>>ಕೆನರಾ ನೆಕ್ಸ್ಟ್ ನ್ಯೂಸ್ ಡೆಸ್ಕ್
ಕಾರವಾರ: ʻಅಣಾ, ಇವತ್ತು ಯಾವ ನಂಬರ್?ʼ ಚಹಾ ಅಂಗಡಿಯ ಪಕ್ಕದಲ್ಲೋ, ರಸ್ತೆ ಬದಿಯ ಗೂಡಂಗಡಿಯಲ್ಲೋ, ಗಿಜಿಗುಟ್ಟುವ ಸಂತೆ ಮಾರ್ಕೆಟ್ ನಡುವೆಯೆಲ್ಲೋ ಮೆಲ್ಲಗೆ ಕೇಳಿಬರುವ ಈ ಮಾತು ನಮ್ಮ ಜಿಲ್ಲೆಯ ಹಲವು ಊರುಗಳಿಗೆ ಹೊಸದೇನಲ್ಲ.ಚೀಟಿ, ಬಾಲ್ಪೆನ್, ಜೇಬಿನಲ್ಲಿರುವ ನೂರು ರೂಪಾಯಿ… ಇಷ್ಟೇ ಸಾಕು!
ಆದರೆ ನಾವು ಊರಿನ ಯಾವುದೋ ಮೂಲೆಯಲ್ಲಿ ನೋಡುತ್ತಿರುವ ಈ ಸಣ್ಣ ಆಟದ ಬೇರುಗಳು ಅಷ್ಟೇ ಸಣ್ಣದಲ್ಲ. ಮಟ್ಕಾ ಎಂಬ ಹೆಸರಿನ ಈ ಜೂಜಿನ ಕಥೆ ನೇರವಾಗಿ ಮುಂಬೈನ ಹಳೆಯ ಬೀದಿಗಳವರೆಗೆ ಹೋಗುತ್ತದೆ. 1960ರ ದಶಕದಲ್ಲಿ ಮುಂಬೈಯಲ್ಲಿ ನ್ಯೂಯಾರ್ಕ್ ಕಾಟನ್ ಎಕ್ಸ್ಚೇಂಜ್ನಿಂದ ಬರುತ್ತಿದ್ದ ಹತ್ತಿ ಬೆಲೆಗಳ ಆರಂಭಿಕ ಮತ್ತು ಅಂತಿಮ ದರಗಳ ಮೇಲೆ ಪಣ ಕಟ್ಟುವ ಪದ್ಧತಿ ಇತ್ತು.
1961ರಲ್ಲಿ ಆ ಮಾಹಿತಿ ಪ್ರಸಾರ ನಿಂತಾಗ ಆಟವೇ ಮುಗಿದುಹೋಯಿತು ಎಂದುಕೊಳ್ಳುವಷ್ಟರಲ್ಲಿ, ಅದಕ್ಕೆ ಹೊಸ ರೂಪ ಕೊಟ್ಟು ಮುಂದುವರಿಸಿದವರೇ ಕಳ್ಯಾಣ್ಜಿ ಭಗತ್ ಮತ್ತು ರತನ್ ಖತ್ರಿ. ಕಳ್ಯಾಣ್ಜಿ ಭಗತ್ 1962ರಲ್ಲಿ ವರ್ಲಿ ಮಟ್ಕಾ ಆರಂಭಿಸಿದ. ನಂತರ ರತನ್ ಖತ್ರಿ ಬೇರೆ ವಿಧಾನದಲ್ಲಿ ಸಂಖ್ಯೆಗಳನ್ನು ಹೊರತೆಗೆಯುವ ವ್ಯವಸ್ಥೆ ರೂಪಿಸಿ ಅದನ್ನು ಇನ್ನಷ್ಟು ದೊಡ್ಡ ಜಾಲವನ್ನಾಗಿ ಮಾಡಿದ. ಮಣ್ಣಿನ ಮಡಕೆಯಲ್ಲಿ ಚೀಟಿಗಳನ್ನು ಹಾಕಿ ಸಂಖ್ಯೆ ತೆಗೆಯುತ್ತಿದ್ದ ವಿಧಾನದಿಂದಲೇ ‘ಮಟ್ಕಾ’ ಎಂಬ ಹೆಸರು ಗಟ್ಟಿಯಾಯಿತು. ಒಂದು ಕಾಲದಲ್ಲಿ ಮುಂಬೈನ ಗಿರಣಿ ಕಾರ್ಮಿಕರಿಂದ ಹಿಡಿದು ದೊಡ್ಡ ವ್ಯಾಪಾರಿಗಳವರೆಗೆ ಈ ಆಟದ ಗ್ರಾಹಕರಾಗಿದ್ದರು. ಬಳಿಕ ಅದು ಮುಂಬೈಯ ಗಡಿಯನ್ನು ದಾಟಿ ದೇಶದ ಬೇರೆ ಭಾಗಗಳಿಗೂ ಹರಡಿತು.
ಅಂದರೆ, ಉತ್ತರ ಕನ್ನಡದ ಯಾವುದೋ ಊರಿನ ರಸ್ತೆ ಬದಿಯಲ್ಲಿ ಇಂದು ನಡೆಯುತ್ತಿರುವ ಆಟ ಇತ್ತೀಚೆಗೆ ಹುಟ್ಟಿದ್ದಲ್ಲ. ಕಾಲ ಬದಲಾದಂತೆ ಅದರ ವಿಧಾನ ಬದಲಾಗಿದೆ, ಆದರೆ ಆಸೆ ಮಾತ್ರ ಅದೇ ಇದೆ! ಕಡಿಮೆ ಹಣ ಹಾಕಿ ದೊಡ್ಡ ಹಣ ಗೆಲ್ಲಬೇಕು. ಹಿಂದೆ ಮಡಕೆಯಲ್ಲಿ ಚೀಟಿ ಇತ್ತು. ಈಗ ಮೊಬೈಲ್ ಇದೆ. ಹಿಂದೆ ನಂಬರ್ ಬಾಯಿಮಾತಿನಲ್ಲಿ ಹರಡುತ್ತಿತ್ತು. ಈಗ ವಾಟ್ಸಪ್ ಸೇರಿದಂತೆ ವಿವಿಧ ಡಿಜಿಟಲ್ ಮಾರ್ಗಗಳಿವೆ.
ಇದೇ ಕಾರಣಕ್ಕೆ ಉತ್ತರ ಕನ್ನಡದ ವಿವಿಧ ತಾಲೂಕುಗಳಲ್ಲಿ ಆಗಾಗ ಸಿಕ್ಕಿಬೀಳುತ್ತಿರುವ ಓಸಿ-ಮಟ್ಕಾ ಪ್ರಕರಣಗಳನ್ನು ಕೇವಲ 500, 1000 ರೂ ಸಿಕ್ಕಿತು, ಪ್ರಕರಣ ದಾಖಲಾಯಿತು ಎಂದು ಓದಿ ಮುಗಿಸುವ ಕಥೆಯೆಂದುಕೊಳ್ಳುವುದು ಸರಿಯಲ್ಲ. ಆದರೆ ಪೊಲೀಸರ ಕೈಗೆ ಸಿಗುವ ಹಣಕ್ಕಿಂತ ದೊಡ್ಡ ವಹಿವಾಟು ಈ ಆಟದ ಹಿಂದಿದೆ.
ಏಕೆಂದರೆ ಒಬ್ಬ ನಂಬರ್ ಬರೆಯುತ್ತಾನೆ. ಇನ್ನೊಬ್ಬ ಹಣ ತೆಗೆದುಕೊಳ್ಳುತ್ತಾನೆ. ಯಾರೋ ನಂಬರ್ ಕೊಡುತ್ತಾರೆ. ಫಲಿತಾಂಶ ಬರುತ್ತದೆ. ಗೆದ್ದವನಿಗೆ ಹಣ ತಲುಪುತ್ತದೆ. ಸೋತವನ ಹಣ ಎಲ್ಲಿಗೆ ಹೋಗುತ್ತದೆ? ಈ ಸರಪಳಿಯ ಕೊನೆಯ ಕೊಂಡಿ ಯಾರು? ಅದಕ್ಕಿಂತ ಮುಖ್ಯವಾಗಿ, ಜಿಲ್ಲೆಯ ಕಿಂಗ್ಪಿನ್ಗಳು ಯಾರು? ಇದೇ ತನಿಖೆಯ ನಿಜವಾದ ಪ್ರಶ್ನೆ.
ಕರ್ನಾಟಕದ ಇತ್ತೀಚಿನ ಕೆಲವು ಮಟ್ಕಾ ಪ್ರಕರಣಗಳಲ್ಲೂ ಪೊಲೀಸರು ಕೇವಲ ಆಟದ ಸ್ಥಳದಲ್ಲಿ ಸಿಕ್ಕ ವ್ಯಕ್ತಿಯ ಮಟ್ಟಿಗೆ ನಿಲ್ಲದೆ, ಹಣ ಯಾರಿಗೆ ಹಸ್ತಾಂತರವಾಗುತ್ತಿತ್ತು, ಯಾರು ನಂಬರ್ ನೀಡುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಸಿರುವ ಉದಾಹರಣೆಗಳಿವೆ. ಉಡುಪಿ ಜಿಲ್ಲೆಯ ಇತ್ತೀಚಿನ ಕಾರ್ಯಾಚರಣೆಯೊಂದರಲ್ಲಿ ಸ್ಥಳೀಯವಾಗಿ ಹಣ ಸಂಗ್ರಹಿಸುತ್ತಿದ್ದ ಆರೋಪಿಯ ವಿಚಾರಣೆಯಿಂದ ಮತ್ತೊಬ್ಬ ಬುಕ್ಕಿಯ ಹೆಸರು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿಯ ಪ್ರಕರಣಗಳಲ್ಲಿ ಮೇಲಿನ ವ್ಯಕ್ತಿಯ ಪಾತ್ರವನ್ನು ಕೇವಲ ಮತ್ತೊಬ್ಬ ಆರೋಪಿ ಹೆಸರು ಕೇಳಿಬಂದಿದೆ ಎಂಬ ಕಾರಣಕ್ಕೆ ಸಾಬೀತಾಗಿದೆ ಎಂದು ಹೇಳಲಾಗುವುದಿಲ್ಲ. ನ್ಯಾಯಾಲಯವೂ ಆರೋಪಿಯ ವಿರುದ್ಧ ಸ್ವತಂತ್ರ ಸಾಕ್ಷ್ಯ ಮತ್ತು ನಿರ್ದಿಷ್ಟ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿಹೇಳಿದೆ.
ಹಾಗಾದರೆ ಉತ್ತರ ಕನ್ನಡದಲ್ಲಿ…? ಇಲ್ಲಿ ಸಿಕ್ಕಿಬೀಳುತ್ತಿರುವವರು ಕೇವಲ ಆಟ ಆಡುವವರೇ? ಅಥವಾ ಅವರ ಹಿಂದೆ ನಂಬರ್ ಮತ್ತು ಹಣದ ವ್ಯವಸ್ಥೆ ನಡೆಸುವ ದೊಡ್ಡ ಜಾಲವಿದೆಯೇ? ಇದ್ದರೆ ಅದರ ತುದಿ ಎಲ್ಲಿದೆ? ಯಾವ ಊರಿನಿಂದ ಯಾವ ಊರಿಗೆ ಸಂಪರ್ಕ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ʻ20 ರುಪಾಯಿ ತಾನೆʼ ಎಂದು ಶುರುವಾಗುವುದೇ ಈ ಆಟದ ದೊಡ್ಡ ಬಲ. ಸೋತವನು ಇನ್ನೊಂದು ಸಲ ಹಾಕೋಣ ಎನ್ನುತ್ತ ಗೆಲ್ಲುವ ಆಸೆಯಲ್ಲಿ ಸೋತ ಹಣವನ್ನು ಬೆನ್ನಟ್ಟುತ್ತಾ ಹೋದಾಗ, ಒಂದು ದಿನ ಮನೆಯ ಖರ್ಚಿನ ಹಣವೂ ಆಟದೊಳಗೆ ಹೋಗಿರುತ್ತದೆ. ದಿನಗೂಲಿ ಮಾಡಿ ಸಂಜೆ ಮನೆಗೆ ಬರುವವನ ಜೇಬಿನಿಂದ ಜಾರುವ 50, 100 ರೂ ಯಾರಿಗೂ ದೊಡ್ಡದಾಗಿ ಕಾಣುವುದಿಲ್ಲ. ಆದರೆ ತಿಂಗಳ ಕೊನೆಯಲ್ಲಿ ಅದೇ ಹಣ ಅಕ್ಕಿ, ತರಕಾರಿ, ಮಕ್ಕಳ ಶಾಲಾ ಖರ್ಚು, ಔಷಧಿ ಯಾವುದೋ ಒಂದರ ಕೊರತೆಯಾಗಿ ಎದುರು ನಿಂತಿರುತ್ತದೆ.
ಇನ್ನೊಂದು ವಿಚಿತ್ರ ಸಂಗತಿಯೆಂದರೆ ಮಟ್ಕಾದಲ್ಲಿ ಹತ್ತು ಜನ ಸೋತ ಕಥೆ ಊರಿಗೆ ಕೇಳಿಸುವುದಿಲ್ಲ. ಒಬ್ಬ ಗೆದ್ದ ಕಥೆ ಮಾತ್ರ ಚಹಾ ಕುಡಿಯುವಷ್ಟರಲ್ಲಿ ನಾಲ್ಕು ಕಡೆ ತಲುಪುತ್ತದೆ. “ಅವನಿಗೆ ನಂಬರ್ ಬಿದ್ದು ಐದು ಸಾವಿರ ಬಂದಂತೆ” ಎಂಬ ಮಾತು ಕೇಳಿದರೆ, ಕೇಳುವವನಿಗೆ ತಾನು ನಿನ್ನೆ ಕಳೆದುಕೊಂಡ ಐನೂರು ನೆನಪಾಗುವುದಿಲ್ಲ! ಈ ಆಸೆಯ ನೆರಳು ಹಿಡಿದೇ ಇಡೀ ಜಾಲ ವರ್ಷಗಳಿಂದ ಬದುಕಿದೆ.
ಇದಕ್ಕಾಗಿಯೇ ಉತ್ತರ ಕನ್ನಡದಲ್ಲಿ ಈಗ ನಡೆಯುತ್ತಿರುವ ಪೊಲೀಸ್ ದಾಳಿಗಳು ಅಗತ್ಯ. ಆದರೆ ಕಥೆ ಅಲ್ಲಿಗೇ ಮುಗಿಯಬಾರದು. ಆ ಚೀಟಿ ಯಾರಿಂದ ಬಂತು, ಹಣ ಯಾರಿಗೆ ಹೋಗುತ್ತಿತ್ತು, ನಂಬರ್ ಯಾರು ಕೊಡುತ್ತಿದ್ದರು, ಒಂದೇ ವ್ಯಕ್ತಿ ಬೇರೆ ಬೇರೆ ಕಡೆಗಳಲ್ಲಿ ಹೇಗೆ ಸಂಪರ್ಕ ಹೊಂದಿದ್ದಾನೆ… ಇಂಥ ಪ್ರಶ್ನೆಗಳ ಉತ್ತರ ಹುಡುಕಿದಾಗ ಮಾತ್ರ ಸಣ್ಣ ಚೀಟಿಯ ಹಿಂದೆ ಇರುವ ದೊಡ್ಡ ಆಟ ಹೊರಗೆ ಬರಬಹುದು.
ಮುಂಬೈನ ಮಡಕೆಯಿಂದ ಆರಂಭವಾದ ಈ ನಂಬರ್ ಆಟ ಕಾಲಕ್ರಮೇಣ ದೇಶದ ಮೂಲೆ ಮೂಲೆ ತಲುಪಿದೆ. ಇಂದು ಅದರ ರೂಪ ಬದಲಾಗಿದೆ, ಸಾಧನ ಬದಲಾಗಿದೆ, ವೇಗ ಬದಲಾಗಿದೆ. ಆದರೆ ಜೇಬಿನಲ್ಲಿರುವ ಸಣ್ಣ ಹಣವನ್ನು ದೊಡ್ಡ ಹಣವನ್ನಾಗಿ ಮಾಡುವ ಆಸೆ ಮಾತ್ರ ಬದಲಾಗಿಲ್ಲ. ಉತ್ತರ ಕನ್ನಡದ ಹಳ್ಳಿಗಳಲ್ಲಿ ಈ ಆಟ ಇನ್ನಷ್ಟು ಆಳಕ್ಕೆ ಹೋಗುವ ಮುನ್ನ ಅದರ ಬೇರು ಎಲ್ಲಿದೆ, ಕೊಂಬೆ ಎಲ್ಲೆಲ್ಲಿದೆ ಎಂಬುದನ್ನು ಪತ್ತೆಹಚ್ಚುವ ಕಾಲ ಬಂದಿದೆ.