ಯಲ್ಲಾಪುರ: ಧಾರವಾಡದಿಂದ ಉತ್ತರ ಕನ್ನಡದ ಸೊಬಗನ್ನು ಸವಿಯಲು ಹೊರಟಿದ್ದ ಒಂಬತ್ತು ಮಂದಿ ಸ್ನೇಹಿತರ ತಂಡ. ಗೋಕರ್ಣದ ಕಡಲ ತೀರ, ಮುರುಡೇಶ್ವರದ ದರ್ಶನ ಮುಗಿಸಿ, ಮುಂದಿನ ತಾಣ ಧರ್ಮಸ್ಥಳ ಮತ್ತು ಚಿಕ್ಕಮಗಳೂರು ಕಡೆ ಹೊರಡಬೇಕಿತ್ತು. ನಗುವಿನ ನಡುವೆ ಸಾಗುತ್ತಿದ್ದ ಆ ಪ್ರಯಾಣವನ್ನು ಯಲ್ಲಾಪುರದ ಆರತಿಬೈಲ್ ಘಟ್ಟದಲ್ಲಿ ವಿಧಿ ಕ್ರೂರವಾಗಿ ತಡೆದಿತ್ತು.
ಎದುರಿನಿಂದ ಬಂದ ಲಾರಿಗೆ ತೂಪಾನ್ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬದುಕಿಗಾಗಿ ಹೋರಾಡುತ್ತಿದ್ದ ಮತ್ತೊಬ್ಬ ಗಾಯಾಳು ಕೂಡ ಇದೀಗ ಆ ಹೋರಾಟದಲ್ಲಿ ಸೋತಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಸಚಿನ್ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದು, ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಅಪಘಾತದಲ್ಲಿ ವಾಹನ ಚಾಲಕ ಸಂಜಯ್ ಅಂಗಡಿ, ಅಭಿಷೇಕ ಈಶ್ವರ, ಅಭಿಷೇಕ ಮಡಬಾವಿ, ಬಸವರಾಜ, ಅಕ್ಷಯ್ ಹಾಗೂ ಮಂಜುನಾಥ ಸ್ಥಳದಲ್ಲೇ ಮೃತಪಟ್ಟಿದ್ದರು.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಪಾರ್ಥಿವ ಶರೀರಗಳಿಗೆ ಅಂತಿಮ ನಮನ ಸಲ್ಲಿಸಿದರು. ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಅವರು, ಈ ದುರಂತದಿಂದ ಉಂಟಾದ ನೋವಿನಲ್ಲಿ ತಾವೂ ಭಾಗಿಯಾಗಿರುವುದಾಗಿ ತಿಳಿಸಿದರು.
ಖುಷಿಯ ಕ್ಷಣಗಳನ್ನು ನೆನಪುಗಳನ್ನಾಗಿಸಿಕೊಳ್ಳಲು ಆರಂಭವಾದ ಈ ಪ್ರವಾಸ, ಕೆಲವೇ ಕ್ಷಣಗಳಲ್ಲಿ ಏಳು ಜೀವಗಳನ್ನು ಬಲಿ ಪಡೆದ ದುರಂತವಾಗಿ ಮಾರ್ಪಟ್ಟಿದ್ದು, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶೋಕದ ವಾತಾವರಣ ಮೂಡಿಸಿದೆ.