ಯಲ್ಲಾಪುರ: ಟಿಎಂಎಸ್ ಚುನಾವಣೆಯ ಫಲಿತಾಂಶ ಸತ್ಯಕ್ಕೆ ಸಂದ ಜಯವಾಗಿದೆ. ಅಧರ್ಮದ ವಿರುದ್ಧ ಧರ್ಮಕ್ಕೆ, ಅಸತ್ಯದ ವಿರುದ್ಧ ಸತ್ಯಕ್ಕೆ ಸಂದ ಜಯವಾಗಿದೆ ಎಂದು ಟಿಎಂಎಸ್ ಸಂಸ್ಥೆಯ ನಿರ್ದೇಶಕ ವೆಂಕಟ್ರಮಣ ಭಟ್ಟ ಕಿರಕುಂಭತ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರಂತಹ ಪ್ರಾಮಾಣಿಕ ವ್ಯಕ್ತಿಯ ವರ್ಷಗಳ ರೈತರ ಪರವಾದ ಆಡಳಿತಕ್ಕೆ ಜನರು ಮತ್ತೊಮ್ಮೆ ಆಶೀರ್ವಾದ ಮಾಡಿದ್ದಾರೆ. ತಾವೇ ಕಾನೂನು ಪಂಡಿತರೆಂದು ಹೇಳಿಕೊಳ್ಳುವ ವ್ಯಕ್ತಿಗಳ ದಾರಿತಪ್ಪಿಸುವ ಸಲಹೆ, ನಿರ್ಧಾರಗಳಿಂದ ತಾಲೂಕಿನ ರೈತರು 9 ತಿಂಗಳುಗಳ ಕಾಲ ಸಂಕಷ್ಟ ಅನುಭವಿಸುವಂತಾಯಿತು.
ಸರ್ಕಾರದ, ಅಧಿಕಾರಿಗಳ ವಶೀಲಿಯಿಂದ ʻಸಹಕಾರ ರತ್ನ ಪ್ರಶಸ್ತಿʼ ಬರುವ ಇಂದಿನ ದಿನಗಳಲ್ಲಿ ತಾಲೂಕಿನ ರೈತರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಶೀರ್ವದಿಸುವ ಮೂಲಕ ನಿಜವಾದ ʻಸಹಕಾರಿ ಅನರ್ಘ್ಯ ರತ್ನʼ ಪ್ರಶಸ್ತಿಯನ್ನು ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿಯವರಿಗೆ ನೀಡಿದ್ದಾರೆ.
ತಾವು ಏನು ಮಾಡಿದರೂ ನಡೆಯುತ್ತದೆ ಎನ್ನುವ ಜನರಿಗೆ ಇನ್ನು ಮುಂದೆ ನಿಮ್ಮ ಇಂತಹ ಆಟ ನಡೆಯುವುದಿಲ್ಲ ಎನ್ನುವ ಎಚ್ಚರಿಕೆಯನ್ನೂ ತಾಲೂಕಿನ ರೈತಾಪಿ ವರ್ಗ ಎಚ್ಚರಿಸಿದೆ. ಅಂತಿಮವಾಗಿ, ನಾರಾಯಣ ಭಟ್ಟ ಅವರ ತಂಡದಿಂದ ಆಯ್ಕೆಯಾದ ಎಲ್ಲ ನಿರ್ದೇಶಕರ ಪರವಾಗಿ ಟಿಎಂಎಸ್‌ನ ಎಲ್ಲ ಸಹಕಾರಿ ಬಂಧುಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.