವಾಸಿಗಳ ಮನಕಲಕುವ ಒಕ್ಕೊರಲಿನ ಮನವಿ. ಆಡಳಿತ ಈ ಮನವಿಗೆ ಸ್ಪಂದಿಸಲು ಇನ್ನೆಷ್ಟು ಕಾಲ ಬೇಕು ಎಂಬುದು ಮಾತ್ರ ಪ್ರಶ್ನೆಯೇ ಆಗಿ ಉಳಿದಿದೆ.

onnavar-doddahittalkeri-road-problem

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share