ಕುಮಟಾ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಯುವಕನೊಬ್ಬ ಮೃತಪಟ್ಟ ಘಟನೆ ಕುಮಟಾ ತಾಲೂಕಿನ ಹೆಗಡೆ ಸಮೀಪ ಸಂಭವಿಸಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತನನ್ನು ಅಮೀತ್ ಕುಮಾರ್ ದೀಪಕ್ ಪಾಠಕ್ ಎಂದು ಗುರುತಿಸಲಾಗಿದ್ದು, ಮೂಲತಃ ಜಾರ್ಖಂಡ್ ರಾಜ್ಯದ ಗುಮ್ಲಾ ಜಿಲ್ಲೆಯ ನಿವಾಸಿಯಾಗಿದ್ದ ಅವರು, ಹೊನ್ನಾವರ ತಾಲೂಕಿನ ಕರ್ಕಿಯ ಜೈ ಮಾರುತಿ ಇಂಡಸ್ಟ್ರೀಸ್‌ನಲ್ಲಿ ಕೆಲಸ ಮಾಡುತ್ತಿದ್ದರು.
ತಮ್ಮ ಊರಿನ ಜಮೀನು ಸಂಬಂಧಿತ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ಅಮೀತ್ ಕುಮಾರ್, ಜಾರ್ಖಂಡ್‌ನಿಂದ ರೈಲಿನಲ್ಲಿ ಗೋವಾಕ್ಕೆ ಬಂದು ಅಲ್ಲಿಂದ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಕುಮಟಾಕ್ಕೆ ಪ್ರಯಾಣಿಸುತ್ತಿದ್ದರು.
ಜುಲೈ 14ರಂದು ರಾತ್ರಿ ಸುಮಾರು 8.05ರ ವೇಳೆಗೆ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ರೈಲ್ವೆ ಗೇಟ್ ಸಮೀಪ ತಲುಪಿದಾಗ, ಚಲಿಸುತ್ತಿದ್ದ ರೈಲಿನಿಂದ ಹೊರಗೆ ಜಿಗಿದಿದ್ದಾರೆ. ಈ ವೇಳೆ ರೈಲ್ವೆಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕೆಳಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.