ಬೆಂಗಳೂರು: ವನ್ಯಜೀವಿಗಳಿಗೆ ಸಂಬಂಧಿಸಿದ ಮಾಹಿತಿ, ವಿಡಿಯೋ ಹಾಗೂ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದು ಮತ್ತು ಮಾಧ್ಯಮಗಳಿಗೆ ಸಂದರ್ಶನ ನೀಡುವ ಬಗ್ಗೆ ಅರಣ್ಯ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ.
ಇನ್ನು ಮುಂದೆ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಪೂರ್ವಾನುಮತಿ ಪಡೆಯದೆ ಇಂತಹ ಮಾಹಿತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವಂತಿಲ್ಲ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಇತ್ತೀಚಿನ ದಿನಗಳಲ್ಲಿ ಆನೆ, ಹುಲಿ, ಚಿರತೆ ಸೇರಿದಂತೆ ವನ್ಯಪ್ರಾಣಿಗಳ ಸೆರೆ ಕಾರ್ಯಾಚರಣೆ, ಜೀವನಶೈಲಿ ಹಾಗೂ ಇತರೆ ಸೂಕ್ಷ್ಮ ಮಾಹಿತಿಗಳನ್ನು ಕೆಲ ಸಿಬ್ಬಂದಿ ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಸಾಮಾಜಿಕ ಜಾಲತಾಣಗಳು ಮತ್ತು ಸಂವಹನ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಸುತ್ತೋಲೆಯ ಪ್ರಕಾರ, ಕರ್ತವ್ಯದ ವೇಳೆ ಸಿಬ್ಬಂದಿಗೆ ಲಭ್ಯವಾಗುವ ವನ್ಯಜೀವಿ ರಕ್ಷಣಾ ಕಾರ್ಯಾಚರಣೆಗಳ ಮಾಹಿತಿ, ಹುಲಿ ಹಾಗೂ ಆನೆಗಳ ಸ್ಥಳ ಮಾಹಿತಿ (ಲೊಕೇಷನ್ ಡೇಟಾ), ಕ್ಯಾಮೆರಾ ಟ್ರ್ಯಾಪ್ ಚಿತ್ರಗಳು, ವನ್ಯಪ್ರಾಣಿ ಸೆರೆ ಕಾರ್ಯಾಚರಣೆಗಳ ವಿಡಿಯೋಗಳು ಹಾಗೂ ಇಲಾಖೆಯ ಆನೆ ಶಿಬಿರಗಳಿಗೆ ಸಂಬಂಧಿಸಿದ ಚಿತ್ರ-ವಿಡಿಯೋಗಳನ್ನು ಅನುಮತಿಯಿಲ್ಲದೆ ಪ್ರಕಟಿಸುವುದು ಸೇವಾ ನಿಯಮ ಉಲ್ಲಂಘನೆ (Misconduct) ಎಂದು ಪರಿಗಣಿಸಲಾಗುತ್ತದೆ.
ಅದರಲ್ಲೂ ವೈಯಕ್ತಿಕ ಪ್ರಸಿದ್ಧಿಗಾಗಿ ಯೂಟ್ಯೂಬ್ ಚಾನೆಲ್, ಇನ್‌ಸ್ಟಾಗ್ರಾಂ ರೀಲ್ಸ್ ಅಥವಾ ಇತರೆ ಡಿಜಿಟಲ್ ವೇದಿಕೆಗಳಲ್ಲಿ ಇಲಾಖೆಯ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವನ್ಯಜೀವಿ ವಿಡಿಯೋಗಳನ್ನು ಪ್ರಕಟಿಸುವುದು ಇಲಾಖೆಯ ಗೌರವ, ಭದ್ರತೆ ಹಾಗೂ ಸೂಕ್ಷ್ಮ ಮಾಹಿತಿಯ ರಕ್ಷಣೆಗೆ ವಿರುದ್ಧವಾಗಿದ್ದು, ಅಂತಹ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ.
ಇನ್ನು ಮುಂದೆ ಅರಣ್ಯ ಹಾಗೂ ವನ್ಯಜೀವಿ ವಿಭಾಗದ ಸಿಬ್ಬಂದಿ ಅಥವಾ ಅಧಿಕಾರಿಗಳು ವನ್ಯಪ್ರಾಣಿಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ, ವಿಡಿಯೋ ಅಥವಾ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಲಿ, ಮಾಧ್ಯಮಗಳಿಗೆ ಸಂದರ್ಶನ ನೀಡುವುದಾಗಲಿ ಮಾಡುವ ಮುನ್ನ ಸಂಬಂಧಪಟ್ಟ ಕಾರ್ಯಕ್ಷೇತ್ರದ ಉಪ ಅರಣ್ಯ ಸಂರಕ್ಷಣಾಧಿಕಾರಿಯ (ಡಿಸಿಎಫ್) ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.