ಜಾತ್ರೆಯ ಸಡಗರ: ಆರೋಗ್ಯಕ್ಕಿರಲಿ ಎಚ್ಚರ.
ಊರೆಲ್ಲಾ ತಳಿರು ತೋರಣ, ಸಾಲು ಸಾಲು ಅಂಗಡಿಗಳು, ಮುಗಿಲು ಮುಟ್ಟುವ ಜೈಕಾರ…ಹೌದು! ಇದು ಜಾತ್ರೆಗಳ ಕಾಲ. ಭಕ್ತಿ ಮತ್ತು ಮೋಜಿನ ಸಂಗಮವಾದ ಜಾತ್ರೆಗಳು ಮನಸ್ಸಿಗೆ ಮುದ ನೀಡುವುದೇನೋ ನಿಜ. ಆದರೆ, ಈ ಸಂಭ್ರಮದ ಅಬ್ಬರದಲ್ಲಿ ನಮ್ಮ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ವಹಿಸಿದರೆ, ಆ ಕ್ಷಣದ ಮೋಜು ಮುಂದೆ ಸಂಕಷ್ಟಕ್ಕೆ ದಾರಿ ಮಾಡಿಕೊಡಬಹುದು.
ಜಾತ್ರೆ ಎಂದರೆ ಅಲ್ಲಿ ಜನಜಂಗುಳಿ ಮತ್ತು ಧೂಳು ಸಹಜ. ಈ ಕೆಳಗಿನ ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸುವ ಮೂಲಕ ನಾವು ಸುಕ್ಷೇಮವಾಗಿರಬಹುದು:
ಆಹಾರ ಮತ್ತು ನೀರಿನ ಕಾಳಜಿ: ಜಾತ್ರೆಯಲ್ಲಿ ಬಣ್ಣಬಣ್ಣದ ಪಾನೀಯಗಳು ಮತ್ತು ತೆರೆದಿಟ್ಟ ತಿಂಡಿಗಳು ನಮ್ಮನ್ನು ಆಕರ್ಷಿಸುತ್ತವೆ. ಆದರೆ ಇವುಗಳು ಕಲುಷಿತವಾಗಿರುವ ಸಾಧ್ಯತೆ ಹೆಚ್ಚು.
* ಸಾಧ್ಯವಾದಷ್ಟು ಕುದಿಸಿ ಆರಿಸಿದ ನೀರನ್ನು ಮನೆಯಿಂದಲೇ ಕೊಂಡೊಯ್ಯುವುದು ಉತ್ತಮ.
* ರಸ್ತೆ ಬದಿಯ ತೆರೆದಿಟ್ಟ ಆಹಾರಕ್ಕಿಂತ, ಬಿಸಿಯಾಗಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಿ.
* ಹೆಚ್ಚಿನ ಬಣ್ಣ ಬೆರೆಸಿದ ಪಾನೀಯಗಳು ಹೊಟ್ಟೆಯ ಸೋಂಕಿಗೆ ಕಾರಣವಾಗಬಹುದು, ಎಚ್ಚರವಿರಲಿ.
*ಆಹಾರ ಸೇವನೆಯ ಮುನ್ನ ಕೈಗಳನ್ನು ನೀರು ಅಥವಾ ಸಾನಿಟೈಜರ್ ನಿಂದ ಸ್ವಚ್ಛ ಗೊಳಿಸಿ.
ಧೂಳು ಮತ್ತು ಸೋಂಕಿನಿಂದ ರಕ್ಷಣೆ: ಜನದಟ್ಟಣೆಯಲ್ಲಿ ಗಾಳಿಯ ಮೂಲಕ ಹರಡುವ ರೋಗಗಳು ಮತ್ತು ಧೂಳಿನಿಂದ ಅಲರ್ಜಿ ಕಾಡುವುದು ಸಾಮಾನ್ಯ.
* ಧೂಳಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವುದು ಅಥವಾ ಕರವಸ್ತ್ರ ಬಳಸುವುದು ಒಳ್ಳೆಯದು.
* ಜಾತ್ರೆಯಿಂದ ಬಂದ ತಕ್ಷಣ ಕೈಕಾಲುಗಳನ್ನು ಸೋಪಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ.
ಮಕ್ಕಳ ಮತ್ತು ವೃದ್ಧರ ಕಾಳಜಿ: ಮಕ್ಕಳು ಅತಿಯಾದ ಬಿಸಿಲು ಮತ್ತು ಜನದಟ್ಟಣೆಯಿಂದ ಬೇಗನೆ ಸುಸ್ತಾಗುತ್ತಾರೆ. ಅವರಿಗೆ ಹಣ್ಣಿನ ರಸ ಅಥವಾ ಎಳನೀರಿನಂತಹ ನೈಸರ್ಗಿಕ ಪಾನೀಯಗಳನ್ನು ನೀಡಿ ಹೈಡ್ರೇಟೆಡ್ ಆಗಿಡಿ. ಬಿಸಿಲಿನಲ್ಲಿ ಓಡಾಡುವಾಗ ಸನ್ಸ್ಕ್ರೀನ್ ಲೋಷನ್ ಬಳಸಬಹುದು.
ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದೂ ಅಗತ್ಯ. ಮೋಜು-ಮಸ್ತಿಯ ನಡುವೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದು ಬೇಡ.
ನೆನಪಿಡಿ: ಜಾತ್ರೆ ಎನ್ನುವುದು ಸಂಸ್ಕೃತಿ ಮತ್ತು ಸಂಬಂಧಗಳ ಹಬ್ಬ. ಈ ಸಂಭ್ರಮ ನಮ್ಮಲ್ಲಿ ಸುಂದರ ನೆನಪುಗಳನ್ನು ಉಳಿಸಬೇಕೇ ಹೊರತೂ ಅನಾರೋಗ್ಯವನ್ನಲ್ಲ. “ಆರೋಗ್ಯವೇ ಭಾಗ್ಯ” ಎಂಬ ಮಾತು ಜಾತ್ರೆಯ ಮೋಜಿನಲ್ಲೂ ಅನ್ವಯವಾಗುತ್ತದೆ. ಸ್ವಲ್ಪ ಜಾಗರೂಕತೆಯಿಂದ ಹೆಜ್ಜೆ ಇಟ್ಟರೆ, ಜಾತ್ರೆಯ ಸಂಭ್ರಮವನ್ನು ಪೂರ್ಣವಾಗಿ ಸವಿಯಬಹುದು.
-ಡಾ ಸೌಮ್ಯ ಕೆ.ವಿ.
ಯಲ್ಲಾಪುರ.