Friday, July 24, 2026
Join WhatsApp Group
HomeLocal Newsಬದಲಾವಣೆಯಾಗದ ಮುರಿನಕಟ್ಟೆ; ಹಿಂದೂ ಸಂಘಟನೆಗಳಿಂದ ಮತ್ತೆ ಮನವಿ

ಬದಲಾವಣೆಯಾಗದ ಮುರಿನಕಟ್ಟೆ; ಹಿಂದೂ ಸಂಘಟನೆಗಳಿಂದ ಮತ್ತೆ ಮನವಿ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ-66ರ ಮುರಿನಕಟ್ಟೆ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಈ ಹಿಂದೆ ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನೀಡಿದ್ದ ಭರವಸೆಗಳು ಇನ್ನೂ ಈಡೇರಿಲ್ಲ ಎಂದು ಆರೋಪಿಸಿರುವ ಭಟ್ಕಳ ತಾಲೂಕು ಹಿಂದೂ ಸಂಘಟನೆಗಳ ಒಕ್ಕೂಟ, ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಬಾಕಿ ಉಳಿದಿರುವ ಮೂರು ಪ್ರಮುಖ ಬೇಡಿಕೆಗಳನ್ನು ತಕ್ಷಣ ಜಾರಿಗೊಳಿಸುವಂತೆ ಒತ್ತಾಯಿಸಿದೆ.

ನೂತನವಾಗಿ ನಿರ್ಮಿಸಲಾಗಿದ್ದ ಮುರಿನಕಟ್ಟೆ ಹಾನಿಗೊಳಗಾದ ಬಳಿಕ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹಿಂದೂ ಮುಖಂಡರೊಂದಿಗೆ ಸಭೆ ನಡೆಸಿದ್ದರು. ಆ ವೇಳೆ ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗದಲ್ಲಿರುವ ಮೂಲ ಸ್ಥಳದಲ್ಲೇ 2 ಮೀಟರ್ ಅಗಲ, 15 ಅಡಿ ಉದ್ದ ಹಾಗೂ 3 ಅಡಿ ಎತ್ತರದ ಸಿಮೆಂಟ್ ಕಟ್ಟೆ ನಿರ್ಮಿಸಿ, ಅದರ ಮೇಲ್ಭಾಗದಲ್ಲಿ ಸ್ಟೀಲ್ ಗ್ರೀಲ್ ಹಾಗೂ “ಮುರಿನಕಟ್ಟೆ” ನಾಮಫಲಕ ಅಳವಡಿಸುವ ಭರವಸೆ ನೀಡಲಾಗಿತ್ತು.

ಬಳಿಕ ಮುರಿನಕಟ್ಟೆಯ ನಿರ್ಮಾಣ ಪೂರ್ಣಗೊಂಡಿದ್ದರೂ, ಅದು ಸ್ಥಳೀಯ ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ಅನುಗುಣವಾಗಿ ನಿರ್ಮಾಣವಾಗಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜೂನ್ 15ರಂದು ಭಟ್ಕಳದ ಐಬಿಯಲ್ಲಿ ಸಹಾಯಕ ಆಯುಕ್ತರು, ಪೊಲೀಸ್ ಉಪಾಧೀಕ್ಷಕರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ನೇತೃತ್ವದಲ್ಲಿ ಹಿಂದೂ ಮುಖಂಡರ ಸಭೆ ನಡೆದಿದ್ದು, ಅಲ್ಲಿಯೂ ಕೆಲವು ಬದಲಾವಣೆಗಳ ಕುರಿತು ಒಮ್ಮತ ಮೂಡಿತ್ತು.

* ಪ್ರಸ್ತುತ ಡಿವೈಡರ್‌ನಿಂದ ಕೇವಲ 8 ಇಂಚು ಎತ್ತರದಲ್ಲಿರುವ ಮುರಿನಕಟ್ಟೆಯ ತಳಪಾಯವನ್ನು 2 ಅಡಿ ಎತ್ತರಕ್ಕೆ ಹೆಚ್ಚಿಸಬೇಕು.

* ಮುರಿನಕಟ್ಟೆಯ ಮುಂಭಾಗ ಹಾಗೂ ಹಿಂಭಾಗದಲ್ಲಿ ಸುಮಾರು 50 ಮೀಟರ್ ಉದ್ದದ ಡಿವೈಡರ್‌ನಲ್ಲಿ ಅಳವಡಿಸಿರುವ ಸ್ಟೀಲ್ ಗ್ರೀಲ್‌ನ ಎತ್ತರವನ್ನು ಒಂದೂವರೆ ಅಡಿ ಕಡಿಮೆಗೊಳಿಸಬೇಕು. ಈಗಿನ ಗ್ರೀಲ್ ಎತ್ತರದಿಂದ ಮುರಿನಕಟ್ಟೆ ಸ್ಪಷ್ಟವಾಗಿ ಕಾಣುತ್ತಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

* ನಿರ್ಮಿಸಿರುವ ಕಟ್ಟೆಗೆ “ಮುರಿನಕಟ್ಟೆ” ಎಂಬ ನಾಮಫಲಕ ಅಳವಡಿಸಿ, ಸ್ಥಳೀಯ ಹಿಂದೂಗಳ ಧಾರ್ಮಿಕ ಸಂಪ್ರದಾಯದಂತೆ ಪೂಜೆ-ಪುನಸ್ಕಾರ ನಡೆಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು.

ಸಭೆಯಲ್ಲಿ ಈ ಮೂರು ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಈಡೇರಿಸುವ ಭರವಸೆ ಅಧಿಕಾರಿಗಳು ನೀಡಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯ ಗ್ರಾಮಸ್ಥರು ಹಾಗೂ ಹಿಂದೂ ಸಮುದಾಯದಲ್ಲಿ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಟ್ಕಳ ಘಟಕದ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಹಿಂದೂ ಜಾಗರಣ ವೇದಿಕೆ ತಾಲೂಕು ಸಂಯೋಜಕ ಜಯಂತ, ಮಾಜಿ ಸಚಿವ ಶಿವಾನಂದ ನಾಯ್ಕ, ಹಿಂದೂ ಮುಖಂಡರಾದ ಗೋವಿಂದ ನಾಯ್ಕ, ಕುಮಾರ ನಾಯ್ಕ, ಶ್ರೀನಿವಾಸ ನಾಯ್ಕ, ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಕಾಂತ ನಾಯ್ಕ ಹಾಗೂ ಸುಬ್ರಾಯ ದೇವಾಡಿಗ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share