ಯಲ್ಲಾಪುರ: ಧರ್ಮಸ್ಥಳ ಹಾಗೂ ಚಿಕ್ಕಮಗಳೂರು ಪ್ರವಾಸಕ್ಕೆ ತೆರಳುತ್ತಿದ್ದ ಧಾರವಾಡ ಮೂಲದ ಸ್ನೇಹಿತರ ತಂಡದ ಕ್ರೂಸರ್ ವಾಹನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ ಐವರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಲ್ಲಾಪುರ ತಾಲೂಕಿನ ಆರತಿಬೈಲ ಬಳಗಾರ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ–52ರಲ್ಲಿ ನಡೆದಿದೆ.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜುಲೈ 9ರಂದು ಮುಂಜಾನೆ ಸುಮಾರು 1.30ರ ವೇಳೆಗೆ ಕೆಎ-19/ಎಎ-5920 ಸಂಖ್ಯೆಯ ಕ್ರೂಸರ್ ವಾಹನದಲ್ಲಿ ಧರ್ಮಸ್ಥಳ ಮತ್ತು ಚಿಕ್ಕಮಗಳೂರು ಪ್ರವಾಸಕ್ಕೆ ತೆರಳುತ್ತಿದ್ದ ತಂಡ ಅಂಕೋಲಾ ಕಡೆಗೆ ಸಾಗುತ್ತಿತ್ತು.
ವಾಹನವನ್ನು ಚಾಲನೆ ಮಾಡುತ್ತಿದ್ದ ಸಂಜೀವ್ ಮೈಲಾರ ಅಂಗಡಿ (33), ಕುರುಬಗಟ್ಟಿ, ಧಾರವಾಡ ಅವರು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ, ಎದುರಿನಿಂದ ಬರುತ್ತಿದ್ದ ಕೆಎ-22/ಎಎ-1008 ಸಂಖ್ಯೆಯ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಅಪಘಾತದಲ್ಲಿ ಚಾಲಕ ಸಂಜೀವ್ ಸೇರಿದಂತೆ ಅಕ್ಷಯ ತೇಜಪ್ಪ ಮುರಳವರ, ಅಭಿಷೇಕ ಈಶ್ವರ, ಅಭಿಷೇಕ ಮಲ್ಲೇಶ ಮಡಬಾವಿ ಹಾಗೂ ಬಸಪ್ಪ ದೇವಪ್ಪ ಕನಕನವರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಘಟನೆಯಲ್ಲಿ ಶಿವರಾಜ ಗುರಪ್ಪ ಮಡಿವಾಳರ, ಸಚಿನ್, ಚನ್ನಬಸು ಸಂಪಗಾಂವಿಮಠ ಹಾಗೂ ಮಂಜುನಾಥ ಚುಳಕಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳು ಶಿವರಾಜ ಮಡಿವಾಳರ ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಡಿಸಿ ಕೆ. ಲಕ್ಷ್ಮೀಪ್ರಿಯಾ, ಜೀ.ಪಂ ಸಿಇಒ ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ, ಮುಂಡಗೋಡ ವೃತ್ತ ನಿರೀಕ್ಷಕ ರಮೇಶ್ ಹಾನಾಪುರ ಹಾಗೂ ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ದಪ್ಪ ಗುಡಿ, ರಾಜಶೇಖರ ವಂದಲಿ ಮತ್ತು ಮಹಾವೀರ ಕಾಂಬ್ಳೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
(ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿ ಆಧರಿಸಿದ ವರದಿ: ಮೃತರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.)