ಮಧ್ಯರಾತ್ರಿ ಆಪದ್ಬಾಂಧವರಂತೆ ಬಂದ 112 ಸಿಬ್ಬಂದಿ
ಕುಮಟಾ: ರಾತ್ರಿ 11.30. ನಿರ್ಜನ ಹೆದ್ದಾರಿ. ಬೈಕ್‌ನಲ್ಲಿದ್ದ ಪೆಟ್ರೋಲ್ ಸಂಪೂರ್ಣ ಖಾಲಿ. ಸುತ್ತಮುತ್ತ ಪೆಟ್ರೋಲ್ ಬಂಕ್ ಇಲ್ಲ, ಸಹಾಯಕ್ಕೆ ಯಾರೂ ಮುಂದೆ ಬರದ ಪರಿಸ್ಥಿತಿ. ಇಂತಹ ಸಂಕಷ್ಟದಲ್ಲಿ 112ಕ್ಕೆ ಮಾಡಿದ ಒಂದು ಕರೆ, ಕುಮಟಾದ ಯುವಕನಿಗೆ ಪೊಲೀಸರ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಕುಮಟಾದ ರಾಘವೇಂದ್ರ ಲಕ್ಷೇಶ್ವರ್ ಅವರು ಕಾರವಾರ-ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾದನಗೇರಿ ಕ್ರಾಸ್ ಸಮೀಪ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಪೆಟ್ರೋಲ್ ಮುಗಿದಿತ್ತು. ಹತ್ತಿರದ ಪೆಟ್ರೋಲ್ ಬಂಕ್ ಬಂದ್ ಆಗಿರುವುದು ತಿಳಿದು, ಅಲ್ಲಿದ್ದ ಅಂಗಡಿ, ಲಾಡ್ಜ್ ಹಾಗೂ ಆಟೋ ಚಾಲಕರ ಬಳಿ ಪೆಟ್ರೋಲ್‌ಗಾಗಿ ಮನವಿ ಮಾಡಿದರೂ ಯಾವುದೇ ನೆರವು ಸಿಗಲಿಲ್ಲ.
ಬೇರೆ ದಾರಿ ಕಾಣದೆ ಬೈಕ್‌ನ್ನು ತಳ್ಳಿಕೊಂಡೇ ಕುಮಟಾ ಕಡೆ ನಡೆಯುತ್ತಿದ್ದ ಅವರು, ಕೊನೆಗೆ ಏಣೋ ನೆನಪಾಗಿ 112 ತುರ್ತುಸೇವೆಗೆ ಕರೆ ಮಾಡಿದ್ದಾರೆ. “ಈ ವಿಷಯಕ್ಕೆ ಪೊಲೀಸರು ಬರುತ್ತಾರೆಯೇ?” ಎಂಬ ಅನುಮಾನ ಇದ್ದರೂ ಕರೆ ಮಾಡಿದ್ದರು.
ಆದರೆ ಕೇವಲ 15 ನಿಮಿಷಗಳೊಳಗೆ ಗೋಕರ್ಣ ಪೊಲೀಸ್ ಠಾಣೆಯ 112 ವಾಹನ ಸ್ಥಳಕ್ಕೆ ತಲುಪಿದೆ. ಅಧಿಕಾರಿಗಳು ಯಾವುದೇ ಅಸಮಾಧಾನ ವ್ಯಕ್ತಪಡಿಸದೆ, ಸಮಾಧಾನ ಹೇಳಿ ಸುಮಾರು ನಾಲ್ಕು ಕಿಲೋಮೀಟರ್ ದೂರದ ಪೆಟ್ರೋಲ್ ಬಂಕ್‌ಗೆ ಕರೆದುಕೊಂಡು ಹೋಗಿ ಪೆಟ್ರೋಲ್ ಕೊಡಿಸಿದ್ದಾರೆ. ಬೈಕ್ ಸ್ಟಾರ್ಟ್ ಆಗುವವರೆಗೂ ಜೊತೆಗಿದ್ದು, ಸುರಕ್ಷಿತವಾಗಿ ಪ್ರಯಾಣ ಮುಂದುವರಿಸಲು ನೆರವಾಗಿದ್ದಾರೆ.
ಅಷ್ಟರಲ್ಲಾಗಲೇ ರಾತ್ರಿ ಸುಮಾರು 2.30 ಆಗಿತ್ತು. ಮನೆ ತಲುಪುವ ಆತುರದಲ್ಲಿ ನೆರವಿಗೆ ಬಂದ ಅಧಿಕಾರಿಗಳ ಹೆಸರನ್ನೇ ಕೇಳುವುದನ್ನು ಮರೆತಿರುವುದಾಗಿ ರಾಘವೇಂದ್ರ ತಿಳಿಸಿದ್ದಾರೆ.
ʻಕಾನೂನು ಪಾಲನೆಯ ಕೆಲಸ ಮಾಡುವ ಅಧಿಕಾರಿಗಳ ಹೃದಯ ಕಲ್ಲಿನಂತಿರಬಹುದು ಎಂದುಕೊಂಡಿದ್ದೆ. ಆದರೆ ಆ ರಾತ್ರಿ ಅವರ ವರ್ತನೆ ನನ್ನ ಆಪ್ತ ಸ್ನೇಹಿತರ ನೆನಪು ತರಿಸಿತುʼ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಉತ್ತರಕನ್ನಡ ಜಿಲ್ಲಾ ಪೊಲೀಸರ ಮಾನವೀಯತೆಗೆ ಹಲವರು ಮನದುಂಬಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.