ಭಟ್ಕಳ: ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನದ ದೂರು ದಾಖಲಾಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಭಟ್ಕಳ ಗ್ರಾಮೀಣ ಪೊಲೀಸರು, ಖಚಿತ ಮಾಹಿತಿಯ ಆಧಾರದಲ್ಲಿ ಆರೋಪಿಯನ್ನು ಬಂಧಿಸಿ ಕಳುವಾದ ಬೈಕ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಏಪ್ರಿಲ್ 28, 2026ರಂದು ಮಧ್ಯರಾತ್ರಿ 12.30ರಿಂದ ಬೆಳಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ, ಹೆಬಳೆ ಸಮೀಪದ ನೆರ್ಲೆಸರಿನಲ್ಲಿ ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಪರ್ಲ್ ಮೆಟಾಲಿಕ್ ಬಣ್ಣದ ಬಜಾಜ್ ಪಲ್ಸರ್ NS200 ಬೈಕ್ ಕಳವಾಗಿತ್ತು. ಸುಮಾರು ₹70 ಸಾವಿರ ಮೌಲ್ಯದ ಬೈಕ್ ಕಳವು ಪ್ರಕರಣ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ವಿಶೇಷ ಪತ್ತೆ ತಂಡವನ್ನು ರಚಿಸಿ ಮಾಹಿತಿ ಕಲೆಹಾಕಿದರು. ಖಚಿತ ಸುಳಿವಿನ ಮೇರೆಗೆ ಫಿರ್ದೋಸ್ ನಗರದ ಸೈಯದ್ ಅಲಿ ಸೈಯದ್ ರೆಹಮತುಲ್ಲಾ (22) ಎಂಬ ಆರೋಪಿಯನ್ನು ಬಂಧಿಸಿದರು. ಆತನಿಂದ ಕಳುವಾಗಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. (IPS), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ್ ಬಿ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವೆಂಕಟೇಶ ಮುರನಾಳ ಅವರ ನೇತೃತ್ವದಲ್ಲಿ ಪಿಎಸ್‌ಐ ಭರಮಪ್ಪ ಬೆಳಗಲಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಂಜುನಾಥ ಗೊಂಡ, ಈರಣ್ಣ ಪೂಜೇರಿ, ಬಾಗಪ್ಪ ಕಡಕಲ್ ಮತ್ತು ನಿಂಗನಗೌಡ ಪಾಟೀಲ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.