ದಾಸನಕೊಪ್ಪದಲ್ಲಿ ಯುವಕರ ಮೇಲೆ ರಾಡ್‌ನಿಂದ ಹಲ್ಲೆ
ಶಿರಸಿ: ಹೋರಿ ಹಬ್ಬದಲ್ಲಿ ಅಖಾಡದೊಳಗೆ ಪ್ರವೇಶಿಸದಂತೆ ತಡೆದಿದ್ದ ವಿಚಾರವನ್ನು ಮನಸ್ಸಿಗೆ ಹಾಕಿಕೊಂಡಿದ್ದ ಯುವಕರ ಗುಂಪೊಂದು, ಸುಮಾರು ಐದು ತಿಂಗಳ ಬಳಿಕ ದಾಸನಕೊಪ್ಪದಲ್ಲಿ ಇಬ್ಬರು ಯುವಕರ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಸಿ ತಾಲೂಕಿನ ಮಳಲಗಾಂವ ನಿವಾಸಿ ಗಣೇಶ ಮಡಿವಾಳ (23) ನೀಡಿದ ದೂರಿನ ಮೇರೆಗೆ ಪವನ ನಾಗರಾಜ ಮಾಳಕ್ಕನವರ, ರಾಘವೇಂದ್ರ, ಅಕ್ಷಯ, ಆಕಾಶ ಸತೀಶ ಭೋವಿ ವಡ್ಡರ್, ಶಶಾಂಕ್, ಚಂದನ ಗೌಡ ಹಾಗೂ ಕಾರ್ತಿಕ ಮಾಳಕ್ಕನವರ ವಿರುದ್ಧ ಪ್ರಕರಣ ದಾಖಲಾಗಿದೆ.
2026ರ ಫೆಬ್ರವರಿ 26ರಂದು ಮಳಲಗಾಂವದಲ್ಲಿ ನಡೆದ ಹೋರಿ ಬೆದರಿಸುವ ಹಬ್ಬದಲ್ಲಿ ಗಣೇಶ ಹಾಗೂ ಅವರ ತಮ್ಮ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ವೇಳೆ ಆರೋಪಿಗಳು ಹೋರಿ ಅಖಾಡದೊಳಗೆ ಪ್ರವೇಶಿಸಲು ಮುಂದಾದಾಗ, ಇತರರಂತೆ ಅವರನ್ನೂ ತಡೆದಿದ್ದರು. ಇದೇ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡ ಆರೋಪಿಗಳು ಅವಕಾಶಕ್ಕಾಗಿ ಕಾಯುತ್ತಿದ್ದರು.
ಜುಲೈ 21ರಂದು ಗಣೇಶ ಮತ್ತು ಅವರ ತಮ್ಮ ಗೊಬ್ಬರ ಖರೀದಿಸಲು ದಾಸನಕೊಪ್ಪಕ್ಕೆ ಬಂದಿದ್ದರು. ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಎದುರು ಅವರನ್ನು ಕಂಡ ಮೊದಲ ಆರೋಪಿ ಪವನ ನಾಗರಾಜ ಮಾಳಕ್ಕನವರ ಅವಾಚ್ಯ ಶಬ್ದಗಳಿಂದ ನಿಂದಿಸಿ, “ಇವತ್ತು ಸರಿಯಾಗಿ ಸಿಕ್ಕಿದ್ದೀರಿ” ಎಂದು ಹೇಳಿ ಉಳಿದ ಆರೋಪಿಗಳನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಳಿಕ ಪಕ್ಕದ ವೆಲ್ಡಿಂಗ್ ಅಂಗಡಿಯಿಂದ ಕಬ್ಬಿಣದ ರಾಡ್ ತಂದು ಗಣೇಶ ಅವರ ಎಡ ಕಿವಿಯ ಹಿಂಭಾಗಕ್ಕೆ ಹೊಡೆದಿದ್ದಾನೆ ಎನ್ನಲಾಗಿದೆ. ನಂತರ ಉಳಿದ ಆರೋಪಿಗಳು ಇಬ್ಬರ ಮೇಲೂ ಹಲ್ಲೆ ನಡೆಸಿ, ನೆಲಕ್ಕೆ ಕೆಡವಿ ಕಾಲಿನಿಂದ ತುಳಿದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸ್ಥಳದಲ್ಲಿದ್ದ ಇಬ್ಬರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ ಬಳಿಕ ಆರೋಪಿಗಳು, “ಈ ದಿನ ತಪ್ಪಿಸಿಕೊಂಡಿದ್ದೀರಿ, ಇನ್ನೊಮ್ಮೆ ದಾಸನಕೊಪ್ಪಕ್ಕೆ ಬಂದರೆ ನೋಡಿಕೊಳ್ಳುತ್ತೇವೆ” ಎಂದು ಜೀವ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾರೆ.
ಗಾಯಗೊಂಡ ಗಣೇಶ ಹಾಗೂ ಅವರ ತಮ್ಮ ಶಿರಸಿ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದು, ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.