ಕಾರವಾರ: ಮುಂಗಾರು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಮಳೆ ಕೊರತೆ ಆತಂಕಕ್ಕೆ ಕಾರಣವಾಗಿದೆ.
ಜೂನ್‌ನಿಂದ ಜುಲೈ 15ರವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.25ರಷ್ಟು ಕಡಿಮೆ ಮಳೆ ದಾಖಲಾಗಿದ್ದು, ಸಾಮಾನ್ಯವಾಗಿ ಈ ಅವಧಿಯಲ್ಲಿ 1,265 ಮಿ.ಮೀ. ಮಳೆಯಾಗಬೇಕಿದ್ದರೆ, ಈ ಬಾರಿ ಕೇವಲ 945.4 ಮಿ.ಮೀ. ಮಳೆಯಷ್ಟೇ ಸುರಿದಿದೆ.
ತಾಲೂಕುವಾರು ಯಲ್ಲಾಪುರದಲ್ಲಿ-ಶೇ.38, ಭಟ್ಕಳದಲ್ಲಿ-ಶೇ.37, ಅಂಕೋಲಾ ಮತ್ತು ಹಳಿಯಾಳದಲ್ಲಿ ತಲಾ-ಶೇ.31, ಮುಂಡಗೋಡಿನಲ್ಲಿ-ಶೇ.23, ಕುಮಟಾದಲ್ಲಿ-ಶೇ.21, ಕಾರವಾರದಲ್ಲಿ-ಶೇ.20, ಹೊನ್ನಾವರದಲ್ಲಿ-ಶೇ.19, ಸಿದ್ದಾಪುರ ಹಾಗೂ ದಾಂಡೇಲಿಯಲ್ಲಿ ತಲಾ-ಶೇ.12, ಸೂಪಾದಲ್ಲಿ-ಶೇ.11 ಮತ್ತು ಶಿರಸಿಯಲ್ಲಿ-ಶೇ.8ರಷ್ಟು ಮಳೆ ಕೊರತೆ ದಾಖಲಾಗಿದೆ.
ಕಳೆದ ಒಂದು ವಾರದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದ್ದು, ಸಾಮಾನ್ಯವಾಗಿ 217.5 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 38.4 ಮಿ.ಮೀ. ಮಳೆಯಾಗುವ ಮೂಲಕ ಶೇ.82ರಷ್ಟು ಮಳೆ ಕೊರತೆ ಉಂಟಾಗಿದೆ.
ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು, ಜಲಮೂಲಗಳು ಹಾಗೂ ಕುಡಿಯುವ ನೀರಿನ ಲಭ್ಯತೆ ಕುರಿತು ಆತಂಕ ಹೆಚ್ಚಾಗಿದ್ದು, ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿ ಆಕಾಶದತ್ತ ಕಣ್ಣಿಟ್ಟಿದ್ದಾರೆ.