Ad
Ad
Ad
Home Local Story ಬಿಜೆಪಿಗೆ ಯಾರು ಬೇಕಾದರೂ ಬರಲಿ, ಆದರೆ ಕಂಡೀಶನ್ ಅಪ್ಲೈ!

ಬಿಜೆಪಿಗೆ ಯಾರು ಬೇಕಾದರೂ ಬರಲಿ, ಆದರೆ ಕಂಡೀಶನ್ ಅಪ್ಲೈ!

0
16

ವಿ.ಎಸ್‌ ಪಾಟೀಲ್‌ ಬಿಜೆಪಿ ಸೇರ್ಪಡೆಗೆ ಬನವಾಸಿಯಲ್ಲೂ ಬ್ರೇಕ್? | ‘ಐದು ವರ್ಷ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಿ’ ಎಂಬ ಸಂದೇಶ

ಶಿರಸಿ: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ಪ್ರಯತ್ನದಲ್ಲಿರುವ ಮಾಜಿ ಶಾಸಕ ವಿ.ಎಸ್‌ ಪಾಟೀಲ್‌ ಅವರಿಗೆ ಪಕ್ಷದೊಳಗಿಂದಲೇ ಈಗ ಹೊಸ ‘ಕಂಡೀಶನ್’ ಎದುರಾಗಿದ್ದು, ಪಕ್ಷಕ್ಕೆ ಬರಲು ಯಾರಿಗೂ ತಕರಾರಿಲ್ಲ. ಆದರೆ ʻಬಂದ ತಕ್ಷಣ ಟಿಕೆಟ್‌ ಬೇಕೆಂದರೆ ಮಾತ್ರ ಬಾಗಿಲು ಮುಚ್ಚಿ!ʼ ಬನವಾಸಿ ಭಾಗದ ಬಿಜೆಪಿ ಪ್ರಮುಖರ ಸಭೆಯಲ್ಲಿ ಇಂತಹದ್ದೊಂದು ಗಟ್ಟಿ ಸಂದೇಶ ಹೊರಬಿದ್ದಿದೆ ಎನ್ನಲಾಗಿದೆ.

ವಿ.ಎಸ್‌ ಪಾಟೀಲ್‌ ಕಾಂಗ್ರೆಸ್‌ನಿಂದ ಬಿಜೆಪಿಗೆ ಬರಲು ನಡೆಸುತ್ತಿದ್ದಾರೆ ಎನ್ನಲಾದ ತೆರೆಮರೆಯ ಕಸರತ್ತಿನ ಕುರಿತು ʻಕೆನರಾ ನೆಕ್ಸ್ಟ್‌ʼ ಈ ಹಿಂದೆಯೇ ವರದಿ ಮಾಡಿತ್ತು. ಬಿಜೆಪಿ ವರಿಷ್ಠರ ಮಟ್ಟದಲ್ಲಿ ಸಂಪರ್ಕ, ಪಕ್ಷದ ಪ್ರಮುಖ ಮುಖಂಡರ ಬೆನ್ನುಬೀಳುವಿಕೆ ಸೇರಿದಂತೆ ಸೇರ್ಪಡೆಗೆ ಹಲವು ಹಂತದ ಪ್ರಯತ್ನಗಳು ನಡೆಯುತ್ತಿವೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿತ್ತು.

ಆದರೆ ಯಲ್ಲಾಪುರ–ಮುಂಡಗೋಡ ಭಾಗದ ಬಿಜೆಪಿ ಪ್ರಮುಖರಿಂದ ನಿರೀಕ್ಷಿತ ‘ಹಸಿರು ನಿಶಾನೆ’ ಸಿಗದ ಬೆನ್ನಲ್ಲೇ, ಇದೀಗ ಬನವಾಸಿ ಭಾಗದ ಮೂಲಕ ಮತ್ತೊಂದು ಸುತ್ತಿನ ಪ್ರಯತ್ನಕ್ಕೆ ಪಾಟೀಲ್‌ ಮುಂದಾಗಿದ್ದಾರೆ ಎನ್ನಲಾಗಿದೆ.

ಪಾಟೀಲ್‌ ಅವರ ಸೇರ್ಪಡೆ ವಿಚಾರವನ್ನು ಮುಂದಿಟ್ಟುಕೊಂಡೇ ಗುರುವಾರ ಬನವಾಸಿ ಮಂಡಲ ಅಧ್ಯಕ್ಷ ರಮೇಶ್ ನಾಯ್ಕ ಪಕ್ಷದ ಪ್ರಮುಖರ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಸಭೆಯೊಳಗಿನ ಚರ್ಚೆ ಮಾತ್ರ ಸೇರ್ಪಡೆ ಪರ ‘ರೆಡ್ ಕಾರ್ಪೆಟ್‌’ ಹಾಸುವಂತಿರಲಿಲ್ಲ ಎಂಬ ಮಾತುಗಳು ಆಂತರಿಕ ಮೂಲಗಳಿಂದ ಕೇಳಿಬಂದಿವೆ.

ವರ್ಷಗಟ್ಟಲೆ ಪಕ್ಷದ ಧ್ವಜ ಹಿಡಿದು, ಮನೆ-ಸಂಸಾರವನ್ನೂ ಮರೆತು ಚುನಾವಣೆಯಲ್ಲಿ ಬೆವರು ಸುರಿಸಿ ದುಡಿದ ಕಾರ್ಯಕರ್ತರನ್ನು ಬದಿಗೊತ್ತಿ ಹೊರಗಿನಿಂದ ಬರುವವರಿಗೆ ನೇರವಾಗಿ ಟಿಕೆಟ್‌ ನೀಡುವ ಸಂಸ್ಕೃತಿ ಬೇಡ ಎಂಬ ಅಸಮಾಧಾನ ಪ್ರಮುಖರಿಂದ ವ್ಯಕ್ತವಾಗಿದೆ ಎನ್ನಲಾಗಿದೆ.

‘ಬಂದ ಪುಟ್ಟ-ಹೋದ ಪುಟ್ಟʼ ರಾಜಕಾರಣದಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ರಾಜಕೀಯ ಭವಿಷ್ಯಕ್ಕೆ ಹೊಡೆತ ಬೀಳಬಾರದು. ಪಕ್ಷನಿಷ್ಠೆಯಿಂದ ಬರಲು ಆಸಕ್ತಿ ಇರುವವರು ಬರಲಿ. ಅಂಥವರಿಗೆ ಯಾವಾಗಲೂ ಸ್ವಾಗತವಿದೆ. ಆದರೆ ಟಿಕೆಟ್‌ಗಾಗಿ ಪಕ್ಷ ಸೇರುವುದಾದರೆ ಬರಬೇಕಾಗಿಲ್ಲ. ಮೊದಲು ಸಾಮಾನ್ಯ ಕಾರ್ಯಕರ್ತನಾಗಿ ಐದು ವರ್ಷ ಪಕ್ಷಕ್ಕಾಗಿ ದುಡಿಯಲಿ. ಪಕ್ಷವನ್ನು ಗೆಲ್ಲಿಸಲು ಕೆಲಸ ಮಾಡಲಿ. ನಂತರ ಟಿಕೆಟ್‌ ನೀಡಬೇಕೋ ಬೇಡವೋ ಪಕ್ಷದ ಹಿರಿಯರು ತೀರ್ಮಾನಿಸಲಿ ಎಂಬ ನಿಲುವು ಸಭೆಯಲ್ಲಿ ಮೇಲುಗೈ ಸಾಧಿಸಿದೆ ಎನ್ನಲಾಗಿದೆ.

ಅಂದರೆ ಸಂದೇಶ ಸರಳ ಮತ್ತು ಸ್ಪಷ್ಟವಾಗಿದೆ. ಬಿಜೆಪಿ ಬಾಗಿಲು ತೆರೆದಿದೆ, ಆದರೆ ಟಿಕೆಟ್‌ನ ಬಾಗಿಲು ತಕ್ಷಣ ತೆರೆಯುವುದಿಲ್ಲ!

ಇದೀಗ ವಿ.ಎಸ್‌ ಪಾಟೀಲ್‌ ಅವರ ಮುಂದಿರುವ ಸವಾಲು ಸೇರ್ಪಡೆಯಷ್ಟೇ ಅಲ್ಲ. ಸೇರ್ಪಡೆಯಾದ ಬಳಿಕ ಐದು ವರ್ಷ ‘ಸಾಮಾನ್ಯ ಕಾರ್ಯಕರ್ತ’ನಾಗಿ ಕೆಲಸ ಮಾಡುವ ರಾಜಕೀಯ ಪರೀಕ್ಷೆಯನ್ನು ಎದುರಿಸುವುದು!

ಈ ಷರತ್ತು ಪಾಟೀಲ್‌ ಅವರಿಗೆ ಒಪ್ಪಿಗೆಯಾಗುತ್ತದೆಯೇ, ಟಿಕೆಟ್‌ ಭರವಸೆಯಿಲ್ಲದ ಬಿಜೆಪಿ ಪ್ರವೇಶಕ್ಕೆ ಅವರು ಸಿದ್ಧರಿದ್ದಾರೆಯೇ ಎಂಬುದೇ ಇದೀಗ ಯಲ್ಲಾಪುರ ಕ್ಷೇತ್ರದ ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿರುವ ಪ್ರಶ್ನೆ.

ಒಟ್ಟಿನಲ್ಲಿ, ವಿ.ಎಸ್‌ ಪಾಟೀಲ್‌ ಅವರ ಬಿಜೆಪಿ ಸೇರ್ಪಡೆ ಕಸರತ್ತು ಮತ್ತೊಂದು ಸುತ್ತು ತಲುಪಿದ್ದರೂ, ಬನವಾಸಿಯಿಂದ ಹೊರಬಿದ್ದಿರುವ ಸಂದೇಶದಲ್ಲಿ ಮಾತ್ರ ‘ಮೊದಲು ಪಕ್ಷ, ನಂತರ ಟಿಕೆಟ್‌’ ಎಂಬುದು ಸ್ಪಷ್ಟವಾದಂತಾಗಿದೆ. ಹಾಗಾದರೆ, ವಿ.ಎಸ್‌. ಪಾಟೀಲರ ನಡೆ ಯಾವ ಕಡೆ…?!

NO COMMENTS

LEAVE A REPLY

Please enter your comment!
Please enter your name here

error: Content is protected !!