ಕಾರವಾರ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಜೆಇಇ (JEE) ಹಾಗೂ ಕರ್ನಾಟಕ ಸಿಇಟಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿ ಅನೀಶ್ ನಾಯ್ಕ ಅವರನ್ನು ಧಾರವಾಡದ ಅರ್ಜುನ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಕಾರವಾರದ ಬಾಲ ಮಂದಿರ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಸತತ ಪರಿಶ್ರಮ, ಶಿಸ್ತು ಹಾಗೂ ಶಿಕ್ಷಕರ ಮಾರ್ಗದರ್ಶನದೊಂದಿಗೆ ಗಮನಾರ್ಹ ಸಾಧನೆ ಮಾಡಿರುವ ಅನೀಶ್, ಪಿಯುಸಿಯಲ್ಲಿ ಶೇ.96 ಅಂಕ, ಜೆಇಇ ಮೇನ್ಸ್‌ನಲ್ಲಿ ಶೇ.99.56, ಜೆಇಇ ಅಡ್ವಾನ್ಸ್‌ನಲ್ಲಿ ಅಖಿಲ ಭಾರತ 5809ನೇ ಸ್ಥಾನ, ಕರ್ನಾಟಕ ಸಿಇಟಿಯಲ್ಲಿ 892ನೇ ಸ್ಥಾನ ಗಳಿಸಿದ್ದಾರೆ.
ಇದಲ್ಲದೆ, ಎಸ್‌ಒಎಫ್ ಅಂತಾರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಯಲ್ಲಿ 189ನೇ ರಾಷ್ಟ್ರೀಯ ಸ್ಥಾನ ಹಾಗೂ ವಲಯ ಮಟ್ಟದಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ನಡೆಸುವ ಪರೀಕ್ಷೆಯ ಮೊದಲ ಹಂತವನ್ನೂ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲ ಮಂದಿರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಂಜಲಿ ಮಾನೆ, ಶಾಲಾ ದಿನಗಳಿಂದಲೇ ಅನೀಶ್ ಪರಿಶ್ರಮಿ, ಶಿಸ್ತಿನ ಹಾಗೂ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ವಿದ್ಯಾರ್ಥಿಯಾಗಿದ್ದನು. ಅವನ ಈ ಸಾಧನೆ ಶಾಲೆಗೆ ಹೆಮ್ಮೆ ತಂದಿದ್ದು, ಮುಂದಿನ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅನೀಶ್, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಒಂದೇ ದಿನದಲ್ಲಿ ಸಿಗುವುದಿಲ್ಲ. ಅದು ನಿರಂತರ ಪರಿಶ್ರಮ, ಸಮಯದ ಸದ್ಬಳಕೆ ಮತ್ತು ವಿಷಯದ ಆಳವಾದ ಅಧ್ಯಯನದ ಫಲವಾಗಿದೆ. ವಿದ್ಯಾರ್ಥಿಗಳು ಗುರಿ ಸ್ಪಷ್ಟವಾಗಿಟ್ಟುಕೊಂಡು ನಿರಂತರ ಅಭ್ಯಾಸ ಮಾಡಿದರೆ ಯಶಸ್ಸು ಖಚಿತ ಎಂದು ಕಿರಿಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಮ್ಮ ಯಶಸ್ಸಿಗೆ ತಂದೆ-ತಾಯಿ, ಶಿಕ್ಷಕರು ಹಾಗೂ ಅರ್ಜುನ ಸಂಸ್ಥೆಯ ಮಾರ್ಗದರ್ಶನವೇ ಪ್ರಮುಖ ಕಾರಣ ಎಂದು ಅವರು ಕೃತಜ್ಞತೆ ಸಲ್ಲಿಸಿದರು.
ಗಮನಾರ್ಹ ಸಂಗತಿಯೆಂದರೆ, ಅನೀಶ್ ನಾಯ್ಕ ಅವರು ಜೀ ಕನ್ನಡ ನ್ಯೂಸ್‌ನ ಉತ್ತರ ಕನ್ನಡ ಜಿಲ್ಲಾ ವರದಿಗಾರ ಕಡತೋಕ ಮಂಜು ಅವರ ಪುತ್ರರಾಗಿದ್ದು, ತಾಯಿ ಶ್ವೇತಾ ನಾಯ್ಕ ಶಿಕ್ಷಕಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಅರ್ಜುನ ಸಂಸ್ಥೆಯ ನಿರ್ದೇಶಕರು, ಬಾಲ ಮಂದಿರ ಶಾಲೆಯ ಪ್ರಾಚಾರ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಯ ಪೋಷಕರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.