ಭಾರತಕ್ಕೆ ಕೀರ್ತಿ ತಂದ ಉತ್ತರ ಕನ್ನಡದ ಯುವ ಓಟಗಾರ
ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಯುವ ಅಥ್ಲೀಟ್ ಶಿವಾಜಿ ಪರಶುರಾಮ್ ಮಾದಪ್ಪಗೌಡ್ರ ಅವರು ಚೀನಾದ ಓರ್ಡೋಸ್ ನಗರದಲ್ಲಿ ನಡೆಯುತ್ತಿರುವ ಪ್ರಥಮ ಏಷ್ಯನ್ ಅಂಡರ್-23 ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಪುರುಷರ 5,000 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
5,000 ಮೀಟರ್ ಫೈನಲ್ನಲ್ಲಿ ಶಿವಾಜಿ 14 ನಿಮಿಷ 08.19 ಸೆಕೆಂಡ್ಗಳಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನ ಪಡೆದರು. ಜಪಾನ್ನ ರೂಯಿ ಸುಜುಕಿ ಚಿನ್ನದ ಪದಕ ಗೆದ್ದರೆ, ಭಾರತದ ಮತ್ತೋರ್ವ ಅಥ್ಲೀಟ್ ವಿನೋದ್ ಸಿಂಗ್ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಹೀಗಾಗಿ ಈ ಸ್ಪರ್ಧೆಯಲ್ಲಿ ಭಾರತಕ್ಕೆ ಒಂದೇ ವಿಭಾಗದಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳು ಲಭಿಸಿವೆ.
22 ವರ್ಷದ ಶಿವಾಜಿ ಪರಶುರಾಮ್ ಮಾದಪ್ಪಗೌಡ್ರ ಅವರು ಇತ್ತೀಚಿನ ವರ್ಷಗಳಲ್ಲಿ ಭಾರತದ ಮಧ್ಯ ಹಾಗೂ ದೀರ್ಘದೂರದ ಓಟಗಳಲ್ಲಿ ಭರವಸೆಯ ಅಥ್ಲೀಟ್ ಆಗಿ ಹೊರಹೊಮ್ಮಿದ್ದಾರೆ. ಕಳೆದ ತಿಂಗಳು ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಅಂತರ್ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 5,000 ಮೀಟರ್ನಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ 13:57.58 ಸಮಯ ದಾಖಲಿಸಿ ಏಷ್ಯನ್ ಅಂಡರ್-23 ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿದ್ದರು. ಅವರು ಈ ಹಿಂದೆ ಏಷ್ಯನ್ ಅಂಡರ್-20 ಚಾಂಪಿಯನ್ಶಿಪ್ನಲ್ಲೂ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಹಳಿಯಾಳದ ಈ ಯುವ ಪ್ರತಿಭೆಯ ಸಾಧನೆಗೆ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.