Friday, July 24, 2026
Join WhatsApp Group
HomeLocal Storyಜಿಐ ಟ್ಯಾಗ್ ನಿರೀಕ್ಷೆಯಲ್ಲಿ ಜಿಲ್ಲೆಯ ಎರಡು ಅನನ್ಯ ಉತ್ಪನ್ನಗಳು

ಜಿಐ ಟ್ಯಾಗ್ ನಿರೀಕ್ಷೆಯಲ್ಲಿ ಜಿಲ್ಲೆಯ ಎರಡು ಅನನ್ಯ ಉತ್ಪನ್ನಗಳು

 ಸಾಣೆಕಟ್ಟಾ ಉಪ್ಪು, ಜೋಯಿಡಾದ ಕುಂಬಿ ಮುಡ್ಲಿಗೆ ರಾಷ್ಟ್ರೀಯ ಮನ್ನಣೆ ಸಿಗುವ ಸಾಧ್ಯತೆ

ಕಾರವಾರ: ಉತ್ತರ ಕನ್ನಡದ ಮಣ್ಣಿನ ಸೊಗಡು, ಪರಂಪರೆ ಮತ್ತು ಪ್ರಕೃತಿಯೊಡನೆ ಬೆಸೆದುಕೊಂಡಿರುವ ಎರಡು ಅಪರೂಪದ ಉತ್ಪನ್ನಗಳು ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ದೊಡ್ಡ ಹೆಜ್ಜೆ ಇಡಲು ಸಜ್ಜಾಗಿವೆ.

ಈಗಾಗಲೇ ಕರಿ ಇಶಾಡ್ ಮಾವುಗೆ ಜಿಐ (Geographical Indication) ಟ್ಯಾಗ್ ದೊರಕಿಸಲು ನೆರವಾಗಿದ್ದ ನಬಾರ್ಡ್, ಇದೀಗ ಜಿಲ್ಲೆಯ ಕುಮಟಾ ತಾಲೂಕಿನ ಸಾಣೆಕಟ್ಟಾ ಉಪ್ಪು ಹಾಗೂ ಜೋಯಿಡಾ ತಾಲೂಕಿನ ಕುಂಬಿ ಮುಡ್ಲಿ (ಟ್ಯಾರೋ ಗೆಡ್ಡೆ)ಗೆ ಜಿಐ ಟ್ಯಾಗ್ ದೊರಕಿಸುವ ಪ್ರಕ್ರಿಯೆಗೆ ಮುಂದಾಗಿದೆ. ಉತ್ತರ ಕನ್ನಡ ಜಿಲ್ಲಾ ಅಭಿವೃದ್ಧಿ ಯೋಜನೆಯಲ್ಲಿ ಈ ಎರಡೂ ಉತ್ಪನ್ನಗಳಿಗೆ ಜಿಐ ನೋಂದಣಿ ನೆರವು ಮಂಜೂರು ಮಾಡಿರುವುದಾಗಿ ನಬಾರ್ಡ್ ಉಲ್ಲೇಖಿಸಿದೆ.

ಸಾಣೆಕಟ್ಟಾ ಎಂದರೆ ಉಪ್ಪಿನ ಸುವಾಸನೆ ಬೆರೆತ ಊರು. ಕುಮಟಾ ತಾಲೂಕಿನ ಕರಾವಳಿ ಭಾಗದಲ್ಲಿರುವ ಈ ಪ್ರದೇಶದಲ್ಲಿ ಪೀಳಿಗೆಯಿಂದ ಪೀಳಿಗೆ ಸೂರ್ಯನ ಬಿಸಿಲಿನಲ್ಲೇ ಸಮುದ್ರದ ನೀರನ್ನು ಆವಿಯಾಗಿಸಿ ನೈಸರ್ಗಿಕವಾಗಿ ಉಪ್ಪು ಉತ್ಪಾದಿಸುವ ಸಂಪ್ರದಾಯ ಮುಂದುವರಿದಿದೆ.

ಯಾವುದೇ ಕೈಗಾರಿಕಾ ಸಂಸ್ಕರಣೆಯಿಲ್ಲದೆ, ಸಾಂಪ್ರದಾಯಿಕ ಉಪ್ಪಿನ ಆಗರಗಳಲ್ಲಿ ತಯಾರಾಗುವ ಈ ಉಪ್ಪು ತನ್ನ ಸಹಜ ಖನಿಜಾಂಶ, ರುಚಿ ಮತ್ತು ಗುಣಮಟ್ಟದಿಂದ ವಿಶಿಷ್ಟ ಗುರುತನ್ನು ಪಡೆದಿದೆ. ಜಿಐ ಟ್ಯಾಗ್ ದೊರೆತರೆ ಸಾಣೆಕಟ್ಟಾ ಉಪ್ಪಿಗೆ ಪ್ರತ್ಯೇಕ ಮಾರುಕಟ್ಟೆ ಗುರುತು ಸಿಗುವುದರ ಜೊತೆಗೆ ಸ್ಥಳೀಯ ಉಪ್ಪು ಉತ್ಪಾದಕರ ಆದಾಯವೂ ಹೆಚ್ಚುವ ನಿರೀಕ್ಷೆಯಿದೆ.

ಇನ್ನೊಂದೆಡೆ, ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ ಜೋಯಿಡಾ ತಾಲೂಕಿನ ಕುಂಬಿ ಮುಡ್ಲಿ ಕುಂಬಿ ಸಮುದಾಯವು ಶತಮಾನಗಳಿಂದ ಬೆಳೆಸಿಕೊಂಡು ಬಂದಿರುವ ಸ್ಥಳೀಯ ಟ್ಯಾರೋ (ಕೆಸು/ಗೆಡ್ಡೆ) ತಳಿಯಾಗಿದೆ. ಈ ಬೆಳೆಯು ಕಡಿಮೆ ಆರೈಕೆಯಲ್ಲಿಯೇ ಬೆಳೆಯುತ್ತದೆ, ಹವಾಮಾನ ವೈಪರೀತ್ಯ ಹಾಗೂ ಬರಗಾಲದಂತಹ ಪರಿಸ್ಥಿತಿಗಳನ್ನೂ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಮಳೆಗಾಲ ಆರಂಭಕ್ಕೂ ಮುನ್ನ ನೆಟ್ಟು, ದೀಪಾವಳಿ ವೇಳೆಗೆ ಕೊಯ್ಲು ಮಾಡುವ ಈ ಗೆಡ್ಡೆ ಸ್ಥಳೀಯ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಸಾಂಬಾರ್, ಪಲ್ಯ ಸೇರಿದಂತೆ ವಿವಿಧ ಖಾದ್ಯಗಳಲ್ಲಿ ಬಳಸಲಾಗುವುದರ ಜೊತೆಗೆ, ಅದರ ಪೌಷ್ಟಿಕಾಂಶ ಮತ್ತು ಸ್ಥಳೀಯ ಜೈವಿಕ ವೈವಿಧ್ಯತೆಯ ಕಾರಣದಿಂದ ವಿಜ್ಞಾನಿಗಳ ಗಮನವನ್ನೂ ಸೆಳೆದಿದೆ. ಇದೇ ಕಾರಣಕ್ಕೆ ಈ ವಿಶಿಷ್ಟ ತಳಿಗೆ ಜಿಐ ಮಾನ್ಯತೆ ನೀಡುವ ಪ್ರಯತ್ನಗಳು ಹಲವು ವರ್ಷಗಳಿಂದ ನಡೆಯುತ್ತಿವೆ.

ಪ್ರಸ್ತುತ ಭಾರತದಲ್ಲಿ 822 ಜಿಐ ನೋಂದಾಯಿತ ಉತ್ಪನ್ನಗಳಿದ್ದು, ಅವುಗಳಲ್ಲಿ ಕರ್ನಾಟಕದ 51 ಉತ್ಪನ್ನಗಳಿವೆ. ಈಗ ಸಾಣೆಕಟ್ಟಾ ಉಪ್ಪು ಮತ್ತು ಕುಂಬಿ ಮುಡ್ಲಿ ಸೇರಿದಂತೆ ರಾಜ್ಯದ ನಾಲ್ಕು ಹೊಸ ಉತ್ಪನ್ನಗಳಿಗೆ ಜಿಐ ಟ್ಯಾಗ್ ದೊರೆತರೆ ಕರ್ನಾಟಕದ ಪಾಲು ಮತ್ತಷ್ಟು ಹೆಚ್ಚಾಗಲಿದೆ. ಉತ್ತರ ಕನ್ನಡದ ಎರಡು ಅಪರೂಪದ ಉತ್ಪನ್ನಗಳು ದೇಶದ ಜಿಐ ನಕ್ಷೆಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಜಿಲ್ಲೆಯ ಜನರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share