Join WhatsApp Group
Ad
Home Local News ಕಳಚೆಯಲ್ಲಿ ಭೂಕುಸಿತವಲ್ಲ, ರಸ್ತೆಗೆ ಬಂಡೆಕಲ್ಲು ಜಾರಿತ್ತು

ಕಳಚೆಯಲ್ಲಿ ಭೂಕುಸಿತವಲ್ಲ, ರಸ್ತೆಗೆ ಬಂಡೆಕಲ್ಲು ಜಾರಿತ್ತು

0
7

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಭೂಕುಸಿತ ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿರುವ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದೆ ಎಂಬ ವರದಿಗಳ ಕುರಿತು ಸ್ಥಳೀಯ ನಿವಾಸಿ ಪ್ರಮೋದ್ ಹೆಬ್ಬಾರ ಸ್ಪಷ್ಟನೆ ನೀಡಿದ್ದು, ಗ್ರಾಮದಲ್ಲಿ ಯಾವುದೇ ಭೂಕುಸಿತ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

ಕಳಚೆಯಲ್ಲಿ ಎಲ್ಲಿಯೂ ಭೂಕುಸಿತವಾಗಿಲ್ಲ. ಭಾರೀ ಮಳೆಯಿಂದ ರಸ್ತೆಯ ಮೇಲ್ಭಾಗದಿಂದ ಮಣ್ಣು, ಕೆಲವು ಬಂಡೆಕಲ್ಲುಗಳು ಜಾರಿ ರಸ್ತೆಗೆ ಬಿದ್ದಿವೆ ಅಷ್ಟೇ. ಈ ಹಿಂದೆ ತಳಕೆಬೈಲು–ಹೆಬ್ಬಾರಕುಂಬ್ರಿ ಮಧ್ಯೆಯೂ ಇದೇ ರೀತಿಯಾಗಿ ಬಂಡೆಕಲ್ಲುಗಳು ರಸ್ತೆಗೆ ಬಿದ್ದಿದ್ದವು. ಆ ಕಲ್ಲುಗಳು ಈಗಲೂ ರಸ್ತೆ ಬದಿಯಲ್ಲಿವೆ ಎಂದು ಅವರು ಹೇಳಿದ್ದಾರೆ.

Ad

ಗ್ರಾಮದಲ್ಲಿ ಯಾವುದೇ ಆತಂಕದ ವಾತಾವರಣ ಇಲ್ಲ. ಜನಜೀವನ ಎಂದಿನಂತೆ ಸಾಗುತ್ತಿದ್ದು, ಬಸ್ ಸಂಚಾರ, ವಿದ್ಯುತ್ ಪೂರೈಕೆ ಸೇರಿದಂತೆ ಯಾವುದೇ ಮೂಲಭೂತ ಸೇವೆಗೆ ಅಡಚಣೆ ಉಂಟಾಗಿಲ್ಲ. ಊರು ದೇವರ ದಯೆಯಿಂದ ಸುಭಿಕ್ಷವಾಗಿದೆ. ಗ್ರಾಮಸ್ಥರು ಭಯಭೀತರಾಗಿಲ್ಲ. ಎಲ್ಲ ಚಟುವಟಿಕೆಗಳು ಸಹಜವಾಗಿಯೇ ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಕಳಚೆ ಪ್ರದೇಶವನ್ನು ಭೂಕುಸಿತ ಅಪಾಯ ವಲಯ (Hotspot) ಎಂದು ಗುರುತಿಸಿರುವ ಹಿನ್ನೆಲೆಯಲ್ಲಿ, ಹಿಂದೆ ಸಂಭವಿಸಿದ್ದ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಹಾಗೂ ಗ್ರಾಮಸ್ಥರಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ʻಕೆನರಾ ನೆಕ್ಸ್ಟ್ʼ ಸೇರಿದಂತೆ ಮಾಧ್ಯಮಗಳು ಪ್ರಕಟಿಸಿದ ವರದಿಯನ್ನೂ ಅವರು ಸಮರ್ಥಿಸಿಕೊಂಡಿದ್ದಾರೆ. ಮಾಧ್ಯಮಗಳು ತಮ್ಮ ಕರ್ತವ್ಯವನ್ನೇ ನಿರ್ವಹಿಸಿವೆ. ಇಂತಹ ಘಟನೆಗಳ ಬಗ್ಗೆ ವರದಿ ಮಾಡುವುದರಿಂದ ಆಡಳಿತದ ಗಮನ ಸೆಳೆದು ಅಗತ್ಯ ನೆರವು ಹಾಗೂ ಮೂಲಸೌಕರ್ಯಗಳು ಗ್ರಾಮಕ್ಕೆ ದೊರೆಯುವ ಸಾಧ್ಯತೆ ಹೆಚ್ಚಾಗುತ್ತದೆ.

ವರದಿ ಮಾಡದಿದ್ದರೂ ಸಾರ್ವಜನಿಕರು ಪ್ರಶ್ನಿಸುತ್ತಾರೆ, ವರದಿ ಮಾಡಿದರೂ ಪ್ರಶ್ನಿಸುತ್ತಾರೆ. ಆದ್ದರಿಂದ ಮಾಧ್ಯಮಗಳು ಸುದ್ದಿ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪ್ರಮೋದ್ ಹೆಬ್ಬಾರ ಅಭಿಪ್ರಾಯಪಟ್ಟಿದ್ದಾರೆ.

Previous articleಹಳೇ ದ್ವೇಷ; ಮಾರಣಾಂತಿಕ ಹಲ್ಲೆ
Next articleಎಟಿಎಂ ಪಿನ್‌ ಕೇವಲ 4 ಅಂಕಿಗಳೇ ಯಾಕೆ?
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!